Bandipur Forest Road | ಬಂಡೀಪುರದಲ್ಲಿ ಬಸ್, ಆ್ಯಂಬುಲೆನ್ಸ್ಗೆ ಮಾತ್ರ ಅವಕಾಶ: ಸಚಿವ ಖಂಡ್ರೆ ಸ್ಪಷ್ಟನೆ
Bandipur Forest highway: ವನ್ಯಜೀವಿಗಳನ್ನು ರಕ್ಷಿಸಲು ರಾತ್ರಿ 9 ಗಂಟೆಯ ನಂತರ ಬಂಡೀಪುರ ಕಾಡಿನಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ.;
ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಎರಡು ಬಸ್‌ಗಳು ಮತ್ತು ಆಂಬ್ಯುಲೆನ್ಸ್ ಹೊರತುಪಡಿಸಿ ಬೇರೆಲ್ಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಬಂಡೀಪುರದಲ್ಲಿ 24/7 ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರ ಸಲಹೆಗಳಿಗೆ ಪ್ರತಿಕ್ರಿಯಿಸಿದ ಅವರು, "ವನ್ಯಜೀವಿಗಳನ್ನು ರಕ್ಷಿಸಲು ರಾತ್ರಿ 9 ಗಂಟೆಯ ನಂತರ ಬಂಡೀಪುರ ಕಾಡಿನಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ. ಆದರೂ ನಾವು ಎರಡು ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗೆ ಸೀಮಿತ ವಿನಾಯಿತಿಗಳನ್ನು ಅನುಮತಿಸಿದ್ದೇವೆ. ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ನಿರ್ಣಾಯಕ ಹುಲಿ ಅಭಯಾರಣ್ಯವಾದ ಕಾಡಿನಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಈ ಮೊದಲು ನಿಷೇಧವನ್ನು ಜಾರಿಗೊಳಿಸಲಾಗಿತ್ತು. ಆದರೆ, ಅಗತ್ಯ ಸಾರಿಗೆ ಸೇವೆಗಳಿಗಾಗಿ ಪ್ರತಿಪಾದಿಸುವ ವಿವಿಧ ರಾಜಕೀಯ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ನಿರಂತರ ಮನವಿಯ ನಂತರ ವಿನಾಯಿತಿಗಳನ್ನು ನೀಡಲಾಗಿದೆ ಎಂದಿದ್ದರು.
ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ 2 ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿರುವ ಕುರಿತು ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಆದ್ದರಿಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಮ್ಮ ಸರ್ಕಾರ ಯಾವುದೇ ಹೊಸ ಅನುಮತಿ ನೀಡಿಲ್ಲ. ಹೀಗಾಗಿ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಎರಡು ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಪ್ರಮಾಣಿಕ ಆರೋಪಗಳನ್ನು ಮಾಡುತ್ತಿವೆ. ಅವು ಜನರಿಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸುತ್ತಿವೆ’ ಎಂದು ಖಂಡ್ರೆ ಹೇಳಿದ್ದಾರೆ.
ಬಂಡೀಪುರದಲ್ಲಿ ರಾತ್ರಿ ವೇಳೆ ಬಸ್, ಆ್ಯಂಬುಲೆನ್ಸ್ಗೆ ಮಾತ್ರ ಅವಕಾಶ‘ಹಳೆ ನೀತಿ ಮುಂದುವರಿಯುತ್ತಿರುವುದನ್ನೇ ಸುಳ್ಳು ಆರೋಪ ಮಾಡಿ, ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಇದು ನಾಚಿಕೆಗೇಡಿತನದ ಕೆಲಸ. ಸುಳ್ಳು ಬಿಜೆಪಿ ಅವರ ಮನೆ ದೇವರಾಗಿದೆ. 2009ರಲ್ಲಿ ತುರ್ತು ಪರಿಸ್ಥಿತಿಗಳು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಆ್ಯಂಬುಲೆನ್ಸ್ ಸೇವೆ ಸೇರಿದಂತೆ 2 ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಇತ್ತೀಚೆಗೆ ಅದೇ ಅನುಮತಿಯನ್ನು ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಮುಂದುವರಿಸಲಾಗಿದೆ’ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲದೆ ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ. ನಮ್ಮ ಸರ್ಕಾರ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ. ವನ್ಯಜೀವಿ ಸಂರಕ್ಷಣೆಗೆ ಕಾಯ್ದೆಯನ್ನು ತಂದದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರ. ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಆದರೆ, ಬಿಜೆಪಿ ಶಾಸಕರು ದೇವರು ಎಂದು ಪೂಜಿಸುವ ಆನೆಗಳನ್ನು ಗುಂಡಿಟ್ಟು ಕೊಲ್ಲಲು ಸದನದಲ್ಲಿ ಅನುಮತಿ ಕೇಳುತ್ತಾರೆ! ಇಂತಹವರು ಈಗ ವನ್ಯಜೀವಿ ಸಂರಕ್ಷಣೆ ಬಗ್ಗೆ ಪಾಠ ಹೇಳಲು ಬರುತ್ತಿದ್ದಾರೆ. ಇದು ‘ಭೂತದ ಬಾಯಲ್ಲಿ ಭಗವದ್ಗೀತೆ’ ಓದುವಂತಾಗಿದೆ’ ಎಂದು ಅರಣ್ಯ ಸಚಿವ ಖಂಡ್ರೆ ಟೀಕಿಸಿದ್ದಾರೆ.