Karnataka By-Election| ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ; ಬಿಜೆಪಿ-ಜೆಡಿಸ್ ಅಭ್ಯರ್ಥಿಯಾಗಿ ಆಯ್ಕೆ
ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಕೊನೆಗೂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸಿಡಿದು ಹೋಗಿ ಕಾಂಗ್ರೆಸ್ ಪಕ್ಷದ ʼಅಚ್ಚರಿ ಅಭ್ಯರ್ಥಿʼಯಾಗಿರುವ ಸಿ.ಪಿ. ಯೋಗೇಶ್ವರ್ ಎದುರು ನಿಖಿಲ್ ಸ್ಪರ್ಧಿಸಲಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಕೊನೆಗೂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬಿಜೆಪಿಯಿಂದ ಸಿಡಿದು ಹೋಗಿ ಕಾಂಗ್ರೆಸ್ ಪಕ್ಷದ ʼಅಚ್ಚರಿ ಅಭ್ಯರ್ಥಿʼಯಾಗಿ ಆಯ್ಕೆಯಾಗಿರುವ ಸಿ.ಪಿ. ಯೋಗೇಶ್ವರ್ ಎದುರು ನಿಖಿಲ್ ಸ್ಪರ್ಧಿಸಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಕಳೆದ ಎರಡು ಬಾರಿ ಅಂದರೆ ಮಂಡ್ಯ ಲೋಕಸಭೆ (2019) ಮತ್ತು ರಾಮನಗರ ವಿಧಾನಸಭೆ (2023) ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂ ಬಾರಿ ಸೋಲನುಭವಿಸಿದ್ದರು. ಕುಟುಂಬ ರಾಜಕಾರಣದ ಕೃಪಾಕಟಾಕ್ಷವಿದ್ದರೂ ಮತ ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದ್ದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಈಗ ಮೂರನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಆಯ್ಕೆಯನ್ನು ಗುರುವಾರ ಅಪರಾಹ್ನ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಭೆ ನಡೆಸಿ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನಿಖಿಲ್ ಉಮೇದುವಾರಿಕೆ ಬಗ್ಗೆ ಪ್ರಕಟಿಸಿದರು. ಅದಕ್ಕೆ ಮುನ್ನ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ ಸಭೆಯಲ್ಲಿ ವಿವರವಾದ ಮಾತುಕತೆ ನಡೆಯಿತು.
ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೇ ನೀಡಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಳೇಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಜೆಡಿಎಸ್ ತೆಕ್ಕೆಯಲ್ಲಿದ್ದ ರಾಮನಗರವನ್ನು ಕಾಂಗ್ರೆಸ್ ಕಬಳಿಸಿದ ಬಳಿಕ ಚನ್ನಪಟ್ಟಣ ಕ್ಷೇತ್ರವನ್ನು ತೆಕ್ಕೆಗೆ ಹಾಕಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ.
ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರದಲ್ಲೇ ಬೀಡುಬಿಟ್ಟು ಯಾರೇ ಅಭ್ಯರ್ಥಿಯಾದರೂ ತಾವೇ ಅಭ್ಯರ್ಥಿ ಆದಂತೆ ಎಂದು ಘೋಷಿಸಿದ್ದರು. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ, ಅದೂ ತನ್ನ ಸೋದರ ಡಿ.ಕೆ. ಸುರೇಶ್ ಸಂಸದರಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಳೆದುಕೊಂಡಿದ್ದರು. ಕುಮಾರಸ್ವಾಮಿ ಅವರ ಭಾವ ಡಾ. ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸಿ ಸುರೇಶ್ ಅವರನ್ನು ಸೋಲಿಸಿದ್ದರು. ಹಾಗಾಗಿ ಕುಮಾರಸ್ವಾಮಿ ಅವರ ಕ್ಷೇತ್ರವನ್ನು ಗೆದ್ದು ಪ್ರತೀಕಾರ ಸಾಧಿಸಲು ಡಿ.ಕೆ. ಶಿವಕುಮಾರ್ ಪಣತೊಟ್ಟಿದ್ದಾರೆ. ತಮ್ಮ ಸೋದರನನ್ನು ಅಭ್ಯರ್ಥಿ ಮಾಡುವ ಅವಕಾಶವಿದ್ದರೂ, ಗೆಲುವಿನ ಗುರಿಯೊಂದಿಗೆ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರನ್ನು ಸೆಳೆದು ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ನೋಡಿಕೊಂಡಿದ್ದಾರೆ.
ಆ ಕಾರಣಕ್ಕಾಗಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹಾಗೂ ಜನ ಬೆಂಬಲ ಹೊಂದಿರುವ ಸಿ.ಪಿ. ಯೋಗೇಶ್ವರ್ ಮತ್ತು ಕಾಂಗ್ರೆಸ್ ನ ಮತ ಬ್ಯಾಂಕ್ ಜತೆಯಾಗಿ ಉಂಟಾಗಿರುವ ಶಕ್ತಿಯ ವಿರುದ್ಧ ನಿಖಿಲ್ ಕುಮಾರಸ್ವಾಮಿ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.