ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಸಿಬಿಐ ತನಿಖೆಯ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ʻಸಿಬಿಐ ಮೇಲೆ ವಿಶ್ವಾಸವಿದ್ದು, ನಮ್ಮ ಪೊಲೀಸರ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ. ನಮ್ಮ ಸರ್ಕಾರ ಕಾನೂನಿನ ಪ್ರಕಾರ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ʻಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆಯೂ ಇಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡುವ ಅವಶ್ಯಕತೆ ಇಲ್ಲ. ನನಗೆ ಕರ್ನಾಟಕದ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನಿ ಪ್ರಕಾರ ತನಿಖೆ ನಡೆಸಲಿದ್ದಾರೆʼ ಎಂದು ಹೇಳಿದ್ದಾರೆ.
ʻಬಿಜೆಪಿ ನಾಯಕರು ಯಾವುದಾದರೂ ಒಂದು ಪ್ರಕರಣವನ್ನಾದರೂ, ಸಿಬಿಐಗೆ ವಹಿಸಿದ್ದಾರೆಯೇ? ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಸಾವಿನ ಪ್ರಕರಣ, ಒಂದಂಕಿ ಲಾಟರಿ ಪ್ರಕರಣ, ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರ ಮೇಲಿನ ಆರೋಪ, ಪರೇಶ್ ಮೇಸ್ತಾ ಸಾವಿನ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು. ಹಿಂದೆ ಬಿಜೆಪಿಯವರೇ ಸಿಬಿಐಯನ್ನು ಕರಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಎಂದು ಹೇಳಿದ್ದರು. ಈಗ ಸಿಬಿಐ ಮೇಲೆ ಅವರಿಗೆ ವಿಶ್ವಾಸ ಬಂದಿದೆಯೇʼ ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ.
— Siddaramaiah (@siddaramaiah) May 10, 2024
ಬಿಜೆಪಿಯವರು ಯಾವತ್ತಾದರೂ ಒಂದು ಪ್ರಕರಣವಾದರೂ ಸಿಬಿಐಗೆ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಒಂದಂಕಿ ಲಾಟರಿ ಪ್ರಕರಣ, ಸಚಿವರಾದ…
ನನಗೆ ಸಿಬಿಐ ಮೇಲೆ ವಿಶ್ವಾಸವಿದೆ. ಆದರೆ, ನಮ್ಮ ಪೊಲೀಸರ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ. ನಮ್ಮ ಸರ್ಕಾರ ಕಾನೂನಿನ ಪ್ರಕಾರ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡುತ್ತಾರೆಂದು ನಂಬಿದ್ದೇನೆ. ನಾವು ಎಂದಿಗೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ತನಿಖೆಯ ಅಗತ್ಯವಿಲ್ಲ. ಎಲ್ಲ ಅಪರಾಧ ಪ್ರಕರಣಗಳ ತನಿಖೆ ಯಾರು ಮಾಡುತ್ತಾರೆ? ನಮ್ಮ ಪೊಲೀಸರಲ್ಲವೇ? ಅವರದ್ದೇ ವಿಶೇಷ ತನಿಖಾದಳ ರಚಿಸಿರುವುದಲ್ಲವೇ? ನಮ್ಮ ಪೊಲೀಸರನ್ನು ನಾವು ನಂಬಬೇಕಲ್ಲವೆ?ʼ ಎಂದು ಹೇಳಿದ್ದಾರೆ.
ʻಪ್ರಜ್ವಲ್ ರೇವಣ್ಣ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲೀ, ಸರ್ಕಾರದ ಯಾರೊಬ್ಬರೂ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೆ ಎಸ್.ಐ.ಟಿ. ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆʼ ಎಂದು ತಿಳಿಸಿದ್ದಾರೆ.