ಬಿಬಿಎಂಪಿಗೆ ಚುನಾವಣೆಯಿಲ್ಲದೆ ಕಳೆಯಿತು ನಾಲ್ಕು ವರ್ಷ! ಐದನೇ ವರ್ಷದಲ್ಲಿ ʼಗ್ರೇಟರ್ ಬೆಂಗಳೂರುʼ ನೆಪ?
ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆ.10ಕ್ಕೆ ಅಂತ್ಯಗೊಂಡ ಬಳಿಕ ಈ ವರ್ಷ ಅಂದರೆ, ಈ ತಿಂಗಳು ಅಂದರೆ ಸೆ.10ಕ್ಕೆ ನಾಲ್ಕು ವರ್ಷಗಳಾಗಿವೆ. ಐದನೇ ವರ್ಷದಲ್ಲಾದರೂ ಚುನಾವಣೆ ನಡೆಯುವುದೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಗ್ರೇಟರ್ ಬೆಂಗಳೂರು ಮತ್ತು ಬಿಬಿಎಂಪಿ ವಿಭಜನೆ ಪರಿಕಲ್ಪನೆ ಚುನಾವಣೆಯನ್ನು ಮತ್ತೆ ಮುಂದೂಡುವಂತೆ ಮಾಡಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ.;
ರಾಜ್ಯದ ರಾಜಧಾನಿಯ ಸ್ಥಳೀಯ ಸಂಸ್ಥೆ, ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ (ಬಿಬಿಎಂಪಿ)ಗೆ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಸೆಪ್ಟೆಂಬರ್ ತಿಂಗಳಿಗೆ ಬರೋಬ್ಬರಿ ನಾಲ್ಕು ವರ್ಷ ಕಳೆದುಹೋಗಿದೆ. ಜನಪ್ರತಿನಿಧಿಗಳ ಬದಲಿಗೆ ಬಿಬಿಎಂಪಿಯಲ್ಲಿ ಅಧಿಕಾರಿಗಳ ನಿಯಂತ್ರಣವೇ ಹೆಚ್ಚಾಗಿದೆ. ಇನ್ನೂ ಅದು ಮುಂದುವರಿಯುವ ಲಕ್ಷಣಗಳು ಹೇರಳವಾಗಿವೆ..
ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆ.10ಕ್ಕೆ ಅಂತ್ಯಗೊಂಡ ಬಳಿಕ ಈ ವರ್ಷ ಅಂದರೆ, ಈ ತಿಂಗಳು ಅಂದರೆ ಸೆ.10ಕ್ಕೆ ನಾಲ್ಕು ವರ್ಷಗಳಾಗಿವೆ. ಐದನೇ ವರ್ಷದಲ್ಲಾದರೂ ಚುನಾವಣೆ ನಡೆಯುವುದೇ ಎಂಬ ಪ್ರಶ್ನೆಗೆ ನಕಾರಾತ್ಮಕ ಉತ್ತರವೇ ಲಭಿಸುತ್ತಿದೆ.
ಈಗ ಸರ್ಕಾರ ಯೋಚಿಸುತ್ತಿರುವ ಗ್ರೇಟರ್ ಬೆಂಗಳೂರು ಮತ್ತು ಬಿಬಿಎಂಪಿ ವಿಭಜನೆ ಪರಿಕಲ್ಪನೆ ಚುನಾವಣೆಯನ್ನು ಮತ್ತೆ ಮುಂದೂಡುವಂತೆ ಮಾಡಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ತಕ್ತವಾಗಿದೆ! ನಾಲ್ಕು ವರ್ಷಗಳಿಂದ ಬಿಬಿಎಂಪಿಯನ್ನು ಚುನಾಯಿತ ಪ್ರತಿನಿಧಿಗಳ ಗೈರಿನಲ್ಲಿ ಆಡಳಿತಾಧಿಕಾರಿಗಳ ಮೂಲಕ ಸರ್ಕಾರಗಳೇ ನಿಯಂತ್ರಣ ನಡೆಸುತ್ತಾ ಇರುವುದು ಚುನಾವಣೆ ಎಂಬ ಪ್ರಜಾಪ್ರಭುತ್ವದ ಬುನಾದಿಗೇ ಕೊಡಲಿ ಏಟು ನೀಡುತ್ತಿರುವುದು ಸದ್ಯಕ್ಕೆ ಎದ್ದು ಕಾಣುತ್ತಿರುವ ಅಂಶ.
ಬಿಬಿಎಂಪಿ ವಾರ್ಡ್ ವಿಂಗಡಣೆ, ಮೀಸಲಾತಿ ಜಾರಿಗೊಳಿಸುವ ಗೊಂದಲವನ್ನು ಮುಂದಿಟ್ಟುಕೊಂಡು ಹಿಂದಿನ ಬಿಜೆಪಿ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರಗಳು ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಮುಂದೂಡುತ್ತಲೇ ಬರುತ್ತಿವೆ. ಇನ್ನು ಮುಂದೆ ಜಾರಿಗೆ ಬರಲಿದೆ ಎನ್ನಲಾದ ಸರ್ಕಾರಿ ನಿಯಂತ್ರಣದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಲ್ಪಡುವ ಲಕ್ಷಣಗಳು ಕಂಡುಬರುತ್ತಿವೆ.
ರಾಜ್ಯ ಸರ್ಕಾರ ಇತ್ತೀಚೆಗೆ ಅಂತಾರಾಷ್ಟ್ರೀಯ ಪ್ರಜಾಪಭುತ್ವ ದಿನವನ್ನು ಬೀದರ್‌ನಿಂದ ಚಾಮರಾಜನಗರದ ವರೆಗೆ ಸುಮಾರು 2500 ಕಿಲೋ ಮೀಟರ್ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಸಂದೇಶ ಸಾರುವ ದಾಖಲೆ ನಿರ್ಮಿಸಿತು. ಆದರೆ, ಜಾಣತನದಿಂದಲೇ ಪ್ರಜಾಪ್ರಭುತ್ವದ ಆಶಯಗಳ ಕತ್ತು ಹಿಸುಕುವ ಕೆಲಸವನ್ನು ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂಬ ಆರೋಪ ವಿರೋಧ ಪಕ್ಷಗಳಿಂದ ಕೇಳಿಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಚುನಾವಣೆಯನ್ನು ಒಂದಲ್ಲ ಒಂದು "ತಾಂತ್ರಿಕ" ಕಾರಣಕ್ಕೆ ಮುಂದೂಡುತ್ತಾ ಬರುತ್ತಿರುವುದಕ್ಕೆ ಈಗಿನ ಕಾಂಗ್ರೆಸ್, ಹಿಂದಿನ ಬಿಜೆಪಿ ಸರ್ಕಾರ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈಗ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಅದನ್ನು ಜಾರಿ ಮಾಡುವ ಮುನ್ನ ಪರಿಶೀಲನೆಗೆ ಜಂಟಿ ಸದನ ಸಮಿತಿ ರಚನೆ ಮಾಡುವ ಮೂಲಕ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ವ್ಯವಸ್ಥಿತ ಕಾರ್ಯತಂತ್ರ ನಡೆಸಿದೆ ಎಂದು ಆಯಾ ಪಕ್ಷಗಳ ಕಾರ್ಯಕರ್ತರೇ ಬಹಿರಂಗವಾಗಿ ಹೇಳಲಾಗದೇ ತೆರೆ ಮರೆಯಲ್ಲಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ!
ವಿಶ್ಲೇಷಕರ ಪ್ರಕಾರ, ರಾಜ್ಯದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ, ರಾಜ್ಯದಲ್ಲಿ ಸಂವಿಧಾನ ಹಾಗೂ ಪಜಾಪಭಯತ್ನವನ್ನು ಉಳಿಸಲು ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದಿರುವ ಬೆಂಗಳೂರಿನ ಸ್ಥಳಿಯ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯದಂತೆ ನೋಡಿಕೊಂಡು ಬಿಬಿಎಂಪಿಗೆ ಚುನಾವಣೆ ನಡೆಸದೇ ಇರುವುದು ಪ್ರಶ್ನಾರ್ಹ.
ಮುಂದೂಡಿಕೆಗೆ ಕಾರಣವೇನು?
2020 ರಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 225 ಕ್ಕೆ ಹೆಚ್ಚಳ ಮಾಡುವ ಉದ್ದೇಶದಿಂದ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಲು ಚುನಾವಣೆ ನಡೆಸಲು ಸಮಯ ತೆಗೆದುಕೊಂಡು ಅದೇ ಕಾರಣವನ್ನೂ ಸುಪ್ರೀಂ ಕೋರ್ಟ್ ಮುಂದಿಟ್ಟು ಚುನಾವಣೆಯನ್ನು ಮುಂದೂಡಿತು. ಆ ನಂತರ ವಾರ್ಡ್‌ಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುವ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆಯನ್ನು ನಿರಂತರವಾಗಿ ಮುಂದೂಡುತ್ತಲೇ ಬರಲಾಯಿತು.
ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವೂ ಬಿಬಿಎಂಪಿ ಚುನಾವಣೆ ಮಾಡಲು ಸದ್ಯಕ್ಕೆ ಯಾವುದೇ ಅಡ್ಡಿ ಇಲ್ಲದಿದ್ದರೂ, ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಕಾಯ್ದೆ ತರುವುದಾಗಿ ಹೇಳಿ ಮತ್ತೆ ಚುನಾವಣೆಯನ್ನು ಮುಂದೂಡವ ಪ್ರಯತ್ನ ಮಾಡುತ್ತಿದೆ.
ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಒಂದೇ ರೀತಿಯ ಮನಸ್ಥಿತಿ ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಚುನಾವಣೆಯನ್ನು ಮುಂದೂಡಲು ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ನ ಎಲ್ಲ ಶಾಸಕರೂ ಪರೋಕ್ಷವಾಗಿ ಸಹಕಾರ ನೀಡಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಯಾಗುವವರೆಗೂ ಚುನಾವಣೆ ನಡೆಯುವುದು ಬೇಡ ಎನ್ನುವ ಅಲಿಖಿತ ಒಪ್ಪಂದಕ್ಕೆ ಬಂದಿದ್ದರು ಎನ್ನಲಾಗಿದೆ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಬಿಜೆಪಿಯ ಶಾಸಕರೂ ಅದೇ ವರ್ತನೆ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಎಂ. ರಾಮಚಂದ್ರಪ್ಪ "ದ ಫೆಡರಲ್ ಕರ್ನಾಟಕ"ದ ಜತೆ ಮಾತನಾಡಿ, ಬಿಬಿಎಂಪಿ ಚುನಾವಣೆ ನಡೆಸುವಂತೆ ನಾವೂ ಪಕ್ಷದ ನಾಯಕರುಗಳಿಗೆ ಒತ್ತಡ ಹೇರುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. "ಚುನಾವಣೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದ್ದು, ಚುನಾವಣಾ ಆಯೋಗ ಚುನಾವಣೆಗೆ ಯಾವುದೇ ಅಡ್ಡಿ ಇಲ್ಲದಿರುವುದನ್ನು ಮನವರಿಕೆ ಮಾಡಿ ಚುನಾವಣೆ ನಡೆಸಲು ಮುಂದಾಗಬೇಕು. ಬಿಬಿಎಂಪಿ ಚುನಾವಣೆ ಶೀಘ್ರ ನಡೆಯುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪಕ್ಷದಲ್ಲಿ ಚುನಾವಣಾ ಸಿದ್ದತೆ ಚಟುವಟಿಕೆಗಳು ನಡೆಯುತ್ತಿವೆ," ಎಂದೂ ಅವರು ಹೇಳಿದ್ದಾರೆ.
ಏನಿದು ಗ್ರೇಟರ್ ಬೆಂಗಳೂರು:
ರಾಜ್ಯ ಸರ್ಕಾರ ಈಗ ಮಾಡಲು ಹೊರಟಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದ ಬಿಬಿಎಂಪಿ ವ್ಯಾಪ್ತಿ ವಿಸ್ತಾರವಾಗಲಿದ್ದು, ಬೆಂಗಳೂರಿನಲ್ಲಿಯೇ ಸುಮಾರು ಐದು ಮಹಾನಗರ ಪಾಲಿಕೆಗಳು ರಚನೆಯಾಗಲಿವೆ. ಸುಮಾರು 400 ವಾರ್ಡ್ ಗಳು ರಚನೆಯಾಗಲಿದ್ದು, ಬಿಡಿಎ, ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಎಲ್ಲ ವ್ಯವಸ್ಥೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಎಲ್ಲ ಪಾಲಿಕೆಗಳ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯಮಂತಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿದೆ.
ಈ ವ್ಯವಸ್ಥೆ ಸ್ಥಳಿಯಾಡಳಿತ ಹಾಗೂ ವಿಕೇಂದ್ರಿಕರಣ ವ್ಯವಸ್ಥೆಯ ವಿರೋಧಿಯಾಗಿದ್ದು, ಎಲ್ಲ ನಿರ್ಧಾಗಳನ್ನು ಅಂತಿಮವಾಗಿ ಪ್ರಾಧಿಕಾರವೇ ತೆಗೆದುಕೊಳ್ಳುವ ಅಧಿಕಾರ ಇರುವುದರಿಂದ ಸ್ಥಳೀಯಾಡಳಿತದ ಎಲ್ಲ ನಿರ್ಧಾರಗಳೂ ಮತ್ತೆ ಸರ್ಕಾರದ ಕೈಯಲ್ಲಿಯೇ ಉಳಿದುಕೊಳ್ಳುತ್ತವೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಯಾವುದೇ ಅಧಿಕಾರ ಇಲ್ಲದಂತಾಗಿ ಕೇವಲ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವ ಕೆಲಸಕ್ಕೆ ಸೀಮಿತವಾಗಬೇಕಾಗುತ್ತದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಅಲ್ಲದೇ ಬೆಂಗಳೂರನ್ನು ಐದು ಭಾಗಗಳಾಗಿ ವಿಂಗಡಿಸಿದರೆ ಬೆಂಗಳೂರಿನ ಮೇಲೆ ಕನ್ನಡಿಗರ ಹಿಡಿತ ಕೈ ತಪ್ಪುವ ಬಹುದೊಡ್ಡ ಆತಂಕ ಇದೆ ಎನ್ನುವ ವಾದವೂ ಕೇಳಿ ಬರುತ್ತಿವೆ. ನಗರದ ಕೆಲವು ಪ್ರದೇಶಗಳಲ್ಲಿ ತೆಲಗು ಭಾಷಿಕರು, ತಮಿಳು ಭಾ಼ಷಿಕರು, ಇನ್ನು ಕೆಲವು ಪ್ರದೇಶಗಳಲ್ಲಿ ಹಿಂದಿ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿರುವುದರಿಂದ ಪಾಲಿಕೆ ವಿಭಜನೆಯಾದರೆ ಆಯಾ ಪ್ರದೇಶಗಳಲ್ಲಿ ಹೆಚ್ಚಾಗಿರುವ ಅನ್ಯ ಭಾಷಿಕರದ್ದೇ ಪ್ರಭಾವ ಹೆಚ್ಚಾಗಿ ಆಡಳಿತದ ಮೇಲೆ ಪರಿಣಾಮ ಬೀರಬಹುದು ಇದರಿಂದ ಕನ್ನಡಿಗರು ಅಲ್ಪ ಸಂಖ್ಯಾತರಾಗಿ ಆಡಳಿತದ ಮೇಲಿನ ಹಿಡಿತ ಕಳೆದುಕೊಂಡು ಅಸಹಾಯಕರಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಇದೇ ಕಾರಣಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ಮಾಡುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿವೆ. ಆದರೂ, ಜಂಟಿ ಸದನ ಸಮಿತಿ ಯಾವ ಶಿಫಾರಸ್ಸು ಮಾಡುತ್ತದೆ ಹಾಗೂ ರಾಜ್ಯ ಸರ್ಕಾರ ಅದನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವುದರ ಮೇಲೆ ಬಿಬಿಎಂಪಿ ಭವಿಷ್ಯ ನಿಂತಿದೆ.
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪಾಧಿಕಾರ ರಚನೆ ಕಾರ್ಯವನ್ನು ಬದಿಗಿಟ್ಟು ಈಗಲೂ ಚುನಾವಣೆ ನಡೆಸಲು ಯಾವುದೇ ತೊಂದರೆ ಇಲ್ಲ. ಆದರೆ, ರಾಜ್ಯ ಚುನಾವಣಾ ಆಯೋಗ ತನ್ನ ಸಂವಿಧಾನಿಕ ಕಾರ್ಯವನ್ನು ಮಾಡಲು ಹಿಂದೆ ಮುಂದೆ ನೋಡದೇ ಸುಪ್ರೀಂಕೋರ್ಟ್‌ನಲ್ಲಿ ವಾಸ್ತವಾಂಶವನ್ನು ಮುಂದಿಟ್ಟು ತಕಣವೇ ಚುನಾವಣೆ ನಡೆಸಲು ಅವಕಾಶ ಕಲಿಸಬೇಕು ಎಂದು ವಾದ ಮಾಡಿದರೆ, ಪ್ರಜಾಪಭುತ್ವದ ಉಳಿವು ಹಾಗೂ ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ನಿರ್ದೇಶನ ಹೊರ ಬರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಬಿ.ವಿ. ಗಣೇಶ್ "ದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿ, ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪಕ್ಷದ ನಾಯಕರುಗಳಿಗೆ ಆಗ್ರಹಿಸಿದ್ದೇವೆ. ಸ್ಥಳಿಯ ಮಟ್ಟದಲ್ಲಿ ಪಕ್ಷ ಬಲಗೊಳ್ಳಬೇಕೆಂದರೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕು ಎಂದು ತಿಳಿಸಿದ್ದಾರೆ. "ಅಧಿಕಾರ ನಡೆಸುವವರ ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತ, ಬಿಬಿಎಂಪಿಗೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡುವುದು ಸರಿಯಲ್ಲಿ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳನ್ನು ಇಟ್ಟುಕೊಂಡು ಅಭಿವೃದ್ಧಿ ಪರ ಆಡಳಿತ ನಡೆಸಲು ಸಾಧ್ಯವಿಲ್ಲ. ಪಕ್ಷದ ನಾಯಕರು ಹಾಗೂ ಸರ್ಕಾರದಲ್ಲಿರುವವರು ಇದನ್ನು ಅರ್ಥ ಮಾಡಿಕೊಂಡು ತಕ್ಷಣ ಚುನಾವಣೆ ನಡೆಸಲು ಮುಂದಾಗಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಧಕ್ಕೆ?
ಪ್ರತಿ ನಿತ್ಯ ಪ್ರಜಾಪಭುತ್ವ ಹಾಗೂ ಸಂವಿಧಾನದ ರಕ್ಷಣೆಯ ಬಗ್ಗೆ ಮಾತನಾಡುತ್ತ ಅಧಿಕಾರ ನಡೆಸುವ ಸರ್ಕಾರಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುವ, ರಾಜ್ಯ ವಿಧಾನಸಭೆಗಳು ಹಾಗೂ ಲೋಕಸಭೆಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವಂತೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಯಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ವಿನಾಕಾರಣ ಅದನ್ನು ಉಲ್ಲಂಘಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡುವ ಆಡಳಿತ ವ್ಯವಸ್ಥೆಗಳಿಗೆ ಸೂಕ್ತ ನಿರ್ದೇಶನ ಅಥವಾ ಕಠಿಣ ಶಿಕ್ಷೆಯಾಗುವ ವ್ಯವಸ್ಥೆ ಜಾರಿಗೆ ಬರಬೇಕು. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸದ ಸರ್ಕಾರಗಳಿಗೆ ಕೇವಲ ದಂಡ ಹಾಕುವುದಷ್ಟೇ ಮಾಡದೇ, ಸರ್ಕಾರ ನಡೆಸುವವರ ಅಧಿಕಾರಕ್ಕೂ ಕುತ್ತು ಬರುವಂತಹ ಕಾನೂನು ಜಾರಿಯಾದರೆ ಮಾತ್ರ ಪ್ರಜಾಪಭುತ್ವ, ಸಂವಿಧಾನ, ವಿಕೇಂದ್ರಿಕರಣ ವ್ಯವಸ್ಥೆ ನಿಜವಾದ ಅರ್ಥದಲ್ಲಿ ಜಾರಿಗೆ ಬರಲು ಸಾಧ್ಯವಾಗುತ್ತದೆ. ಇಲ್ಲದದಿದ್ದರೆ ಆಳುವ ಸರ್ಕಾರಗಳು ಪಜಾಪ್ರಭುತ್ವವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವ್ಯವಸ್ಥೆಯ ದುರುಪಯೋಗ ಪಡೆಸಿಕೊಳ್ಳುವುದೇ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.