ಆಕ್ಸಿಡೆಂಟ್​ ಆದಾಗ ಖಾಸಗಿ ಆಸ್ಪತ್ರೆಗಳಲ್ಲಿ 2.5 ಲಕ್ಷ ರೂ. ತನಕ ಉಚಿತ ಚಿಕಿತ್ಸೆ; ಸರ್ಕಾರದ ಆದೇಶ

ಆಕಸ್ಮಿಕ ಅಥವಾ ಪ್ರೇರಿತ ಸುಟ್ಟಗಾಯಗಳು, ವಿಷಪ್ರಾಶನ, ಕ್ರಿಮಿನಲ್ ಹಲ್ಲೆ ಹಾಗೂ ಇತರ ವೈದ್ಯಕೀಯ–ಕಾನೂನು ಪ್ರಕರಣಗಳಿಗೂ ಚಿಕಿತ್ಸೆ ಒದಗಿಸಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.;

Update: 2025-09-05 10:00 GMT

ದಿನೇಶ್‌ ಗುಂಡೂರಾವ್‌ 

ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ತಕ್ಷಣದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಯಾವುದೇ ಆಸ್ಪತ್ರೆಯು ಅಪಘಾತಕ್ಕೊಳಗಾದವರಿಂದ ಮುಂಗಡ ಹಣ ಪಾವತಿಸುವಂತೆ ಕೇಳುವಂತಿಲ್ಲ ಮತ್ತು ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಯಾವುದೇ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ.

ವ್ಯಾಪಕವಾದ ಚಿಕಿತ್ಸಾ ವ್ಯಾಪ್ತಿ

ಈ ನಿಯಮವು ಕೇವಲ ರಸ್ತೆ ಅಪಘಾತಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಆಕಸ್ಮಿಕ ಅಥವಾ ಪ್ರೇರಿತ ಸುಟ್ಟಗಾಯಗಳು, ವಿಷ ಸೇವನೆ, ಕ್ರಿಮಿನಲ್ ಹಲ್ಲೆ ಹಾಗೂ ಇತರ ವೈದ್ಯಕೀಯ-ಕಾನೂನು ಪ್ರಕರಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸುವಿಕೆ:

ಸರ್ಕಾರವು ಪ್ರತಿ ಪ್ರಕರಣಕ್ಕೆ 1.5 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದು, ಈ ಮೊತ್ತದಲ್ಲಿ 7 ದಿನಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಒಂದು ವೇಳೆ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದರೆ, ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ಟಾಪ್-ಅಪ್ ನೀಡಲು ಕೂಡ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕ್ರಮವು ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಜೀವ ಉಳಿಸುವ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸುತ್ತದೆ. 

Tags:    

Similar News