ಆಪರೇಷನ್ ಸಿಂಧೂರ್: ರಾಜ್ಯ ರಾಜಕೀಯ ನಾಯಕರ ಪ್ರತಿಕ್ರಿಯೆ ಏನು? ವಿವರ ಇಲ್ಲಿದೆ
ನಮ್ಮ ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವು ಪಹಲ್ಗಾಮ್ ದಾಳಿಯಲ್ಲಿ ಬಲಿಯಾದವರ ಕುಟುಂಬಗಳು ಮತ್ತು ಶಾಂತಿ, ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯರಿಗೂ ನ್ಯಾಯವನ್ನು ಒದಗಿಸುವ ಪ್ರತಿಜ್ಞೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.;
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್. ಅಶೋಕ್
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ʼಆಪರೇಷನ್ ಸಿಂಧೂರ್ʼ ಎಂಬ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ಒಂಬತ್ತು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ಯಶಸ್ವಿ ಕಾರ್ಯಾಚರಣೆ ಬಗ್ಗೆ ರಾಜ್ಯದ ನಾಯಕರ ಪ್ರತಿಕ್ರಿಯೆ ಇಲ್ಲಿದೆ.
"ಆಪರೇಷನ್ ಸಿಂಧೂರ್ ಹಿಂದಿರುವ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಅವರ ವೀರೋಚಿತ ಕ್ರಮವು ಭಾರತವು ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಪುನರುಚ್ಚರಿಸುತ್ತದೆ,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯು ಕೇವಲ ಮುಗ್ಧ ಜೀವಗಳ ಮೇಲೆ ಅಲ್ಲ, ಇದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿ. ನಮ್ಮ ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವು ದಾಳಿಯಲ್ಲಿ ಬಲಿಯಾದವರು, ಅವರ ಕುಟುಂಬಗಳು ಮತ್ತು ಶಾಂತಿ ಹಾಗೂ ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯರಿಗೂ ನ್ಯಾಯ ಒದಗಿಸುವ ಪ್ರತಿಜ್ಞೆಯಾಗಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ "ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಸೂಕ್ತ ಪ್ರತ್ಯತ್ತರವಾಗಿದೆ. ನಾವು ಸರ್ಕಾರ ಹಾಗೂ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ." ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಭಾರತದ ದೃಢಸಂಕಲ್ಪವನ್ನು ಕಡಿಮೆ ಅಂದಾಜು ಮಾಡುವವರಿಗೆ ಆಪರೇಷನ್ ಸಿಂಧೂರ್ ಸೂಕ್ತ ಉತ್ತರವಾಗಿದೆ. ರಾಷ್ಟ್ರವು ಒಗ್ಗಟ್ಟಿನಿಂದ, ಹೆಮ್ಮೆಯಿಂದ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಶಾಶ್ವತವಾಗಿ ಕೃತಜ್ಞರಾಗಿ ನಿಂತಿದೆ. ಜೈ ಹಿಂದ್! ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಫೆಸ್‌ಬುಕ್ ಖಾತೆಯಲ್ಲಿ "ಆಪರೇಷನ್ ಸಿಂಧೂರ್ ಹೇಡಿತನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಪ್ರತ್ಯುತ್ತರ. ಪಹಲ್ಗಾಮ್‌ನಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಹಣೆಯಿಂದ ಒರೆಸಲ್ಪಟ್ಟ ಸಿಂಧೂರಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶ. ಈ ಗೌರವಕ್ಕೆ ಎಂತಹ ಶಕ್ತಿಯುತ ಮತ್ತು ಸೂಕ್ತವಾದ ಹೆಸರು" ಜೈ ಹಿಂದ್ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ "ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಅಮಾಯಕರ ಭಾರತೀಯರ ಆತ್ಮಕ್ಕೆ ಶಾಂತಿ ದೊರಕಿಸಲಾಗಿದೆ. ಆಪರೇಷನ್ ಸಿಂಧೂರ್‌ನಿಂದಾಗಿ ಉಗ್ರರ ಅಡಗುತಾಣಗಳು ನಾಶವಾಗಿವೆ." ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, "ನಮ್ಮ ನೆಲದಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ, ಭಯೋತ್ಪಾದಕ ಶಿಬಿರಗಳ ಮೇಲೆ ದೃಢ ನಿಶ್ಚಯ ಮತ್ತು ನಿಖರತೆಯಿಂದ ಪ್ರತಿದಾಳಿ ನಡೆಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾವು ನಮಸ್ಕರಿಸುತ್ತೇವೆ. ಪಹಲ್ಗಾಮ್ ದಾಳಿಯ ನಂತರ ಭಾರತವನ್ನು ರಕ್ಷಿಸುವ ಪ್ರತಿಯೊಂದು ನಿರ್ಣಾಯಕ ಹೆಜ್ಜೆಗೂ ಕಾಂಗ್ರೆಸ್ ನಮ್ಮ ಪಡೆಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಿಂತಿದೆ ಜೈ ಹಿಂದ್" ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಎಕ್ಸ್ ಖಾತೆಯ ಮೂಲಕ,́'' 26 ಅಮಾಯಕ ಭಾರತೀಯ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಭಯೋತ್ಪಾದಕ ರಕ್ಕಸರ ವಿರುದ್ಧದ ಪ್ರತಿಕಾರ ಆಪರೇಷನ್ ಸಿಂಧೂರ್ ಆರಂಭ," ಎಂದಿದ್ದಾರೆ.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ "ಆಪರೇಷನ್ ಸಿಂಧೂರ್ ಕೇವಲ ಒಂದು ದಾಳಿಯಾಗಿರಲಿಲ್ಲ. ಅದು ರಾಷ್ಟ್ರೀಯ ಹೆಮ್ಮೆಯ ಹಣೆಯ ಮೇಲೆ ಹಚ್ಚಿದ ಸಿಂಧೂರವಾಗಿತ್ತು. ಭಾರತದ ಈ ನಡೆಯನ್ನು ಜಗತ್ತು ನೋಡುತ್ತಿದೆ. ಇದು ಭಾರತದ ಸಾರ್ವಭೌಮತ್ವದ ಸಿಂಧೂರವಾಗಿತ್ತು. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಭೀತ ನಾಯಕತ್ವಕ್ಕೆ ನಮನಗಳು. ನವ ಭಾರತ ಎಚ್ಚರಿಸುವುದಿಲ್ಲ ಬದಲಾಗಿ ಅದು ಕಾರ್ಯನಿರ್ವಹಿಸುತ್ತದೆ." ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಟ್ವಿಟ್ ವಿರುದ್ಧ ಬಿಜೆಪಿ ಆಕೋಶ
ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರವೆಂದರೆ ಶಾಂತಿ ಎಂದು ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಪಾಕ್ ಉಗ್ರರು ಭಾರತೀಯರನ್ನು ಧರ್ಮಾಧಾರಿತವಾಗಿ ಹತ್ಯೆ ಮಾಡಿದಾಗಲೂ ಕಾಂಗ್ರೆಸ್ ಪಾಕ್ ಪರ ವಕಾಲತ್ತು ನಡೆಸಿತ್ತು. ಆಪರೇಶನ್ ಸಿಂಧೂರ್ ಮೂಲಕ ಉಗ್ರರ ನೆಲೆಗಳನ್ನು ಹುಡುಕಿ ಹೊಸಕಿ ಹಾಕಿದಾಗಲೂ ಉಗ್ರರನ್ನು ಕೊಲ್ಲಬಾರದಿತ್ತು ಎಂದು ಶಾಂತಿ ಮಂತ್ರ ಜಪಿಸುತ್ತಿದೆ. ಕೆಪಿಸಿಸಿ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವ ತಂಡದಲ್ಲಿ ಪಾಕ್ ಉಗ್ರರ ಮನಸ್ಥಿತಿಯವರು ಸೇರಿಕೊಂಡಿದ್ದಾರೆಯೇ? ಎಂದು ಆಕೋಶ ವ್ಯಕ್ತಪಡಿಸಿದೆ. ಎಲ್ಲೆಡೆ ಕಾಂಗ್ರೆಸ್ ಟ್ವಿಟ್‌ಗೆ ಆಕ್ರೋಶ ವ್ಯಕ್ತವಾದ ಕೂಡಲೆ ಎಕ್ಸ್ ಪೋಸ್ಟ್ ಡಿಲಿಟ್ ಮಾಡಲಾಗಿದೆ.