"ನನ್ನನ್ನು ಉಚ್ಚಾಟಿಸುವ ಅಧಿಕಾರ ಯಾರಿಗೂ ಇಲ್ಲ, ಭಕ್ತರ ಹೃದಯವೇ ನನ್ನ ಪೀಠ": ಜಯಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು. ನಂತರ ಸಂಗಮೇಶ್ವರ ದೇವಾಲಯದ ಆವರಣದಲ್ಲಿರುವ ಆಲದ ಮರದ ಕೆಳಗೆ ಸಭೆ ನಡೆಸಿದರು.
ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
"ನನ್ನನ್ನು ಪೀಠದಿಂದ ಉಚ್ಚಾಟಿಸುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾನು ಕಲ್ಲು-ಮಣ್ಣಿನಲ್ಲಿ ಅಲ್ಲ, ಭಕ್ತರ ಹೃದಯದಲ್ಲಿ ಪೀಠವನ್ನು ಕಟ್ಟಿದ್ದೇನೆ. ಪೀಠಕ್ಕೂ, ಟ್ರಸ್ಟಿಗೂ ಯಾವುದೇ ಸಂಬಂಧವಿಲ್ಲ," ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುಡುಗಿದ್ದಾರೆ.
ಪಂಚಮಸಾಲಿ ಟ್ರಸ್ಟ್ ತಮ್ಮನ್ನು ಪೀಠದಿಂದ ಉಚ್ಚಾಟಿಸಿದ ನಿರ್ಧಾರದ ಬಳಿಕ ಕೂಡಲಸಂಗಮದಲ್ಲಿ ನಡೆದ ಖಂಡನಾ ಸಭೆಯಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಉಚ್ಚಾಟನೆಯು ಏಕಪಕ್ಷೀಯ ಮತ್ತು ಕಾನೂನುಬಾಹಿರ ಎಂದು ಬಣ್ಣಿಸಿದರು. "ಧರ್ಮಗುರುಗಳನ್ನು ಉಚ್ಚಾಟಿಸುವ ಅಧಿಕಾರ ದೇವರಿಗೆ ಮತ್ತು ದೇವಸ್ವರೂಪಿ ಭಕ್ತರಿಗೆ ಮಾತ್ರವಿದೆ. ಭಕ್ತರ ತೀರ್ಮಾನವೇ ಅಂತಿಮ," ಎಂದು ಸ್ಪಷ್ಟಪಡಿಸಿದರು.
ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು. ನಂತರ ಸಂಗಮೇಶ್ವರ ದೇವಾಲಯದ ಆವರಣದಲ್ಲಿರುವ ಆಲದ ಮರದ ಕೆಳಗೆ ಸಭೆ ನಡೆಸಿದರು. "ಮುಂದಿನ 3-4 ದಿನಗಳಲ್ಲಿ ರಾಜ್ಯಮಟ್ಟದ ಭಕ್ತರ ಸಭೆ ಕರೆದು, ಅವರ ನಿರ್ಧಾರದಂತೆ ನಡೆಯುತ್ತೇನೆ. ಅಗತ್ಯಬಿದ್ದರೆ ಇಲ್ಲೇ ಮತ್ತೊಂದು ಮಠ ಕಟ್ಟುವ ಚಿಂತನೆಯೂ ಇದೆ," ಎಂದು ಸ್ವಾಮೀಜಿ ಘೋಷಿಸಿದರು.
ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, "ನಾನು ಯಾವುದೇ ಅಕ್ರಮ ಆಸ್ತಿ ಮಾಡಿಲ್ಲ. ಭಕ್ತರ ಕಾಣಿಕೆ ಮತ್ತು ಮಠದ ಹಣದಿಂದ ವೈಯಕ್ತಿಕವಾಗಿ ಏನನ್ನೂ ಸಂಪಾದಿಸಿಲ್ಲ. ಕೂಡಲಸಂಗಮದಲ್ಲಿ 13 ಗುಂಟೆ ಹಾಗೂ ದಾವಣಗೆರೆಯಲ್ಲಿ ಭಕ್ತರು ನೀಡಿದ ಭೂಮಿ ಬಿಟ್ಟರೆ ಬೇರೇನೂ ಇಲ್ಲ. ನನ್ನ ತೇಜೋವಧೆ ಮಾಡಲು ಕೃತಕ ಬುದ್ಧಿಮತ್ತೆ (AI) ಬಳಸಿ ಕೃತ್ಯ ಎಸಗಿದರೂ ಭಕ್ತರು ನಂಬುವುದಿಲ್ಲ, ಸತ್ಯ ಎಲ್ಲರಿಗೂ ತಿಳಿದಿದೆ," ಎಂದು ಹೇಳಿದರು. "ಮೀಸಲಾತಿಗಾಗಿ ಪಾದಯಾತ್ರೆ ಆರಂಭವಾದಾಗಿನಿಂದಲೂ ಇಂತಹ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಭಕ್ತರು ಎಲ್ಲಿ ದಾರಿ ತೋರಿಸುತ್ತಾರೋ ಅಲ್ಲಿ ಪೀಠವನ್ನು ಆರಂಭಿಸುತ್ತೇನೆ," ಎಂದು ತಮ್ಮ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದರು. ಸಭೆಯಲ್ಲಿ ಮುಖಂಡರಾದ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ರುದ್ರಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.