Honey Trap | ಹನಿಟ್ರ್ಯಾಪ್ ಬಲೆಗೆ ಬಿದ್ದವರು 40 ಅಲ್ಲ, 400 ನಾಯಕರು; ಸಚಿವ ಸತೀಶ್ ಜಾರಕಿಹೊಳಿ
ಕರ್ನಾಟಕ ಮಾತ್ರವಲ್ಲದೇ ದೆಹಲಿಯ ನಾಯಕರು ಮತ್ತು ಅಧಿಕಾರಿಗಳು ಕೂಡ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.;

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಕೋಲಾಹಲ ಇನ್ನಷ್ಟು ಕುತೂಹಲ ಕೆರಳಿಸಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ವಿಚಾರ ಅಧಿವೇಶನದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿತ್ತು.
ಇದೀಗ ಹನಿಟ್ರ್ಯಾಪ್ ಕುರಿತಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಮತ್ತೊಂದು ಸ್ಫೋಟಕ ಹೇಳಿಕೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ರಾಜ್ಯದಲ್ಲಿ ಬರೀ 40 ಅಲ್ಲ, 400 ಮಂದಿ ನಾಯಕರನ್ನು ಹನಿಟ್ರ್ಯಾಪ್ ಗೆ ಬೀಳಿಸಲಾಗಿದೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳು ಕೂಡ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹನಿಟ್ರ್ಯಾಪ್ ಜಾಲದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಸಿಲುಕಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದ ಬಳಿಕ ದೂರು ದಾಖಲಿಸುವಂತೆ ನಾನೇ ಹೇಳಿದ್ದೆ. ಈ ಹಿಂದೆ ಹನಿಟ್ರ್ಯಾಪ್ ಮಾಡಿ ಮುಖ್ಯಮಂತ್ರಿಗೇ ಬೆದರಿಕೆ ಹಾಕಿರುವ ಸಂಗತಿಗಳೂ ಇವೆ ಎಂದು ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಯಾರು ಎಂಬ ಹೆಸರು ಬಹಿರಂಗಪಡಿಸಿಲ್ಲ.
ತಮ್ಮ ಕೆಲಸ ಮಾಡಿಸಿಕೊಳ್ಳಲು ಹನಿಟ್ರ್ಯಾಪ್ ಮಾಡಿ ಅಧಿಕಾರಿಗಳನ್ನೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. 20 ವರ್ಷಗಳಿಂದಲೂ ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಂತ್ಯ ಹಾಡಬೇಕು. ದೆಹಲಿಯ ನಾಯಕರಿಗೆ ಹನಿಟ್ರ್ಯಾಪ್ ಬಲೆ ಬೀಸಿ ಅವರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಜಾರಕಿಹೊಳಿ ಆರೋಪಿಸಿದ್ದಾರೆ.
ಮಾಜಿ ಸಚಿವ ಶಾಸಕ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್‌ಗೆ ಬಲಿಯಾದವರು ಮೂರ್ಖರು ಎಂದು ಟೀಕಿಸಿದ್ದಾರೆ. ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ರಾಜಕಾರಣದಲ್ಲಿ ಇರುವವರು ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಮಾಹಿತಿ ಬಹಿರಂಗಪಡಿಸಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ರಾಜ್ಯದಲ್ಲಿ 48 ನಾಯಕರ ಸಿಡಿ, ಪೆನ್‌ಡ್ರೈವ್ ತಯಾರಾಗಿದೆ ಎಂದು ಹೇಳಿಕೆ ನೀಡಿದ್ದರು. ಹನಿಟ್ರ್ಯಾಪ್ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಗಲಾಟೆ ಎಬ್ಬಿಸಿದ್ದವು. ಗದ್ದಲ ತಹಬದಿಗೆ ಬಾರದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು, ಬಜೆಟ್ ಅಧಿವೇಶನದ ಕೊನೆಯ ದಿನ ಶುಕ್ರವಾರ 18 ಮಂದಿ ಬಿಜೆಪಿ ಶಾಸಕರನ್ನು ಸದನದಿಂದ ಆರು ತಿಂಗಳವರೆಗೆ ಅಮಾನತು ಮಾಡಿದ್ದರು.