ʼಕೈʼ ಪಾಳಯದಿಂದ ಮೇಲ್ಮನೆಗೆ ನಾಲ್ವರ ನಾಮನಿರ್ದೇಶನ; ಅಧಿಸೂಚನೆ ಹೊರಡಿಸಿದ ಸರ್ಕಾರ

ವಿಧಾನ ಪರಿಷತ್‌ಗೆ ನಾಲ್ವರ ನೇಮಕದೊಂದಿಗೆ ಪರಿಷತ್‌ನಲ್ಲಿ ಕಾಂಗ್ರೆಸ್ ಸಂಖ್ಯಾಬಲ 37ಕ್ಕೆ ಏರಿಕೆಯಾಗಲಿದೆ. ಸಭಾಪತಿ ಸೇರಿ ಬಿಜೆಪಿ 30, ಜೆಡಿಎಸ್ 7 ಸದಸ್ಯರ ಬಲ ಹೊಂದಿವೆ. ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದು, ನಿರ್ಣಾಯಕರಾಗಿದ್ದಾರೆ.;

Update: 2025-09-07 10:13 GMT

ವಿಧಾನ ಪರಿಷತ್ನಲ್ಲಿ ಕಳೆದ ಐದು ತಿಂಗಳಿಂದ ಖಾಲಿ ಉಳಿದಿದ್ದ ಸದಸ್ಯ ಸ್ಥಾನಗಳಿಗೆ ನಾಲ್ವರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಭಾನುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

1951 ರ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 74 ರ ಅನುಸಾರ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಸದಸ್ಯರ ಹೆಸರನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯೂ ಆಗಿರುವ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಡಾ. ಆರತಿ ಕೃಷ್ಣ, ಕೆಪಿಸಿಸಿ ಎಸ್ ಸಿ ಘಟಕದ ಅಧ್ಯಕ್ಷರಾಗಿರುವ ಹುಬ್ಬಳ್ಳಿಯ ಎಫ್.ಎಚ್. ಜಕ್ಕಪ್ಪನವರ್ ಮತ್ತು ಹಿರಿಯ ಪತ್ರಕರ್ತರಾದ ಮೈಸೂರಿನ ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗಿದೆ.

ನಾಲ್ವರಲ್ಲಿ ರಮೇಶ್ ಬಾಬು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈಗ ಅವರನ್ನು 2026 ಜು.21 ರವರೆಗೆ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.

ಕಳೆದ ಜೂನ್ ತಿಂಗಳಲ್ಲಿ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ಕಳುಹಿಸಿಕೊಟ್ಟಿದ್ದ ಆಯ್ಕೆಪಟ್ಟಿಯಲ್ಲಿ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಡಿಎಸ್ಎಸ್ ಮುಖಂಡ ಡಿ.ಜಿ. ಸಾಗರ್ ಹೆಸರಿತ್ತು. ಆದರೆ, ಈ ಪಟ್ಟಿಗೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಪಟ್ಟಿಯನ್ನು ತಡೆಹಿಡಿದು, ಮರುಪರಿಶೀಲನೆಗೆ ಸೂಚಿಸಿದ್ದರು.


ಕಾಂಗ್ರೆಸ್ ನ ಯು.ಬಿ. ವೆಂಕಟೇಶ್, ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್ ತಿಂಗಳಿಗೆ ಪೂರ್ಣಗೊಂಡಿತ್ತು. ಜೆಡಿಎಸ್ ಪಕ್ಷದ ಕೆ.ಎ. ತಿಪ್ಪೇಸ್ವಾಮಿ ಅವರ ಅವಧಿ ಪ್ರಸಕ್ತ ಸಾಲಿನ ಜನವರಿಗೆ ಮುಕ್ತಾಯವಾಗಿತ್ತು. ಇನ್ನು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನವೂ ತೆರವಾಗಿತ್ತು. ಈ ನಾಲ್ಕೂ ಸ್ಥಾನಗಳಿಗೆ ಈಗ ರಾಜ್ಯ ಸರ್ಕಾರ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಅಧಿಸೂಚನೆ ಹೊರಡಿಸಿದೆ.

ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತದ ಸಂಖ್ಯೆ

ವಿಧಾನ ಪರಿಷತ್‌ನಲ್ಲಿ ಮಸೂದೆಗಳಿಗೆ ಅಂಗೀಕಾರ ಪಡೆಯಲು ಈಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಸಂಖ್ಯೆ ಸಿಕ್ಕಿದೆ. ನಾಲ್ವರ ನೇಮಕದೊಂದಿಗೆ ಪರಿಷತ್‌ನಲ್ಲಿ ಕಾಂಗ್ರೆಸ್ ಸಂಖ್ಯಾಬಲ 37ಕ್ಕೆ ಏರಿಕೆಯಾಗಲಿದೆ. ಸಭಾಪತಿ ಸೇರಿ ಬಿಜೆಪಿ 30, ಜೆಡಿಎಸ್ 7 ಸದಸ್ಯರ ಬಲ ಹೊಂದಿವೆ. ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದು, ನಿರ್ಣಾಯಕರಾಗಿದ್ದಾರೆ.

ಆಯ್ಕೆಯ ಹಿಂದಿನ ಜಾತಿ,ರಾಜಕೀಯ ಲೆಕ್ಕಾಚಾರ

ರಮೇಶ್ ಬಾಬು: ಹಿಂದುಳಿದ ವರ್ಗಕ್ಕೆ ಸೇರಿದ ಬಲಿಜ ಸಮುದಾಯದವರಾಗಿದ್ದು, ಈ ಹಿಂದೆ ಜೆಡಿಎಸ್‌ನಲ್ಲಿದ್ದು,  ಪರಿಷತ್ ಸದಸ್ಯರಾಗಿದ್ದರು. ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ, ಪಕ್ಷದ ವಕ್ತಾರರಾಗಿ ಸಕ್ರಿಯರಾಗಿದ್ದಾರೆ.

ಡಾ. ಆರತಿ ಕೃಷ್ಣ: ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿದ್ದಾರೆ. ಇವರು ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ. ಎಐಸಿಸಿ ಕಾರ್ಯದರ್ಶಿಯಾಗಿ ಮತ್ತು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅನುಭವ ಹೊಂದಿದ್ದು, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಎಫ್.ಎಚ್. ಜಕ್ಕಪ್ಪನವರ್: ಪರಿಶಿಷ್ಟ ಜಾತಿಯ (ಎಡಗೈ) ಸಮುದಾಯಕ್ಕೆ ಸೇರಿದ ಇವರು, ಕಾಂಗ್ರೆಸ್ ದಲಿತ ಘಟಕದ ರಾಜ್ಯಾಧ್ಯಕ್ಷರಾಗಿ ಮತ್ತು ಟ್ರೇಡ್ ಯೂನಿಯನ್ ನಾಯಕರಾಗಿ ಕೆಲಸ ಮಾಡಿದ್ದಾರೆ.

ಡಾ. ಕೆ. ಶಿವಕುಮಾರ್: ಪರಿಶಿಷ್ಟ ಜಾತಿಯ (ಬಲಗೈ) ಸಮುದಾಯಕ್ಕೆ ಸೇರಿದವರಾಗಿದ್ದು, ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ. ಮೈಸೂರು ಮೂಲದವರಾದ ಇವರು, ಕೋಲಾರ ಜಿಲ್ಲೆಯಲ್ಲಿ ಶಿಕ್ಷಣ ಪಡೆದು ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. 'ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್‌ʼ ಪತ್ರಿಕೆಯ ಹಿರಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿಎಚ್.ಡಿ ಪದವೀಧರರೂ ಆಗಿದ್ದಾರೆ.

Tags:    

Similar News