Karnataka by-election | ಉಪ ಚುನಾವಣೆಯಲ್ಲಿ ದಾಖಲೆಯ ಶೇ.76.9 ರಷ್ಟು ಮತದಾನ

ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು 76.9 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.;

Update: 2024-11-14 08:37 GMT
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆದಿದೆ.
Click the Play button to listen to article

ಬುಧವಾರ ನಡೆದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ದಾಖಲೆಯ ಮತದಾನ ನಡೆದಿದ್ದು, ಒಟ್ಟು ಸರಾಸರಿ ಶೇ.76.9ರಷ್ಟು ಮತದಾನ ನಡೆದಿದೆ.

ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಸುಮಾರು 770 ಮತಗಟ್ಟೆಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದರು.

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಅತಿ ಹೆಚ್ಚು; ಅಂದರೆ ಶೇ.88.80ರಷ್ಟು ಮತದಾನವಾಗಿದೆ. ಶಿಗ್ಗಾವಿಯಲ್ಲಿ ಶೇ.80.48 ಮತ್ತು ಸಂಡೂರಿನಲ್ಲಿ ಶೇ.76.24ರಷ್ಟು ಮತದಾನವಾಗಿದೆ. ಕಳೆದ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶಿಗ್ಗಾವಿ ಮತ್ತು ಚನ್ನಪಟ್ಟಣದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದು, ಸಂಡೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ಇಳಿಮುಖವಾಗಿದೆ.

ಚನ್ನಪಟ್ಟಣದಲ್ಲಿ ಅತಿ ಹೆಚ್ಚು; ಅಂದರೆ 31 ಅಭ್ಯರ್ಥಿಗಳು ಕಣದಲ್ಲಿದ್ದರೆ, ಸಂಡೂರಿನಲ್ಲಿ ಆರು ಮತ್ತು ಶಿಗ್ಗಾವಿಯಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರು. ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದರೆ, ಚನ್ನಪಟ್ಟಣದಲ್ಲಿ ಎನ್‌ಡಿಎ ಭಾಗವಾಗಿರುವ ಜೆಡಿಎಸ್‌- ಕಾಂಗ್ರೆಸ್‌ ನಡುವೆ ಪೈಪೋಟಿ ಇತ್ತು. ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಮತಯಂತ್ರಗಳನ್ನು ಎಣಿಕೆ ಕೇಂದ್ರದಲ್ಲಿ ಭದ್ರವಾಗಿಡಲಾಗಿದ್ದು, ಇದೇ ತಿಂಗಳು 23ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ. 

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣವನ್ನು 'ಹೈ ವೋಲ್ಡೇಜ್‌' ಕ್ಷೇತ್ರ ಎಂದು ಪರಿಗಣಿಸಲಾಗಿದ್ದು, ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಸಿ ಪಿ ಯೋಗೇಶ್ವರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ಸ್ಪರ್ಧೆ ಇತ್ತು. ಸಂಡೂರಿನಲ್ಲಿ ಬಳ್ಳಾರಿ ಸಂಸದ ಇ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಕಾಂಗ್ರೆಸ್‌ ಹುರಿಯಾಳಾಗಿ ಮಾಜಿ ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರ ಆಪ್ತ ಬಂಗಾರು ಹನುಮಂತು ವಿರುದ್ಧ ಸ್ಪರ್ಧಿಸಿದ್ದಾರೆ. ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಯಾಸೀರ್‌ ಖಾನ್‌ ಪಠಾಣ್‌ ಕಣಕ್ಕಿಳಿದಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡ ಬೆನ್ನಲ್ಲೇ ಇವಿಎ ಯಂತ್ರಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ಇಡಲಾಗಿದೆ. ಸಿಆರ್ಪಿಎಫ್ ಯೋಧರು, ಸ್ಥಳೀಯ ಪೊಲೀಸರ ಕಣ್ಗಾವಲಿನಲ್ಲಿ ಭದ್ರಪಡಿಸಲಾಗಿದೆ. ಅಲ್ಲದೆ, ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆಯು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆಯು ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

Tags:    

Similar News