ವಿದ್ಯುತ್ ಕಳ್ಳತನಕ್ಕೆ ಬಿದ್ದಿಲ್ಲ ಬ್ರೇಕ್ : ಆಗಸ್ಟ್‌ವರೆಗೆ ಬರೋಬ್ಬರಿ 11,193 ಪ್ರಕರಣ ದಾಖಲು

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪೂರೈಸಿದರೂ ವಿದ್ಯುತ್ ಕಳ್ಳತನದ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಇದರಿಂದ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳಿಗೆ ಆದಾಯ ಕ್ಷೀಣಿಸುತ್ತಿದೆ.

Update: 2025-10-04 01:30 GMT

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುತ್ತಿವೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪೂರೈಸಿದರೂ ವಿದ್ಯುತ್ ಕಳ್ಳತನದ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಇದರಿಂದ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳಿಗೆ ಆದಾಯ ಕ್ಷೀಣಿಸುತ್ತಿದೆ.

ರಾಜ್ಯದಲ್ಲಿ ಅತಿ ದೊಡ್ಡ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದಾಗಿರುವ ಬೆಸ್ಕಾಂ, ಕರ್ನಾಟಕದ ಶೇ 50 ರಷ್ಟು ಬೇಡಿಕೆಯ ವಿದ್ಯುತ್ ಪೂರೈಸುತ್ತಿದೆ. ಆದರೆ, ನಿಗಮಕ್ಕೆ ಪ್ರತಿ ವರ್ಷವೂ ವಿದ್ಯುತ್ ಕಳ್ಳತನದ ಪ್ರಕರಣಗಳು ತಲೆನೋವಾಗಿ ಪರಿಣಮಿಸುತ್ತಿವೆ.

ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುವವರ ವಿರುದ್ಧ ಬೆಸ್ಕಾಂ ಜಾಗೃತ ದಳವು ಕಠಿಣ ಮತ್ತು ದಂಡನೀಯ ಕ್ರಮ ಕೈಗೊಂಡರೂ, ಸಾಕಷ್ಟು ಜಾಗೃತಿ ಮೂಡಿಸಿದರೂ ಪ್ರಕರಣಗಳ ಸಂಖ್ಯೆ ಇಳಿದಿಲ್ಲ.

2023-24 ನೇ ಆರ್ಥಿಕ ವರ್ಷದಿಂದ 2025-26ನೇ ಸಾಲಿನ ಆಗಸ್ಟ್ ವರೆಗೆ ರಾಜ್ಯದಲ್ಲಿ ಬರೋಬ್ಬರಿ 11,193 ವಿದ್ಯುತ್ ಕಳ್ಳತನದ ಪ್ರಕರಣಗಳು ವರದಿಯಾಗಿರುವುದನ್ನು ಬೆಸ್ಕಾಂ ಜಾಗೃತ ದಳ ಖಚಿತಪಡಿಸಿದೆ.

2023-24 ನೇ ಆರ್ಥಿಕ ವರ್ಷದಲ್ಲಿ 28,573 ಪ್ರಕರಣಗಳನ್ನು ಪರಿಶೀಲಿಸಿದ್ದು, ಇವುಗಳ ಪೈಕಿ 4,748 ಪ್ರಕರಣಗಳು ವಿದ್ಯುತ್ ಕಳ್ಳತನದ ಪ್ರಕರಣಗಳು ಎಂದು ದೃಢಪಟ್ಟಿವೆ. ಇವುಗಳಿಂದ 12.20 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. 2024-25 ನೇ ಆರ್ಥಿಕ ವರ್ಷದಲ್ಲಿ 25,921 ಪ್ರಕರಣಗಳ ಪರಿಶೀಲನೆಯಲ್ಲಿ 4,579 ಪ್ರಕರಣಗಳು ದೃಢಪಟ್ಟಿವೆ. 12.81 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

2025-26(ಆಗಸ್ಟ್ ವರೆಗೆ) 9,853 ಪ್ರಕರಣಗಳ ಪರಿಶೀಲನೆ ಮಾಡಲಾಗಿದ್ದು, 1,866 ಪ್ರಕರಣಗಳು ದೃಢಪಟ್ಟಿವೆ. 4.95 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ಒಟ್ಟಾರೆ 2023-24 ರಿಂದ 2025 ಆಗಸ್ಟ್ ವರೆಗೆ 64,347 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು, 11,193 ಕೇಸ್ ಗಳನ್ನು ದಾಖಲಿಸಿ 29.95 ಕೋಟಿ ರೂ.ದಂಡ ವಸೂಲಿ ಮಾಡಿದ್ದಾರೆ.

ವಾಟ್ಸ್ ಆ್ಯಪ್ ಗ್ರಾಹಕ ಸೇವೆ ಆರಂಭ

ಬೆಸ್ಕಾಂ ತನ್ನ ಅಧೀನದಲ್ಲಿರುವ ಎಂಟು ಜಿಲ್ಲೆಗಳಿಗೆ ಮೀಸಲಾಗಿ ವಾಟ್ಸ್ ಆ್ಯಪ್ ಗ್ರಾಹಕ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆ, ಬಿಲ್ ದೂರುಗಳು, ಲೈನ್ ದೋಷ ಅಥವಾ ಟ್ರಾನ್ಸ್‌ಫಾರ್ಮರ್ ಸಮಸ್ಯೆಗಳನ್ನು ಫೋಟೋ, ವಿಡಿಯೊ ಅಥವಾ ಸಂದೇಶ ರೂಪದಲ್ಲಿ ಕಳುಹಿಸಬಹುದಾಗಿದೆ.‌ ವಿದ್ಯುತ್ ಕಳ್ಳತನದ ದೂರುಗಳನ್ನೂ ದಾಖಲಿಸಬಹುದಾಗಿದೆ.

• ಬೆಂಗಳೂರು ನಗರ: 82778 84011, 82778 84012, 82778 84013, 82778 84014

• ಕೋಲಾರ: 82778 84015

• ಚಿಕ್ಕಬಳ್ಳಾಪುರ: 82778 84016

• ಬೆಂಗಳೂರು ಗ್ರಾಮಾಂತರ: 82778 84017

• ರಾಮನಗರ: 82778 84019

• ತುಮಕೂರು: 82778 84018

• ಚಿತ್ರದುರ್ಗ: 82778 84020

• ದಾವಣಗೆರೆ: 82778 84021.

ವಿದ್ಯುತ್ ಕಳ್ಳತನಕ್ಕೆ ಪರಿಹಾರ ಏನು?

ವಿದ್ಯುತ್ ಕಳ್ಳತನ ಪ್ರಕರಣಗಳ ತಡೆಗೆ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು ಸ್ಮಾರ್ಟ್‌ಮೀಟರ್ ಅಳವಡಿಸಲು ಆರಂಭಿಸಿವೆ.

2023-24ರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಳವು ಪ್ರಮಾಣ ಸುಮಾರು 5.5 ಲಕ್ಷ ಯೂನಿಟ್‌. 4,788 ಪ್ರಕರಣಗಳು ದಾಖಲಾಗಿದ್ದು, ದಂಡದ ರೂಪದಲ್ಲಿ ನಷ್ಟ ವಸೂಲಿ ಮಾಡಿದರೂ ದೊಡ್ಡ ವ್ಯತ್ಯಾಸಗಳು ಕಂಡು ಬಂದಿವೆ.

ಬಹುಗ್ರಾಹಕ ಪ್ರದೇಶಗಳಲ್ಲಿ ಸರಾಸರಿ ಪ್ರತಿ ಗಂಟೆಗೆ ಸಾವಿರಾರು ಯೂನಿಟ್ ವಿದ್ಯುತ್ ಕಳುವಾಗುತ್ತಿದೆ ಎಂದು ಬೆಸ್ಕಾಂ ಜಾಗೃತ ದಳ ಅಂದಾಜಿಸಿದೆ.

ವಿದ್ಯುತ್ ಕಳ್ಳತನದ ತಡೆಗಾಗಿ ಇತ್ತೀಚೆಗೆ ಎಸ್ಕಾಂಗಳು ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ತೀವ್ರಗೊಳಿಸುತ್ತಿವೆ. ಅನಿಯಮಿತ ಬಳಕೆಯ ಮೇಲೆ ಎಐ ಆಧರಿತ ಅಲರಾಂ ವ್ಯವಸ್ಥೆ ಮಾಡಲಾಗಿದೆ.

Tags:    

Similar News