Pampa Award | ವಿವಿಧ ಪ್ರಶಸ್ತಿ ಘೋಷಣೆ; ಬಿ ಎ ವಿವೇಕ ರೈಗೆ ಪಂಪ, ಗುಂಜಾಳರಿಗೆ ಬಸವ ಪ್ರಶಸ್ತಿ

2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಕಟಿಸಿದ್ದಾರೆ.;

Update: 2025-02-13 11:29 GMT
ಗುಂಜಾಳ, ಡಾ ಬಿ ಎ ವಿವೇಕ್‌ ರೈ ಹಾಗೂ ಹೇಮಾ ಪಟ್ಟಣಶೆಟ್ಟಿ

ಪಂಪ, ಬಸವ ಸೇರಿದಂತೆ 2024-25ನೇ ಸಾಲಿನ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಪಂಪ ಪ್ರಶಸ್ತಿಗೆ ಹಿರಿಯ ಚಿಂತಕ ಡಾ ಬಿ ಎ ವಿವೇಕ ರೈ ಹಾಗೂ ಬಸವ ಪುರಸ್ಕಾರಕ್ಕೆ ಧಾರವಾಡ ಜಿಲ್ಲೆಯ ಕೋಳಿವಾಡ ಗ್ರಾಮದ ಡಾ. ಎಸ್.ಆರ್. ಗುಂಜಾಳ ಅವರು ಭಾಜನರಾಗಿದ್ದಾರೆ.

ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ

ಕನ್ನಡದ ಖ್ಯಾತ ಸಂಶೋಧಕ ಡಾ. ಬಿ.ಎ. ವಿವೇಕ ರೈ ಅವರಿಗೆ 2024-25 ನೇ ಸಾಲಿನ ಪಂಪ ಪ್ರಶಸ್ತಿ ಸಂದಿದೆ. 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಕನ್ನಡ-ತುಳು ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ್ದರು.

12ಕ್ಕೂ ಹೆಚ್ಚು ಮಹತ್ವದ ಕೃತಿಗಳು, ಕಾದಂಬರಿಗಳು, ಹಲವಾರು ಕೃತಿಗಳ ಸಂಪಾದನೆ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚನೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ಹೀಗೆ ವಿಪುಲವಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಜರ್ಮನಿಯ ವ್ಯೂತ್ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.

ಗುಂಜಾಳ ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ 

ಸಂಶೋಧಕರೂ ಆಗಿರುವ ಲೇಖಕ ಡಾ.ಎಸ್.ಆರ್.ಗುಂಜಾಳ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬಸವ ರಾಷ್ಟ್ರೀಯ ಪುರಸ್ಕಾರವನ್ನು ನೀಡಲಾಗಿದೆ. ಅಧ್ಯಾಪನದ ಜೊತೆಗೆ ಸಂಶೋಧನೆ-ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. 72 ಕೃತಿಗಳು, 150 ಲೇಖನಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಗುರುವಾರ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.

ಕೆ. ರಾಜಕುಮಾರ್ ಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

45 ವರ್ಷಗಳಿಂದ ನಾಡು-ನುಡಿ, ನೆಲ-ಜಲ-ಸಂಸ್ಕೃತಿಯ ಕುರಿತು ನಿರಂತರ ಸೇವೆ ಸಲ್ಲಿಸುತ್ತಿರುವ ಕೆ. ರಾಜಕುಮಾರ್ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಘೋಷಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳಲ್ಲಿ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದಿಗೂ ಕನ್ನಡ ಭಾಷೆಯ ಕುರಿತಂತೆ ಕರೆಮಾಡಿ ಮಾಹಿತಿ ಕೋರುವವರಿಗೆ ಉಚಿತ ಮಾರ್ಗದರ್ಶನ ನೀಡುತ್ತಿದಾರೆ.

ಹೇಮಾ ಪಟ್ಟಣಶೆಟ್ಟಿಗೆ ಅಕ್ಕಮಹಾದೇವಿ ಪ್ರಶಸ್ತಿ

ಡಾ. ಹೇಮಾ ಪಟ್ಟಣಶೆಟ್ಟಿ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿಯಾಗಿ, ಅನುವಾದಕಿಯಾಗಿ, ರಂಗನಟಿಯಾಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. 1979 ರಲ್ಲಿ ಅನನ್ಯ ಪ್ರಕಾಶನವನ್ನು ಸ್ಥಾಪಿಸಿ ಕನ್ನಡದ ಖ್ಯಾತ ಲೇಖಕರ 85 ಕೃತಿಗಳನ್ನು ಪ್ರಕಟಿಸಿದ್ದಾರೆ.

ಇವರು 'ವೇಶೈಯರು, ಬಾಲವೇಶೈಯರು ಮತ್ತು ವೇಶ್ಯಾಮಕ್ಕಳ ಅಧ್ಯಯನ ಸಮಿತಿʼಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಕರ್ನಾಟಕದ ಸರ್ಕಾರದ 'ಜಲಸಂವರ್ಧನೆ ಯೋಜನಾ ಕೇಂದ್ರ'ದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ

ವಿಶ್ರಾಂತ ಶಾಲಾ ಶಿಕ್ಷಕ ಸ. ರಘುನಾಥ ಅವರು ಅಧ್ಯಯನ, ಅಧ್ಯಾಪನಗಳ ಜೊತೆಗೆ ಸಾಹಿತ್ಯ ಕೃಷಿ ಮೈಗೂಡಿಸಿಕೊಂಡಿದ್ದು, ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಸಂದಿದೆ. ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜನಪದ ಸಾಹಿತ್ಯ ಸಂಗ್ರಹ, ಗ್ರಂಥ ಸಂಪಾದನೆ, ಶಿಶುಸಾಹಿತ್ಯ ಮತ್ತು ನಿಘಂಟು ರಚನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಲೋಕೇಶ್‌ಗೆ ಬಿ.ವಿ. ಕಾರಂತ ಪ್ರಶಸ್ತಿ

ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಜೆ. ಲೋಕೇಶ್ ಅವರು 1972 ರಲ್ಲಿ 'ರಂಗಸಂಪದ' ನಾಟಕ ಸಂಸ್ಥೆಯನ್ನು ಕಟ್ಟಿಬೆಳೆಸಿದರು. ಅವರ ರಂಗಭೂಮಿಯ ಕೊಡುಗೆಗಾಗಿ ಅವರಿಗೆ ಬಿ ವಿ ಕಾರಂತ ಪ್ರಶಸ್ತಿ ಘೋಷಿಸಲಾಗಿದೆ.

ನಾಟಕದ ಸಾಹಿತ್ಯ ರಚನೆ, ಪ್ರಕಟಣೆ, ಪ್ರಯೋಗ, ಸಂಕಿರಣ, ಪ್ರದರ್ಶನ ಸಮ್ಮೇಳನ ಚಳವಳಿಗಳ ರೂವಾರಿಯಾಗಿದ್ದರು. ಕೆನಡಾದಲ್ಲಿ ನಡೆದ 21ನೇ ಅಂತಾರಾಷ್ಟ್ರೀಯ ರಂಗಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

Tags:    

Similar News