ಜೈಲಿನಿಂದಲೇ ದುಷ್ಕೃತ್ಯಕ್ಕೆ ಸಂಚು ; ಎನ್‌ಐಎ ವಶಕ್ಕೆ ಆರೋಪಿಗಳು

ನ್ಯಾಯಾಧೀಶ ಕೆಂಪರಾಜ್ ಅವರು ಎನ್‌ಐಎ ಅಧಿಕಾರಿಗಳ ಮನವಿಗೆ ಸ್ಪಂದಿಸಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಎನ್‌ಐಗೆ ವಶಕ್ಕೆ ನೀಡಿ ಆದೇಶಿಸಿದ್ದಾರೆ.;

Update: 2025-07-09 10:32 GMT

ಎನ್​ಐಎ 

ಜೈಲಿನಿಂದಲೇ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಆರು ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿ ಆದೇಶಿಸಿದೆ. 

ನ್ಯಾಯಾಧೀಶ ಕೆಂಪರಾಜ್ ಅವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ಒಪ್ಪಿಸಿದರು. ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಆರೋಪಿಗಳನ್ನು ಎನ್‌ಐಎ ಪರವಾಗಿ ಡಿವೈಎಸ್‌ಪಿ ಸುಶೀಲಾ ಅವರು ಹಾಜರುಪಡಿಸಿದರು. ಆರೋಪಿಗಳ ಮುಂದಿನ ವಿಚಾರಣೆಯನ್ನು ಜುಲೈ 14 ಕ್ಕೆ ಮುಂದೂಡಲಾಗಿದೆ.   

ಪ್ರಕರಣದ ವಿವರ

ಜೈಲಿನಿಂದಲೇ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಬೆಂಗಳೂರು ಮತ್ತು ಕೋಲಾರದ ಐದು ಸ್ಥಳಗಳಲ್ಲಿ ದಾಳಿ ನಡೆಸಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದರು.

ಬಂಧಿತರಲ್ಲಿ ಅನೀಸ್ ಫಾತಿಮಾ ಅವರು ಎರಡನೇ ಆರೋಪಿಯಾಗಿರುವ ಜುನೈದ್ ಅಹ್ಮದ್‌ ಅವರ ತಾಯಿ. ಇವರು ಇತರೆ ಆರೋಪಿಗಳೊಂದಿಗೆ ಹಣದ ವಹಿವಾಟುಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. 

ಬೆಂಗಳೂರು ನಗರ ಸಶಸ್ತ್ರ ಮೀಸಲು (ಉತ್ತರ) ವಿಭಾಗದ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿರುವ ಚಾನ್ ಪಾಷಾ ಅವರು ಕರ್ತವ್ಯದ ಅವಧಿಯಲ್ಲೇ ಬೆಂಗಳೂರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಟಿ. ನಸೀರ್‌ನ ಪೊಲೀಸ್ ಬೆಂಗಾವಲು ವಿವರಗಳನ್ನು ಇತರೆ ಸಹ ಆರೋಪಿಗಳಿಗೆ ಒದಗಿಸುತ್ತಿದ್ದರು ಎಂದು ಹೇಳಲಾಗಿದೆ.

ಪರಪ್ಪನ ಅಗ್ರಹಾರ ಬೆಂಗಳೂರಿನ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್. ಎಸ್ ಅವರು ಇತರ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಟಿ. ನಸೀರ್‌ಗೆ ನೀಡಲು ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿದೆ.

Tags:    

Similar News