ಮೆಟ್ರೋದಲ್ಲಿ ಪಾನ್‌ ಮಸಾಲ, ಗುಟ್ಕಾ ಜಗಿದರೆ ಬೀಳುತ್ತೆ ದಂಡ

ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ಸುರಕ್ಷತೆ ಹಾಗೂ ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ನಿಯಮಗಳ ಕುರಿತು ಪ್ರಯಾಣಿಕರಿಗೆ ತಿಳಿಸುತ್ತಲೇ ಬಂದಿದೆ.;

Update: 2025-04-23 12:56 GMT

ನಮ್ಮ ಮೆಟ್ರೋ (ಎಕ್ಸ್‌ ಖಾತೆಯಿಂದ)

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಪ್ರಯಾಣಿಕನೊಬ್ಬ ಗುಟ್ಕಾ ಹಾಕಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಎಂಆರ್‌ಸಿಎಲ್, ಮೆಟ್ರೋ ನಿಲ್ದಾಣ ಹಾಗೂ  ರೈಲುಗಳ ಒಳಗೆ ತಂಬಾಕು ಆಧರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸಲು ನಿರ್ಧರಿಸಿದೆ.

ಮೆಟ್ರೋ ನಿಲ್ದಾಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಸಮಯಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ʼನಮ್ಮ ಮೆಟ್ರೋʼ ನಿರ್ಧರಿಸಿದೆ. ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ. ತಪ್ಪಿದಲ್ಲಿ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ.

ಗುಟ್ಕಾ, ಪಾನ್‌ ಮಸಾಲದಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಿಂದಾಗೆ ತಪಾಸಣೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

'ತಂಬಾಕು ಬಳಸುವ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರಯಾಣಿಕರ ನಡವಳಿಕೆ ಗಮನಿಸುವುದರ ಜತೆಗೆ ನಿಯಮಗಳು ಉಲ್ಲಂಘಿಸಿದ ಕೂಡಲೇ ಸಂಬಂಧಿಸಿದ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ' ಎಂದು ನಮ್ಮ ಮೆಟ್ರೋ ತಿಳಿಸಿದೆ.

ಹೆಚ್ಚುವರಿಯಾಗಿ ಎಲ್ಲಾ ಮೆಟ್ರೋ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಹೆಚ್ಚು ಉತ್ತಮ ಪ್ರಯಾಣದ  ಅನುಭವ ಒದಗಿಸಲು ಆವರಣದಲ್ಲಿ ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಲು ಬಿಎಂಆರ್‌ಸಿಎಲ್ ಯೋಜನೆ ಕೈಗೊಂಡಿದೆ ಎಂದು ಮೆಟ್ರೊದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ. 

Tags:    

Similar News