ಜಿಂಬಾಬ್ವೆ ವಿದ್ಯಾರ್ಥಿ ಸಾವು: ಪಂಜಾಬ್‌ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ನೊಟೀಸ್

ಜಿಂಬಾಬ್ವೆ ವಿದ್ಯಾರ್ಥಿ ಲೀರಾಯ್ ಸಾವಿಗೆ ಸಂಬಂಧಿಸಿದಂತೆ ಎನ್‌ಎಚ್‌ಆರ್‌ಸಿ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರು, ಬಟಿಂಡಾದ ಗುರು ಕಾಶಿ ವಿಶ್ವವಿದ್ಯಾಲಯ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿದೆ.;

Update: 2025-08-27 08:52 GMT

ಜಿಂಬಾಬ್ವೆಯ ವಿದ್ಯಾರ್ಥಿ ಲೀರಾಯ್ ಸಾವಿನ ವರದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪಂಜಾಬ್‌ ಪೊಲೀಸ್ ಮಹಾನಿರ್ದೇಶಕರು ಮತ್ತು ಬಟಿಂಡಾದ ಗುರು ಕಾಶಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿದೆ.

ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಆಯೋಗವು ಎರಡು ವಾರಗಳಲ್ಲಿ ವಿವರವಾದ ವರದಿ ಕೋರಿದೆ. ಜಿಂಬಾಬ್ವೆಯ ವಿದ್ಯಾರ್ಥಿಯ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿತ್ತು.ಬಟಿಂಡಾದ ಏಮ್ಸ್‌ನಲ್ಲಿ ಅವರು ಮೃತಪಟ್ಟಿದ್ದರು. ವರದಿಯ ವಿಷಯಗಳು ನಿಜವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ಆಯೋಗ ಗಮನಿಸಿತ್ತು. 

ಆ.13 ರಂದು ಶಸ್ತ್ರಸಜ್ಜಿತ ಜನರ ಗುಂಪಿನಿಂದ ಹಲ್ಲೆಗೊಳಗಾಗಿದ್ದ 22 ವರ್ಷದ ಜಿಂಬಾಬ್ವೆ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಬಟಿಂಡಾ ಜಿಲ್ಲೆಯ ತಲ್ವಾಂಡಿ ಸಾಬೊ ಪಟ್ಟಣದ ಗುರು ಕಾಶಿ ವಿಶ್ವವಿದ್ಯಾಲಯದ ಕಾವಲುಗಾರ ದಿಲ್‌ಪ್ರೀತ್ ಸಿಂಗ್ ಸೇರಿದಂತೆ ಎಂಟು ಜನರು ವಿದ್ಯಾರ್ಥಿ ಝಿವೇಯಾ ಲೀರಾಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಕೋಲು, ಬೇಸ್‌ಬಾಲ್ ಬ್ಯಾಟ್‌ ಮತ್ತು ಹರಿತವಾದ ಆಯುಧಗಳನ್ನು ಹಲ್ಲೆಗೆ ಬಳಸಿದ್ದರು ಎಂದು ಆರೋಪಿಸಲಾಗಿದೆ. ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಲೀರಾಯ್ ಬಟಿಂಡಾದ ಏಮ್ಸ್‌ನಲ್ಲಿ ನಿಧನರಾಗಿದ್ದರು.

ಪೊಲೀಸರ ಪ್ರಕಾರ, ಹಿಂದಿನ ದಿನ ಲೀರಾಯ್ ಅವರ ಕಾರಿನಲ್ಲಿ ಬೇಸ್‌ಬಾಲ್ ಬ್ಯಾಟ್ ಕಂಡುಬಂದ ನಂತರ ಭದ್ರತಾ ಸಿಬ್ಬಂದಿ ಮತ್ತು ಅವರ ನಡುವೆ ನಡೆದ ವಾಗ್ವಾದವೇ ಹಲ್ಲೆಗೆ ಕಾರಣವಾಗಿತ್ತು. ಎಂಟು ಜನರ ವಿರುದ್ಧ ಈ ಹಿಂದೆ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಈಗ ಕೊಲೆ ಆರೋಪ ಸೇರಿಸಲಾಗಿದೆ. ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ. ದಾಳಿಯ ಹಿಂದಿನ ಸ್ಪಷ್ಟ ವಿವರಣೆ ನೀಡಲು ಪೊಲೀಸರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ. 

Tags:    

Similar News