ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿವಾದ: ವಿಡಿಯೋ‌ ವೈರಲ್

ಬಿಗಿಯಾದ ಭದ್ರತಾ ವಲಯದಲ್ಲಿ ಇಂತಹ ಧಾರ್ಮಿಕ ಚಟುವಟಿಕೆಗೆ ಹೇಗೆ ಅವಕಾಶ ನೀಡಲಾಯಿತು ಎಂದು ಬಿಜೆಪಿ ಭದ್ರತೆ ಮತ್ತು 'ಎರಡು ಮಾನದಂಡಗಳ' ವಿಷಯವನ್ನು ಎತ್ತಿದೆ.

Update: 2025-11-10 09:05 GMT

ನಮಾಝ್‌ ಮಾಡುತ್ತಿರುವ ದೃಶ್ಯ 

Click the Play button to listen to article

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ ಸಲ್ಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ. "ಹೆಚ್ಚಿನ ಭದ್ರತೆ ಇರುವ ವಿಮಾನ ನಿಲ್ದಾಣದೊಳಗೆ ನಮಾಜ್ ಮಾಡಲು ಪೂರ್ವಾನುಮತಿ ಪಡೆಯಲಾಗಿದೆಯೇ? ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯಗೊಳಿಸಿರುವ ನಿಯಮ ಇಲ್ಲಿ ಅನ್ವಯವಾಗುವುದಿಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಭದ್ರತಾ ಲೋಪದ ಬಗ್ಗೆಯೂ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಸೂಕ್ಷ್ಮ ವಲಯವಾದ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹತ್ತಿರದಲ್ಲೇ ಇದ್ದರೂ, ಪ್ರಾರ್ಥನೆಯನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಆರ್‌ಎಸ್‌ಎಸ್ ಪಥಸಂಚಲನೆಗೆ ಅನುಮತಿ ಪಡೆದರೂ ಆಕ್ಷೇಪ ವ್ಯಕ್ತಪಡಿಸುವ ಸರ್ಕಾರ, ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳನ್ನು ಕಡೆಗಣಿಸುತ್ತಿರುವುದು ಏಕೆ? ಇದು ಸರ್ಕಾರದ ಎರಡು ಮಾನದಂಡಗಳನ್ನು ತೋರಿಸುತ್ತದೆ ಎಂದು ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

ಲಭ್ಯವಿರುವ ಮಾಹಿತಿಯ ಪ್ರಕಾರ, ಹಜ್ ಯಾತ್ರೆಗೆ ತೆರಳುತ್ತಿದ್ದ ತಮ್ಮ ಸಂಬಂಧಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ಟರ್ಮಿನಲ್ 2 ರ ತೆರೆದ ಪ್ರದೇಶದಲ್ಲಿ ನಮಾಜ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಪ್ರಾರ್ಥನಾ ಕೊಠಡಿಗಳಿದ್ದರೂ, ಅವರು ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಮೌನ

ಈ ವಿವಾದದ ಕುರಿತು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಈವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ವಿಮಾನ ನಿಲ್ದಾಣದ ಆಡಳಿತವು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.

Tags:    

Similar News