ವೈಮಾನಿಕ ಸಮೀಕ್ಷೆಯ "ಫೋಟೋ ಶೂಟ್" ಬೇಡ, ತುರ್ತು ಪರಿಹಾರ ಘೋಷಿಸಿ- ಸಿಎಂಗೆ ಅಶೋಕ್‌ ಆಗ್ರಹ

ಸಿಎಂ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಯನ್ನು ಟೀಕಿಸಿರುವ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು, ಪ್ರಗಾಢ ನಿದ್ದೆಯಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗಲಾದರೂ ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ನೆನಪಾಯಿತಲ್ಲ, ಅದೇ ದೊಡ್ಡ ಪುಣ್ಯ ಎಂದು ಜರಿದಿದ್ದಾರೆ.

Update: 2025-09-30 05:15 GMT

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಸಿಎಂ ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಂದು ( ಮಂಗಳವಾರ) ಸಿಎಂ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿ, ಮಳೆ ಹಾನಿ ಸಂಬಂಧ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಯನ್ನು ಟೀಕಿಸಿರುವ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು, ಪ್ರಗಾಢ ನಿದ್ದೆಯಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗಲಾದರೂ ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ನೆನಪಾಯಿತಲ್ಲ, ಅದೇ ದೊಡ್ಡ ಪುಣ್ಯ ಎಂದು ಜರಿದಿದ್ದಾರೆ. 

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜನರಿಗೆ ಬೇಕಿರುವುದು ನಿಮ್ಮ ವೈಮಾನಿಕ ಸಮೀಕ್ಷೆಯ "ಫೋಟೋ ಶೂಟ್" ಅಲ್ಲ, ತುರ್ತು ಪರಿಹಾರ. ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ನಿಮ್ಮ ವೈಮಾನಿಕ ಸಮೀಕ್ಷೆ ಮತ್ತೊಂದು 'ಕಾಟಾಚಾರದ ಸಮೀಕ್ಷೆ' ಆಗಬಾರದು ಎನ್ನುವುದು ಜನರ ನಿರೀಕ್ಷೆ. ನಿಮ್ಮ ವಿಮಾನ ಟೇಕಾಫ್ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್ ಆಗಲಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ಪ್ರತಿ ಕುಟುಂಬಕ್ಕೆ 50 ಸಾವಿರ ರೂ. ತುರ್ತು ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಉಸ್ತುವಾರಿ ಸಚಿವರು ಗ್ರಾಮಗಳಿಗೆ ಭೇಟಿ ನೀಡಿ ನಷ್ಟ ಪರಿಶೀಲಿಸಿ ಸ್ಥಳದಲ್ಲೇ ಚೆಕ್ ವಿತರಿಸಬೇಕು. ಪ್ರವಾಹದ ಬಳಿಕ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡು ಮೊಬೈಲ್ ವ್ಯಾನ್, ಔಷಧಿ ಶೇಖರಣೆ, ಜಾಗೃತಿ ಕಾರ್ಯ ಚಟುವಟಿಕೆ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಪುನರ್ವಸತಿ ಕೆಲಸಗಳಿಗೆ ಕನಿಷ್ಠ 10 ಸಾವಿರ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಯಾರೂ ಕೂಡ ಪರಿಹಾರದಿಂದ ವಂಚಿತರಾಗದಂತೆ ನಿಷ್ಪಕ್ಷಪಾತ ಕ್ರಮ ಕೈಗೊಂಡು ಪೂರ್ಣ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕಳೆದ ಎರಡು ವರ್ಷಗಳಲ್ಲಿ ಪರಿಹಾರ ವಿತರಣೆಯಿಂದ ಅನೇಕ ಸಂತ್ರಸ್ತರು ವಂಚಿತರಾಗಿರುವ ಉದಾಹರಣೆಗಳಿವೆ. ಹಾಗಾಗಿ ಈ ಬಾರಿಯಾದರೂ ಯಾವುದೇ ರಾಜಕೀಯ ಅಥವಾ ಭ್ರಷ್ಟಾಚಾರ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿನ್ನೆಯಷ್ಟೇ ಮಳೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಆರ್‌. ಅಶೋಕ್‌ ಅವರು, ಉತ್ತರ ಕರ್ನಾಟಕದ ಪ್ರವಾಹ ಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ತುರ್ತಾಗಿ 3 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಬೇಡಿ, ಮೊದಲು ನೀವೇನು ಕೊಡುತ್ತೀರಿ ಎಂಬುದನ್ನು ಘೋಷಿಸಿ ಎಂದು ಹೇಳಿದ್ದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು ನೋವು ಉಂಟಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು ಎಂದು ಹೇಳಿದ್ದರು.

ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಮತ್ತೊಂದು ತಂಡ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿ ವೀಕ್ಷಣೆ ನಡೆಸಿತ್ತು. 

Tags:    

Similar News