New Indian traffic index | ಬೆಂಗಳೂರು ಅಧಿಕ ದಟ್ಟಣೆಯ ನಗರ

ಬೆಂಗಳೂರು ವಾಹನ ದಟ್ಟಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ ಎರಡನೆಯ, ದೆಹಲಿ 3ನೆಯ ಮತ್ತು ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿವೆ.

Update: 2024-10-04 06:56 GMT
ಆಗಸ್ಟ್ 12, 2024 ರಂದು ಭಾರೀ ಮಳೆ ನಂತರ ಜಯದೇವ ಆಸ್ಪತ್ರೆ ಬಳಿ ಜಲಾವೃತವಾಗಿರುವ ಅಂಡರ್‌ಪಾಸ್

ಹೊಸದಾಗಿ ರೂಪಿಸಿದ ಸಂಚಾರ ಗುಣಮಟ್ಟ ಸೂಚ್ಯಂಕ(ಟ್ರಾಫಿಕ್ ಕ್ವಾಲಿಟಿ ಇಂಡೆಕ್ಸ್ , ಟಿಕ್ಯುಐ)ವು ಬೆಂಗಳೂರನ್ನು ಭಾರತದ ಅತ್ಯಂತ ದಟ್ಟಣೆಯ ನಗರ ಎಂದು ಹೇಳಿದೆ. ಬೆಂಗಳೂರಿಗೆ ಆಮ್‌ಸ್ಟರ್‌ಡಾಂ ಮೂಲದ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್‌ ಇದೇ ಹೆಸರು ನೀಡಿದೆ. 

ಬೆಂಗಳೂರಿನ 800-1,000 ವರೆಗಿನ ಅಂಕ ಆತಂಕಕಾರಿ ಎಂದು ಹೇಳಲಾಗಿದೆ. ಮುಂಬೈ 787 ಅಂಕಗಳೊಂದಿಗೆ ಎರಡನೇ ಸ್ಥಾನ, ದೆಹಲಿ 747 ಅಂಕದೊಂದಿಗೆ 3ನೆಯ ಮತ್ತು ಹೈದರಾಬಾದ್ 718 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿವೆ.

ಸಂಶೋಧನೆ ಪ್ರಕಾರ, ಬೆಂಗಳೂರಿನಲ್ಲಿ ಬೆಳಗ್ಗೆ 8 ಗಂಟೆಗೆ ಚಾಲನೆ ಮಾಡುವುದು ಉತ್ತಮ. ಜನದಟ್ಟಣೆ ಸಂಜೆ 6 ಗಂಟೆಗೆ ಗರಿಷ್ಠ ಮಟ್ಟ ಮುಟ್ಟುತ್ತದೆ. ಈ ಅಂಕಿಅಂಶಗಳನ್ನು ಪ್ರಯಾಣ ಪರಿಹಾರ ಪೂರೈಸುವ ಮೂವ್ ಇನ್ ಸಿಂಕ್ ನಡೆಸಿದ ಮೊಬಿಲಿಟಿ ಸಿಂಪೋಸಿಯಂನಲ್ಲಿ ಹಂಚಿಕೊಳ್ಳಲಾಗಿದೆ.

ಸಿಂಪೋಸಿಯಂನಲ್ಲಿ, ಮೂವ್ ಇನ್ ಸಿಂಕ್‌ನ ಸಹ ಸಂಸ್ಥಾಪಕ ದೀಪೇಶ್ ಅಗರ್ವಾಲ್, ಟಿಕ್ಯುಐ ನ್ನು ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.

ಮೂಲ ಕಾರಣದ ಅಧ್ಯಯನ: ಚರ್ಚೆ ಸಂದರ್ಭದಲ್ಲಿ, ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಅನುಚೇತ್ ಎಂ.ಎನ್. ಅವರು ʻಎಐ ಚಾಲಿತ ಕ್ಯಾಮೆರಾಗಳಿದ್ದರೂ, ಗರಿಷ್ಠ ದಟ್ಟಣೆ ಇರುವಾಗ ಮತ್ತು ಮಳೆಗಾಲದ ಸಮಯದಲ್ಲಿ ಸಂಚಾರ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳಿದರು. ಇಲಾಖೆ ಈಗ 55 ಪ್ರಮುಖ ಜಂಕ್ಷನ್‌ಗಳಲ್ಲಿ ಸುಧಾರಿತ ತಂತ್ರಜ್ಞಾನ ಆಧಾರಿತ ಟ್ರಾಫಿಕ್ ಸಿಮ್ಯುಲೇಟರ್‌ಗಳನ್ನು ಪರಿಚಯಿಸಲು ಯೋಜಿಸಿದೆ ಎಂದು ತಿಳಿಸಿದರು. 

ಬೆಂಗಳೂರಿನ ಸಂಚಾರ ದಟ್ಟಣೆಗೆ ಮೂಲ ಕಾರಣ ಕಂಡುಕೊಂಡು, ಅದಕ್ಕೆ ಪರಿಹಾರ ಕಂಡುಹಿಡಿಯಬೇಕು ಎಂದು ತಜ್ಞರೊಬ್ಬರು ಸಲಹೆ ನೀಡಿದರು. ಸಾರ್ವಜನಿಕ ಸಾರಿಗೆ ಹೆಚ್ಚಳ ಮಾಡಬೇಕು ಮತ್ತು ಫ್ಲೈಓವರ್‌ ನಿರ್ಮಾಣ ಕೂಡದು ಎಂದು ಒಬ್ಬರು ಹೇಳಿದರು. 

ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆಗಳು, ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಪಾದಚಾರಿ ಸ್ನೇಹಿ ಮೂಲಸೌಕರ್ಯಗಳನ್ನು ನಿರ್ಮಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹೇಳಿದರು.

Tags:    

Similar News