ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ: ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅಮಾನತು
ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.;
ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಿಸಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸದೇ, ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ, ಉದ್ಘಾಟನಾ ಕಾರ್ಯಕ್ರಮ ಮಾಡಿರುವ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ.
ಥೀಮ್ ಪಾರ್ಕ್ ನಿರ್ಮಾಣಕ್ಕೆ 11.5 ಕೋಟಿ ರೂ. ಮಂಜೂರಾಗಿ 6.72 ಕೋಟಿ ರೂ.ಅನುದಾನ ಬಿಡುಗಡೆಯಾಗಿತ್ತು. ಆದರೆ ತರಾತುರಿಯಲ್ಲಿ ಉದ್ಘಾಟಿಸಿದ ಕಾರಣ ಕಾಮಗಾರಿಯ ಗುಣಮಟ್ಟ ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಕಾಮಗಾರಿಯ ಬಗ್ಗೆ ಪೊಲೀಸ್ ಇಲಾಖೆ ಹಾಗೂ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ವಿಚಾರಣಾ ಆಯೋಗ ತನಿಖೆ ನಡೆಸುತ್ತಿದ್ದು, ತನಿಖೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಅರುಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದೂ ಹೇಳಲಾಗಿದೆ.
ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಅವರ ವೈಯಕ್ತಿಕ ಮುತುವರ್ಜಿಯಿಂದ ನಿರ್ಮಾಣಗೊಂಡ ಕಂಚಿನದ್ದೆನ್ನಲಾದ ಪರಶುರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್ 2023ರ ಜನವರಿ ತಿಂಗಳಲ್ಲಿ ತರಾತುರಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡಿತ್ತು. ಕಂಚಿನ ಪ್ರತಿಮೆ ನಿರ್ಮಾಣವೆಂದು ಯೋಜನೆಯಲ್ಲಿ ಹೇಳಲಾಗಿದ್ದರೂ ವಾಸ್ತವವಾಗಿ ಅಲ್ಲಿ ನಿರ್ಮಾಣ ಮಾಡಿದ್ದು ತಗಡಿನ ಹಾಳೆಗಳನ್ನು ಬಳಸಿದ ಪ್ರತಿಮೆಯಾಗಿತ್ತು. ಅಲ್ಲದೆ, ಇಡೀ ಪಾರ್ಕ್ ನಿರ್ಮಾಣದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ಕೂಡ ಪತ್ತೆಯಾಗಿತ್ತು.
2023ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತಿದ್ದಂತೆ ಇಡೀ ಪ್ರಕರಣ ಸಂಶಯದ ಸುಳಿಗೆ ಸಿಲುಕಿದ್ದು, ಅಕ್ರಮ ಹಾಗೂ ಅವ್ಯವಹಾರದ ಆರೋಪಗಳು ಪುರಾವೆಗಳೊಂದಿಗೆ ಹೊರ ಬರತೊಡಗಿದ್ದವು. ಅದರ ಸಮಗ್ರ ತನಿಖೆಗಾಗಿ ಕಾರ್ಕಳದಲ್ಲಿ ನಾಗರಿಕ ಸಂಘಟನೆಗಳು ಧರಣಿ ನಡೆಸಿದ್ದರೆ, ಬಳಿಕ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ, ಪ್ರತಿಭಟನೆಗೆ ಮುಂದಾಗಿತ್ತು.