ಅರ್ಜುನನಿಗೆ ನಿಖಿಲ್ ಹೋಲಿಕೆ; ನೀವು ಅಭಿಮನ್ಯು ಆಗಿರಲಿಲ್ಲವೇ ಎಂದು ಎಚ್‌ಡಿಕೆಗೆ ಸಿಎಂ ಟಾಂಗ್
ಚುನಾವಣೆ ಚಕ್ರವ್ಯೂಹದಲ್ಲಿ ನಿಖಿಲ್ ಅಭಿಮನ್ಯುವಾಗಿ ಬಲಿಯಾಗಲ್ಲ. ಬದಲಿಗೆ ಅರ್ಜುನನಾಗಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಮಂಡ್ಯ ಹಾಗೂ ರಾಮನಗರದಲ್ಲಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ಲವೇ ಎಂದು ಗೇಲಿ ಮಾಡಿದ್ದಾರೆ.;
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯು ಕೌರವರು ಹಾಗೂ ಪಾಂಡವರ ಕದನಕ್ಕೆ ಹೋಲಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಆ ಮೂಲಕ ಮೈತ್ರಿ ಪಕ್ಷ ಹಾಗೂ ಆಡಳಿತ ಪಕ್ಷದ ಮಧ್ಯೆ ವಾಗ್ಯುದ್ಧ ಆರಂಭವಾಗಿದೆ.
ಚುನಾವಣೆ ಚಕ್ರವ್ಯೂಹದಲ್ಲಿ ನಿಖಿಲ್ ಅಭಿಮನ್ಯುವಾಗಿ ಬಲಿಯಾಗಲ್ಲ. ಬದಲಿಗೆ ಅರ್ಜುನನಾಗಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಮಂಡ್ಯ ಹಾಗೂ ರಾಮನಗರದಲ್ಲಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ಲವೇ ಎಂದು ಗೇಲಿ ಮಾಡಿದ್ದಾರೆ.
ಎಚ್‌ಡಿಕೆ ಹೇಳಿದ್ದೇನು?
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಚುನಾವಣೆಯಲ್ಲಿ ತಂತ್ರ-ಕುತಂತ್ರ ಎಲ್ಲವೂ ನಡೆಯುತ್ತಿದೆ. ಅದೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇವೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷವನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ.
ವಿರೋಧಿಗಳು ಏನೇ ಕುತಂತ್ರ ಮಾಡಲಿ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಹೋದರರ ಈ ಹಿಂದಿನ ಟೀಕೆಗಳನ್ನು ಜನರ ಮುಂದಿಡಲಿ. ಆಗ ಯಾರು ಅರ್ಜುನ ಆಗುತ್ತಾರೆ. ಅಭಿಮನ್ಯು ಯಾರಾಗುತ್ತಾರೆ ಎಂದು ಜನರೇ ತೀರ್ಮಾನ ಮಾಡುತ್ತಾರೆ. ಚನ್ನಪಟ್ಟಣ ಚುನಾವಣೆ ದೇಶದ ಗಮನ ಸೆಳೆದಿದೆ. ವಿರೋಧಿಗಳ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ. ಈ ಬಾರಿ ಅರ್ಜುನನಾಗಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಲ್ಲರನ್ನೂ ಗೆಲ್ಲಿಸಿದವರಿಗೆ ಬಿ ಫಾರಂ ಯಾಕೆ ಸಿಗಲಿಲ್ಲ?
ಸಿ.ಪಿ. ಯೋಗೇಶ್ವರ್ ಅವರು ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿಯನ್ನು ಗೆಲ್ಲಿಸಿದ್ದು ನಾನೇ. ಡಾ.ಮಂಜುನಾಥ ಅವರನ್ನು ಗೆಲ್ಲಿಸಿದ್ದು ನಾನೇ ಎನ್ನುತ್ತಾರೆ. ಇಷ್ಟೆಲ್ಲಾ ಪಕ್ಷ ಸೇವೆ ಮಾಡಿದ್ದರೆ ಅವರ ಹೈಕಮಾಂಡ್ ಜತೆ ಮಾತನಾಡಿ ಬಿ ಫಾರಂ ಪಡೆದು ಯಾಕೆ ಚುನಾವಣೆಗೆ ನಿಲ್ಲಲಿಲ್ಲ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನೆಲ್ಲಾ ಕುತಂತ್ರ ಮಾಡಿದರು ಎಂಬುದು ಗೊತ್ತಿದೆ. ಈಗ ಅದು ಸಾಧ್ಯವಿಲ್ಲ ಎಂದು ಜನ ತೋರಿಸಿದ್ದಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಅವನತಿ ಆರಂಭವಾಗಲಿದೆ. ಹಾಸನಾಂಬೆ ದರ್ಶನ ಮಾಡಿ ಹೇಳುತ್ತಿದ್ದೇನೆ, ಬರೆದಿಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.
ಸರ್ಕಾರಕ್ಕೆ ಜನರ ಬಗ್ಗೆ ಅಲಕ್ಷ್ಯ
ಹಲವು ಪ್ರದೇಶದಲ್ಲಿ ಮಳೆಯ ಅನಾಹುತ ಇದೆ, ಬೆಂಗಳೂರು ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಎಲ್ಲಾರೂ ನೋಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರ ಬದುಕು ದಯನೀಯವಾಗಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮುಂಗಾರು ಮಳೆ ಉತ್ತಮವಾಗಿ ಸುರಿದು ಎಲ್ಲಾ ಜಲಾಶಯಗಳು ಭರ್ತಿ ಆಗುವೆ. ಕಾವೇರಿ ಕೊಳ್ಳದ ಅಣೆಕಟ್ಟೆಗಳು ಭರ್ತಿ ಆಗಿದ್ದರು ಕೂಡ ರೈತರಿಗೆ ನೀರು ಸಿಗುತ್ತಿಲ್ಲ. ತಮಿಳುನಾಡಿಗೆ ಯಥೇಚ್ಚವಾಗಿ ನೀರು ಬೀಡಲಾಗಿದೆ. ಇಂಥ ಸಂದರ್ಭದಲ್ಲಿಯೂ ರೈತರು ನೀರಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ರೈತರ ಆತ್ಮಹತ್ಯೆ ಪ್ರಕರಣಗಳು ವರದಿ ಆಗುತ್ತಿವೆ, ಆನ್ ಲೈನ್ ಗೇಮ್ ಲಾಟರಿ ದಂಧೆ ಯುವಕರ ಜೀವನ ಹಾಳು ಮಾಡುತ್ತಿದೆ. ಸರ್ಕಾರಕ್ಕೆ ಹೇಳೋರು ಕೇಳೂರು ಇಲ್ಲದಂತಹ ಸ್ಥಿತಿ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಹಾಗೂ ಇಡೀ ರಾಜ್ಯದಲ್ಲಿ ಮಾದಕ ವಸ್ತು ದಂಧೆ ಮೆರೆ ಮೀರಿದೆ. ಎಲ್ಲೆಡೆ ಆಡಳಿತ ಕಾನೂನು ವೈಫಲ್ಯ ಎದ್ದು ಕಾಣುತ್ತಿದೆ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಜಿಎಸ್ ಟಿ ವ್ಯವಸ್ಥೆಗೆ ಕಾಂಗ್ರೆಸ್ ಕಾರಣ
ತೆರಿಗೆ ಪದ್ಧತಿ ಬಗ್ಗೆ ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಪಕ್ಷವೇ. ಜಿಎಸ್‌ಟಿ ಗೂ ಇವರೇ ಕಾರಣ. ಇದು ಕಾಂಗ್ರೆಸ್ ಸರ್ಕಾರವೇ ಮಾಡಿದ್ದು. ಅದನ್ನು ಮಾಡುವಾಗ ಭವಿಷ್ಯದ ಏನಾಗುತ್ತದೆ ಎನ್ನುವುದು ಇವರ ಅರಿವಿಗೆ ಬರಲಿಲ್ಲವೇ? ಆಗ ಡಾ.ಮನಮೋಹನ್ ಸಿಂಗ್, ಪಿ.ಚಿದಂಬರಂ ಅವರೆಲ್ಲಾ ಕೂತೆ ಇದನ್ನೆಲ್ಲಾ ಮಾಡಿದ್ದಲ್ಲವೇ? ಎಂದು ಕೇಂದ್ರ ಸಚಿವರು ಕೇಳಿದರು.
ರಾಜ್ಯ ಸರ್ಕಾರ ಅನಗತ್ಯವಾಗಿ ಕೇಂದ್ರ ಸರ್ಕಾರದ ಜತೆ ಸಂಘರ್ಷ ಮಾಡಿಕೊಳ್ಳುತ್ತಿದೆ. ಇದರಿಂದ ಯಾವ ಉಪಯೋಗವೂ ಇಲ್ಲ. ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೊ ಹೇಳಿದರೆ ಆಗುವುದಿಲ್ಲ. ಬರೀ ಮಾತಾಡಿಕೊಂಡು ಕೂತರೆ ಸಮಸ್ಯೆ ಬಗೆಹರಿಯುವುದಿಲ್ಲ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ ಎನ್ನುವ ಮಾತು ಇದೆ. ಈ ಸರ್ಕಾರಕ್ಕೆ ಈ ಮಾತು ಅನ್ವಯ ಆಗುತ್ತದೆ ಎಂದು ಅವರು ಲೇವಡಿ ಮಾಡಿದರು.
ಸಿಎಂ ಹೇಳಿದ್ದೇನು?
ಕುಮಾರಸ್ವಾಮಿಯವರು ಎರಡು ಬಾರಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಅಭಿಮನ್ಯುವಲ್ಲ, ಅರ್ಜುನನಾಗಿ ಹೊರಹೊಮ್ಮಮಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ಹಾಗೂ ನಂತರ ರಾಮನಗರದಲ್ಲಿ ಸೋತಿದ್ದರು. ಆಗ ಅವರು ಅಭಿಮನ್ಯು ಆಗಿದ್ದರೆ ವಿನಾ ಅರ್ಜುನರಾಗಿಲ್ಲ. ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಕೋಮುವಾದಿಗಳ ಜೊತೆ ಜಾತ್ಯಾತೀತ ಎನಿಸಿಕೊಂಡವರು ಮೈತ್ರಿ ಮಾಡಿಕೊಂಡಾಗಲೇ ಅದು ಎಲ್ಲರಿಗೂ ಅರ್ಥವಾಗಿದೆ ಎಂದು ಟೀಕಿಸಿದರು.