ಅಕ್ಕ ಸಮ್ಮೇಳನ ಅವಕಾಶ| ಚರ್ಚೆಗೆ ಗ್ರಾಸವಾದ ಸರ್ಕಾರದ ಮಾನದಂಡ
ಈ ಬಾರಿಯ ಅಕ್ಕ ಸಮ್ಮೇಳನಕ್ಕೆ ಕೇವಲ ದಲಿತ ಕಲಾವಿದರ ತಂಡವನ್ನು ಕಳುಹಿಸಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ಸಾಂಸ್ಕೃತಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.;
ಈ ಬಾರಿಯ ಅಕ್ಕ ಸಮ್ಮೇಳನಕ್ಕೆ ಕೇವಲ ದಲಿತ ಕಲಾವಿದರ ತಂಡವನ್ನು ಕಳುಹಿಸಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ಸಾಂಸ್ಕೃತಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ವತಿಯಿಂದ 2024ನೇ ಸಾಲಿನ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರವರೆಗೆ ವರ್ಜಿನಿಯಾ ರಾಜ್ಯದ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸುತ್ತಿರುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ
2024ನೇ ಸಾಲಿನ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಅಮೇರಿಕದಲ್ಲಿ ಜರುಗುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲಾವಿದರನ್ನೊಳಗೊಂಡ ತಂಡ ಭಾಗವಹಿಸಲು ತಗಲಬಹುದಾದ ಪ್ರಯಾಣ ಹಾಗೂ ಇತರೆ ವೆಚ್ಚಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನ ಅಡಿ ಲಭ್ಯವಿರುವ ರೂ.97.00 ಲಕ್ಷಗಳು ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆ ಅಡಿ ಲಭ್ಯವಿರುವ ರೂ.25.00 ಲಕ್ಷಗಳು ಸೇರಿದಂತೆ ಒಟ್ಟು ರೂ.1.22 ಕೋಟಿಗಳಲ್ಲಿ ರೂ. 38,25,000/-ಗಳ ಅನುದಾನವನ್ನು ಮಂಜೂರು ಮಾಡಿ ಸರ್ಕಾರದ ಆದೇಶ ಹೊರಡಿಸುವಂತೆ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ.
ಅದರನ್ವಯ, ಮೇಲೆ ಓದಲಾದ ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ವತಿಯಿಂದ 2024ನೇ ಸಾಲಿನ ಆಗಸ್ಟ್ 30, 31 ಮತ್ತು ಸೆಪ್ಟಂಬರ್ 1ರವರೆಗೆ ವರ್ಜಿನಿಯಾ ರಾಜ್ಯದ ಗ್ರೇಟರ್ ರಿಚ್‌ಮಂಡ್ ಕನ್ವೆಂಷನ್ ಸೆಂಟರ್‌ನಲ್ಲಿ ಆಯೋಜಿಸುತ್ತಿರುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ 17 ಜನ ದಲಿತ ಕಲಾವಿದರನ್ನು ಕಳುಹಿಸಲು ತಗಲಬಹುದಾದ ವೆಚ್ಚ ರೂ.43,35,000/- ಗಳನ್ನು ಪರಿಶಿಷ್ಟ ಜಾತಿ ಉಪಯೋಜನೆ ಲೆಕ್ಕಶೀರ್ಷಿಕೆ:2205-00-800-0-15-422ರಡಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಲೆಕ್ಕಶೀರ್ಷಿಕೆ:2205-00-800-0-15-423ರಡಿ ಲಭ್ಯವಿರುವ ಅನುದಾನದಿಂದ ಭರಿಸಿ ಬಿಡುಗಡೆ ಮಾಡಲು ಅನುಮೋದನೆ ನೀಡಿ ಸರ್ಕಾರದ ಆದೇಶ ಹೊರಡಿಸುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿರುತ್ತಾರೆ. ಅವರ ಮನವಿ ಆಧರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 17 ಜನ ದಲಿತ ಕಲಾವಿದರ ವಿಮಾನ ಟಿಕೆಟ್, ವಿಸಾ ಹಾಗೂ ಪೋಷಾಕುಗಳ ಖರ್ಚು ವೆಚ್ಚಕ್ಕೆ 43 ಲಕ್ಷ 35 ಸಾವಿರ ಬಿಡುಗಡೆ ಮಾಡಿ ಆದೇಶ ಮಾಡಿದೆ.
ಈ ಆದೇಶದ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಷರತ್ತುಗಳು:-
1. 17 ಕಲಾವಿದರ ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಮತ್ತು ವೀಸಾ, ಏರ್ ಟಿಕೆಟ್, ವೀಸಾ ನವೀಕರಣ ಶುಲ್ಕದ ರಸೀದಿ, ಎರಡು ಕಡೆಯ ಬೋರ್ಡಿಂಗ್ ಪಾಸ್, ಕಾರ್ಯಕ್ರಮದಲ್ಲಿ ಕಲಾವಿದರು ಭಾಗವಹಿಸಿರುವುದಕ್ಕೆ ಸ್ಪಷ್ಟವಾಗಿ ಕಾಣಿಸುವಂತಹ ಭಾವಚಿತ್ರಗಳು (Photo), ವಿಡಿಯೋ ತುಣುಕುಗಳು, ಕಾರ್ಯಕ್ರಮದಲ್ಲಿ ಕಲಾವಿದರು ಭಾಗವಹಿಸಿರುವುದಕ್ಕೆ ಸಂಸ್ಥೆಯಿಂದ ಪಡೆದಿರುವ ದೃಢೀಕರಣ ಪತ್ರವನ್ನು ಸಲ್ಲಿಸಿದ ನಂತರ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸತಕ್ಕದ್ದು.
2. ವಿದೇಶದಲ್ಲಿ ಸರ್ಕಾರದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡತಕ್ಕದ್ದಲ್ಲ.
3. ಪ್ರಯಾಣದ ಅವಧಿಯಲ್ಲಿ ಯಾವುದೇ ಅವಘಡಗಳು ಉಂಟಾದಲ್ಲಿ ಕಲಾವಿದರೇ ನೇರ ಜವಾಬ್ದಾರರಾಗಿರುತ್ತಾರೆ ಹೊರತು ಸರ್ಕಾರವು ಜವಾಬ್ದಾರವಾಗಿರುವುದಿಲ್ಲ.
4. ಯಾವ ಉದ್ದೇಶಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು.
5. ಆಯೋಜಕರಿಂದ ಕಾರ್ಯಕ್ರಮ ನಡೆದಿರುವ ಬಗ್ಗೆ ವರದಿಯನ್ನು ಪಡೆದು ಸಲ್ಲಿಸತಕ್ಕದ್ದು.
6. ಮಂಜೂರು ಮಾಡಿದ ಹಣ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಲೆಕ್ಕಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪಟ್ಟಿ ಹಾಗೂ ಹಣಬಳಕೆ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವಂತೆ ಷರತ್ತು ವಿಧಿಸಲಾಗಿದೆ.
ರಾಜ್ಯ ಸರ್ಕಾರದ ಈ ಆದೇಶದ ಬಗ್ಗೆ ಸಾಂಸ್ಕೃತಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಷ್ಠಿತ ಅಕ್ಕ ಸಮ್ಮೇಳನಕ್ಕೆ ಕೇವಲ ದಲಿತ ಕಲಾವಿದರನ್ನು ಕಳುಹಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರ ಸಾಮಾನ್ಯ ವರ್ಗದ ಕಲಾವಿದರಿಗೆ ಅನ್ಯಾಯ ಮಾಡಿದಂತಾಗಿದ್ದು, ಇದು ಕಲಾವಿದರಲ್ಲಿ ಜಾತಿ ಭೇದ ಮಾಡಿದಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
"ಕರ್ನಾಟಕ ಸರ್ಕಾರದ ಮಹಾಮೋಸ ಒಂದು ವರ್ಗಕ್ಕೆ ಮಾತ್ರ ಅಮೆರಿಕಾಗೆ ಅಕ್ಕ ಸಮ್ಮೇಳನಕ್ಕೆ ಕಳಿಸಲು ಹಣ ಇದೆ, ಜನರಲ್ ಕೆಟಗರಿಯ ಯಾವುದೇ ಕಲಾವಿದರು ಗಳನ್ನು ಕಳಿಸಲಿಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಣವಿಲ್ಲವೇ ಇದು ಅನ್ಯಾಯ ಇದರ ವಿರುದ್ಧ ಹೋರಾಟ ಮಾಡಲೇಬೇಕು ಜನರಲ್ ಕೆಟಗೆರಿಯ ಕಲಾವಿದರಿಗೆ ಹಲವು ವರ್ಷಗಳಿಂದ ಈ ರೀತಿ ಪ್ರತಿ ವರ್ಷ ನಡೆಯುತ್ತಿದೆ. ಇದು ಇತರ ವರ್ಗಗಳ ಕಲಾವಿದರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ,"ಎಂದು ಕರ್ನಾಟಕ ಸಾಹಿತಿ ಚಿಂತಕರ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಕೆ.ಎಚ್. ಕುಮಾರ್ ಹೇಳಿದ್ದಾರೆ.