ಬೆಳಗಾವಿ ಸಮಾವೇಶ | ಕೆಪಿಸಿಸಿ ಸಭೆಗೆ ಗೃಹ ಸಚಿವ ಪರಮೇಶ್ವರ, ಕೆ ಎನ್ ರಾಜಣ್ಣ ಗೈರು

ಸಮಾವೇಶದ ಕುರಿತ ಸಭೆಗೆ ಗೃಹ ಸಚಿವ ಜಿ. ಪರಮೇಶ್ವರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೈರಾಗಿದ್ದರು.;

Update: 2025-01-14 05:24 GMT
ʼಜೈ ಬಾಪು-ಜೈ ಭೀಮ್-ಜೈ ಸಂವಿಧಾನʼ ಬೆಳಗಾವಿ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.

ಬೆಳಗಾವಿಯಲ್ಲಿ 21ರಂದು ನಡೆಯಲಿರುವ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಸಮಾವೇಶದ ಕುರಿತ ಕೆಪಿಸಿಸಿ ಸರ್ವ ಸದಸ್ಯರ ಸಭೆ ಸೋಮವಾರ (ಜ.13) ರಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆಯಿತು. ಆದರೆ ಈ ಸಭೆಗೆ ಗೃಹ ಸಚಿವ ಡಾ ಜಿ. ಪರಮೇಶ್ವರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೈರಾಗಿದ್ದರು. ಈ ಮೂಲಕ  ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಎಐಸಿಸಿ ವತಿಯಿಂದ ನಡೆಯಬೇಕಾಗಿದ್ದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಸಮಾವೇಶವನ್ನು ಜನವರಿ 21ಕ್ಕೆ ಮುಂದೂಡಲಾಗಿತ್ತು. ಇದೀಗ ಈ ಸಮಾವೇಶದ ಪೂರ್ವಭಾವಿಯಾಗಿ ಕೆಪಿಸಿಸಿಯ 'ಭಾರತ್ ಜೋಡೊ' ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳ 20 ತಿಂಗಳ ಕಾರ್ಯವೈಖರಿ ವರದಿಯನ್ನು ಸುರ್ಜೇವಾಲಾಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, 'ಪಕ್ಷದ ನಾಯಕರು ಶಿಸ್ತು ಪಾಲಿಸದಿದ್ದರೆ ಕಾರ್ಯಕರ್ತರು ಶಿಸ್ತಿನಿಂದ ಇರಲು ಹೇಗೆ ಸಾಧ್ಯ? ನಮ್ಮ ಪಕ್ಷದ ನಾಯಕರ ಪೈಕಿ ಕೆಲವರು ಶಿಸ್ತು ಪಾಲಿಸುತ್ತಿಲ್ಲ. ಯಾವ ನಾಯಕರೂ ಪಕ್ಷವನ್ನು 'ಬುಲ್ಲೋಜ್' ಮಾಡಬೇಡಿ. ಪಕ್ಷಕ್ಕಿಂತ ನಾವು ದೊಡ್ಡವರು ಎಂದು ಯಾರೂ ಭಾವಿಸಬೇಡಿ' ಎಂದು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದರು. 

'ನಾಯಕರ ಭಾವನೆ ಅರ್ಥವಾಗುತ್ತದೆ. ಆದರೆ, ಪಕ್ಷ ತಾಯಿ ಇದ್ದಂತೆ. ಸರ್ಕಾರ ಎನ್ನುವುದು ಮಗು. ಸಚಿವರು, ಶಾಸಕರು, ನಾಯಕರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು' ಎಂದು ಸಚಿವರಿಗೆ ತಾಕೀತು ಮಾಡಿದರು' ಎಂದು ಗೊತ್ತಾಗಿದೆ. 'ವೈಯಕ್ತಿಕ ನೆಲೆಯಲ್ಲಿ ಜಾತಿ ಸಮಾವೇಶಗಳನ್ನು ಮಾಡಲು ಯಾರಿಗೂ ಅವಕಾಶ ಇಲ್ಲ. ಅಂತಹ ಸಮಾವೇಶಗಳನ್ನು ಪಕ್ಷದಿಂದಲೇ ಆಯೋಜಿಸಲಾಗುವುದು. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಕೂಡಾ ಪಕ್ಷದ ತೀರ್ಮಾನ. ಪಕ್ಷದ ತೀರ್ಮಾನಗಳ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕ್ರಮ ಖಚಿತ' ಎಂದು ಎಚ್ಚರಿಕೆಯನ್ನೂ ನೀಡಿದರು.

 ಗೈರಾದ ಸಚಿವರು

ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾಗ ಸಚಿವ ಸತೀಶ ಜಾರಕಿಹೊಳಿ ಜ. 2ರಂದು ಆಯೋಜಿಸಿದ್ದ ಔತಣಕೂಟ ಸಭೆಯಲ್ಲಿ ಮುಖ್ಯಮಂತ್ರಿ, ಕೆಲವು ಸಚಿವರು, ಶಾಸಕರು ಭಾಗವಹಿಸಿದ್ದರು. ಈ ಬೆನ್ನಲ್ಲೆ, ಪರಮೇಶ್ವರ ಅವರು ತಮ್ಮ ಸಮುದಾಯದ (ಎಸ್‌ಸಿ, ಎಸ್‌ಟಿ) ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಆಯೋಜಿಸಲು ಮುಂದಾಗಿದ್ದರು. ಈ ಸಭೆಯ ಬಗ್ಗೆ ಡಿ.ಕೆ. ಶಿವಕುಮಾರ್ ನೀಡಿದ ದೂರು, ಪಕ್ಷದೊಳಗೆ ಗುಂಪುಗಾರಿಕೆ ಸಾಧ್ಯತೆಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ವರಿಷ್ಠರು ಮಧ್ಯಪ್ರವೇಶಿಸಿ ಸಭೆಯನ್ನು ರದ್ದುಗೊಳಿಸಿದ್ದರು. ಇದರಿಂದ ಬೇಸರಗೊಂಡಿದ್ದ ಪರಮೇಶ್ವರ ಮತ್ತು ಕೆ.ಎನ್. ರಾಜಣ್ಣ ಸಭೆಗೆ ಗೈರಾದರು ಎಂದು ತಿಳಿದುಬಂದಿದೆ. ಬೆಳಗಿನ ಸಭೆಗೆ ಗೈರಾಗಿದ್ದ ಜಿ. ಪರಮೇಶ್ವರ ಹಾಗೂ ಕೆ.ಎನ್. ರಾಜಣ್ಣ ಅವರು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.

Tags:    

Similar News