Caste Census | ಲಿಂಗಾಯತರಿಂದ ಪತ್ಯೇಕ ಜಾತಿ ಗಣತಿ; ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು
ರಾಜ್ಯ ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ತೋರಿಸಲಾಗಿದೆ ಎನ್ನಲಾಗಿದೆ. ಹಾಗಾಗಿ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿ ಅನ್ಯಾಯವಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಖಾಸಗಿಯಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ.;
ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಜಾತಿ ಗಣತಿ ವರದಿಗೆ ಸೆಡ್ಡು ಹೊಡೆದು ತಮ್ಮದೇ ಆದ ಜಾತಿಗಣತಿ ಮಾಡಲು ವೀರಶೈವ ಲಿಂಗಾಯತ ಸಮುದಾಯ ನಿರ್ಧರಿಸಿದ್ದು, ವೀರಶೈವ ಲಿಂಗಾಯತ ಸಮುದಾಯದ ಸಂಖ್ಯಾ ಬಲದ ಶಕ್ತಿಯನ್ನು ಸಮಾಜ ಮತ್ತು ಸರ್ಕಾರಕ್ಕೆ ತೋರಿಸುವ ಮೂಲಕ ತಮ್ಮ ಸಮುದಾಯದ ನಿಖರ ಜನಸಂಖ್ಯೆಯನ್ನು ತಿಳಿದುಕೊಳ್ಳಲು ಮುಂದಾಗಿದೆ.
ಈಗಾಗಲೇ ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದು, ಅದರಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಎಲ್ಲ ಉಪ ಪಂಗಡಗಳು, ಅವರ ಶಿಕ್ಷಣ, ಉದ್ಯೋಗ, ಆರ್ಥಿಕ ಪರಿಸ್ಥಿತಿ, ಉಪ ಜಾತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಿದ್ದರಾಮಯ್ಯ ಅವರು 2013 ರಲ್ಲಿ ಮೊದಲ ಬಾರಿ ಮುಖ್ಯಮಂತಿಯಾಗಿದ್ದ ಅವಧಿಯಲ್ಲಿ ಎಚ್. ಕಾಂತರಾಜ್ ಅವರು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಧ್ಯಯನ ವರದಿ (ಜಾತಿ ಸಮೀಕ್ಷೆ) ತಯಾರಿಸಿದ್ದು, ಕಳೆದ ಏಳೆಂಟು ವರ್ಷಗಳಿಂದ ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೇ ಮುಂದೂಡುತ್ತಲೇ ಬರಲಾಗುತ್ತಿದೆ. ಹತ್ತು ವರ್ಷದಲ್ಲಿ ಮೂರು ಪಕ್ಷಗಳ ಸರ್ಕಾರಗಳು ಅಧಿಕಾರ ನಡೆಸಿದ್ದು, ಕಾಂತರಾಜ್ ವರದಿಯ ಬಗ್ಗೆ ಸಮಾಜದಲ್ಲಿ ಸಾಕಷ್ಟು ಆಕ್ಷೇಪಗಳು, ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆ ವರದಿಯನ್ನು ಅಧಿಕೃತವಾಗಿ ಜಾರಿಗೊಳಿಸಲು ಯಾವುದೇ ಪಕ್ಷದ ಸರ್ಕಾರಗಳು ಧೈರ್ಯ ಮಾಡುತ್ತಿಲ್ಲ.
ಆ ವರದಿ ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ, ಸೋರಿಕೆಯಾಗಿರುವ ಮಾಹಿತಿ ಪಕಾರ ದಲಿತರು ಮತ್ತು ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರ ಜನಸಂಖ್ಯೆ ರಾಜ್ಯದಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದು ಆ ನಂತರದ ಸ್ಥಾನದಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಜನಸಂಖ್ಯೆ ಇದೆ ಎಂಬ ಮಾಹಿತಿ ಹೊರ ಬಿದ್ದಿದೆ. ಆ ಕಾರಣಕ್ಕಾಗಿ ಎರಡೂ ಪ್ರಮುಖ ಸಮುದಾಯಗಳು ರಾಜ್ಯ ಸರ್ಕಾರ ನಡೆಸಿರುವ ಈ ಜಾತಿ ಸಮೀಕ್ಷೆಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಿವೆ.
ಕಳೆದ ಒಂದು ಶತಮಾನದಿಂದ ಅಧಿಕೃತ ಜಾತಿಗಣತಿ ನಡೆಯದಿದ್ದರೂ, ಎಲ್ಲ ಸಮುದಾಯಗಳು ತಮ್ಮ ತಮ್ಮ ಜಾತಿಗಳನ್ನು ನಿರ್ಧಿಷ್ಟ ಸಂಖ್ಯೆಯಲ್ಲಿವೆ ಎಂದು ಅಂದಾಜಿಸಿ ಅದೇ ಮಾನದಂಡದಲ್ಲಿ ರಾಜಕೀಯವಾಗಿ ಪ್ರಯೋಜನಗಳನ್ನು ಪಡೆದುಕೊಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕೃತವಾಗಿ ಜಾತಿಗಣತಿ ಬಿಡುಗಡೆಯಾದರೆ ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ ಅನ್ನುವದರ ಮೇಲೆ ಆಯಾ ಸಮುದಾಯಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು, ವಿಶೇಷವಾಗಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡಲು ಅನುಕೂಲವಾಗುತ್ತದೆ ಎನ್ನುವುದು ಈ ಜಾತಿ ಗಣತಿಯ ಪಮುಖ ಉದ್ದೇಶವಾಗಿತ್ತು.
ಆದರೆ, ಸರ್ಕಾರ ಮಾಡಿರುವ ಜಾತಿ ಗಣತಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಗುರಿಯಾಗಿಸಿಕೊಂಡೇ ಮಾಡಲಾಗಿದೆ ಎಂದು ಬಹಿರಂಗವಾಗಿಯೇ ಆರೋಪ ಕೇಳಿ ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ತಮ್ಮ ರಾಜಕೀಯ ಲಾಭದ ಅನುಕೂಲಕ್ಕೆ ಇಟ್ಟುಕೊಂಡಿದ್ದಾರೆ ಎಂಬ ಆರೋಪವನ್ನು ಬಿಜೆಪಿ ನೇರವಾಗಿಯೇ ಮಾಡಿದ್ದು, ಅವರ ಈ ನಡೆಯಿಂದ ಸಮಾಜದಲ್ಲಿ ಗೊಂದಲ ಉಂಟಾಗಿದ್ದು, ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯ ಅಸಮಾಧಾನಗೊಂಡಿದ್ದು, ಆ ಹಿನ್ನೆಲೆಯಲ್ಲಿ ತನ್ನದೇ ಆದ ಜಾತಿ ಸಮೀಕ್ಷೆ ಮಾಡಿಕೊಳ್ಳಲು ಮುಂದಾಗಿದೆ.
ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕಾ ಪ್ರಸನ್ನ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ನಮ್ಮ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಮಹಾಸಭೆ ವತಿಯಿಂದ ಜಾತಿ ಸಮೀಕ್ಷೆ ಮಾಡಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸಮೀಕ್ಷೆಯ ಸಾಫ್ಟ್ ವೇರ್ ಸಿದ್ದಪಡಿಸಿದ್ದು, ಸೂಕ್ತ ಸಂದರ್ಭ ನೋಡಿಕೊಂಡು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತಾಲೂಕು ಘಟಕಗಳ ಮೂಲಕ ಸಮೀಕ್ಷೆ
ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳಲ್ಲಿ ರಾಜ್ಯ ಘಟಕಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಈಗಾಗಲೇ ಎಲ್ಲ ಜಿಲ್ಲಾ ಘಕಟಗಳಿಗೂ ಸಮಿತಿ ರಚನೆ ಮಾಡಿದ್ದು, ಸುಮಾರು 150 ತಾಲೂಕು ಘಟಕಗಳನ್ನು ರಚನೆ ಮಾಡಲಾಗಿದೆ. ಉಳಿದ ತಾಲೂಕುಗಳಿಗೂ ಶೀಘ್ರವೇ ಚುನಾಯಿತ ಸಮಿತಿ ರಚನೆ ಮಾಡಿ. ಆಯಾ ತಾಲೂಕು ಘಟಕಗಳ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಸುಮಾರು 101 ಉಪ ಪಂಗಡಗಳಿದ್ದು, ಆಯಾ ಉಪ ಪಂಗಡಗಳು ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ಬೇರೆ ಬೇರೆ ಪ್ರವರ್ಗಗಳಲ್ಲಿ ಹಂಚಿ ಹೋಗಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದಿಂದ ಬರುವ ಇನ್ನಿತರ ಸವಲತ್ತುಗಳನ್ನು ಪಡೆಯಲು ಸುಮಾರು ಅರ್ಧಕ್ಕೂ ಹೆಚ್ಚು ವೀರಶೈವ ಲಿಂಗಾಯತ ಉಪ ಪಂಗಡಗಳು ಪ್ರವರ್ಗ-1, ಪ್ರವರ್ಗ-2ಎ ಗಳಲ್ಲಿ ಸೇರಿಕೊಂಡಿವೆ. ಆ ಸಮುದಾಯಗಳು ಸರ್ಕಾರಿ ದಾಖಲೆಗಳಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ನಮೂದಿಸದೇ ಇರುವುದು ವೀರಶೈವ ಲಿಂಗಾಯತ ಸಮುದಾಯದ ಅಧಿಕೃತ ಜನಸಂಖ್ಯೆಯನ್ನು ತಿಳಿದುಕೊಳ್ಳುವುದು ಕಷ್ಟವಾಗಿದೆ.
ಮೀಸಲಾತಿ ಗೊಂದಲ
ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಜಂಗಮರು, ಆರಾಧ್ಯರು, ಪಂಚಮಸಾಲಿ, ಆದಿ ಬಣಜಿಗ, ಬಣಜಿಗ, ಕುಡು ಒಕ್ಕಲಿಗ, ನೊಳಂಬ, ಗಾಣಿಗ, ಸಾದರ, ಶೀಲವಂತ ಸೇರಿದಂತೆ ಸಮಾಜದಲ್ಲಿ ಮೇಲ್ವರ್ಗದಲ್ಲಿ ಗುರುತಿಸಿಕೊಂಡಿರುವ ಕೆಲವು ಉಪ ಪಂಗಡಗಳು ವೀರಶೈವ ಲಿಂಗಾಯತ ಎಂದು ಸರ್ಕಾರದ ದಾಖಲೆಗಳಲ್ಲಿಯೂ ನೇರವಾಗಿ ದಾಖಲಿಸಿ ಗುರುತಿಸಿಕೊಳ್ಳುತ್ತವೆ. ಆದರೆ, ಶೇಕಡಾ 70ಕ್ಕಿಂತಲೂ ಹೆಚ್ಚು ಉಪ ಪಂಗಡಗಳು ಸರ್ಕಾರದ ಮೀಸಲಾತಿಯ ಸವಲತ್ತುಗಳು ಕೈತಪ್ಪುತ್ತವೆ ಎನ್ನುವ ಕಾರಣಕ್ಕೆ ವೀರಶೈವ ಲಿಂಗಾಯತ ಎಂದು ದಾಖಲಿಸಿಲ್ಲ ಎಂಬ ಮಾಹಿತಿ ಇದೆ.
ವೀರಶೈವ ಲಿಂಗಾಯತ ಸಮುದಾಯದ ರಾಜ್ಯ ಸರ್ಕಾರದ ಜಾತಿ ವರ್ಗೀಕರಣ ಪಟ್ಟಿಯಲ್ಲಿ ಪ್ರವರ್ಗ 3ಬಿ ಯಲ್ಲಿ ಗುರುತಿಸಿಕೊಂಡಿದ್ದು, ಲಿಂಗಾಯತ ಎಂದು ನಮೂದಿಸದ ಅನೇಕ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 1, ಪ್ರವರ್ಗ 2ಎ ನಲ್ಲಿ ಸೇರಿಕೊಂಡಿವೆ. ಹೀಗಾಗಿ ಲಿಂಗಾಯತ ಎಂದು ನಮೂದಿಸಿದರೆ ಪ್ರವರ್ಗ 3ಬಿ ಅಡಿಯಲ್ಲಿ ಸೇರಿಸಲಾಗುತ್ತದೆ. ಇದರಿಂದ ಲಿಂಗಾಯತರಲ್ಲಿಯೇ ಸಾಮಾಜಿಕವಾಗಿ ಮೇಲ್ವರ್ಗದಲ್ಲಿ ಗುರುತಿಸಿಕೊಂಡಿರುವ ಪ್ರಭಲ ಸಮುದಾಯಗಳ ಜೊತೆಗೆ ಪೈಪೋಟಿ ನಡೆಸಿ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಅಳಲು, ಆತಂಕ, ಈ ಸಣ್ಣ ಸಮುದಾಯಗಳಲ್ಲಿದೆ.
ವೀರಶೈವ ಲಿಂಗಾಯತ ಉಪಪಂಗಡಗಳೆಂದು ಗುರುತಿಸಿರುವ ಅಗಸ, ಬೋವಿ, ಕ್ಷೌರಿಕ, ಮಾದಾರಾ. ಚಮ್ಮಾರ, ಕೊರಮ ಸೇರಿದಂತೆ ಬಹುತೇಕ ಉಪ ಪಂಗಡಗಳು ಹಿಂದೂ ಧರ್ಮದಲ್ಲಿರುವ ಜಾತಿಗಳೇ ಆಗಿರುವುದರಿಂದ ಅಲ್ಲದೇ ಮೀಸಲಾತಿ ಪಟ್ಟಿಯಲ್ಲಿ ಎಸ್ಸಿ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಲಿಂಗಾಯತ ಉಪ ಪಂಗಡಗಳೆಂದು ಗುರುತಿಸಿಕೊಂಡಿಲ್ಲ. ಅದೇ ಕಾರಣಕ್ಕೆ ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಮೇಲ್ವರ್ಗದ ಸಮುದಾಯಗಳು ಲಿಂಗಾಯತ ಜಾತಿ ಎಂದು ನಮೂದಿಸಿದ್ದು, ಉಳಿದ ಸಮುದಾಯಗಳು ಲಿಂಗಾಯತ ಪದ ಬಳಕೆ ಮಾಡಿಲ್ಲ. ಈಗ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಮಾಡಲು ತೀರ್ಮಾನಿಸಿರುವ ಜಾತಿ ಗಣತಿ ಸಂದರ್ಭ ದಲ್ಲಿಯೂ ವೀರಶೈವ ಲಿಂಗಾಯತ ಉಪ ಪಂಗಡಗಳೆಂದು ಸೇರಿಸಿಕೊಂಡಿರುವ ಸಮುದಾಯಗಳು ಮಹಾಸಭೆ ನಡೆಸುವ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಸಮುದಾಯದ ಮಾಹಿತಿಯನ್ನು ನೀಡುತ್ತಾರೊ ಇಲ್ಲವೋ ಎನ್ನುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ವೀರಶೈವ ಮಹಾಸಭಾ ಕೂಡ ಸಮೀಕ್ಷೆಯಲ್ಲಿ ಸಮುದಾಯಗಳ ಉಪ ಪಂಗಡಗಳ ಹೆಸರುಗಳನ್ನು ನಮೂದಿಸಲು ಅವಕಾಶ ಕೊಡಬೇಕಾ ಅಥವಾ ಬೇಡವೇ ಎನ್ನುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಮಾಡಿಲ್ಲ ಎಂಬ ಮಾಹಿತಿ ಇದೆ. ಆದರೆ, ಉಪ ಪಂಗಡಗಳನ್ನು ನಮೂದಿಸಿದರೆ, ಆಯಾ ಉಪ ಪಂಡಗಳಿಗೆ ಜನಸಂಖ್ಯೆ ಆಧಾರದಲ್ಲಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡಲು ಅವಕಾಶವಾಗುತ್ತದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಒತ್ತಡ ತಂತ್ರ
ರಾಜ್ಯ ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ತೋರಿಸಿರುವುದರಿಂದ ಸಮುದಾಯಕ್ಕೆ ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿ ಅನ್ಯಾಯವಾಗುತ್ತದೆ ಎನ್ನುವ ಕಾರಣಕ್ಕೆ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಖಾಸಗಿಯಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ. ತಾನು ಮಾಡುವ ಜಾತಿ ಸಮೀಕ್ಷೆಯನ್ನು ಬಿಡುಗಡೆಗೊಳಿಸಿ ಅದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎನ್ನುವ ಒತ್ತಡವನ್ನು ಹಾಕುವ ಆಲೋಚನೆ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಖಾಸಗಿಯಾಗಿ ಒಂದು ಸಮುದಾಯ ಮಾಡುವ ಜಾತಿ ಸಮೀಕ್ಷೆಯನ್ನು ಸರ್ಕಾರ ಯಾವ ರೀತಿ ನೋಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಒಟ್ಟಿನಲ್ಲಿ ಜಾತಿ ಸಮೀಕ್ಷೆಯ ವರದಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳ ನಡುವೆಯೇ ವೀರಶೈವ ಲಿಂಗಾಯತ ಸಮುದಾಯ ಖಾಸಗಿಯಾಗಿ ಜಾತಿ ಸಮೀಕ್ಷೆ ಮಾಡುವ ಮೂಲಕ ಸರ್ಕಾರಕ್ಕೆ ಸವಾಲು ಹಾಕುವ ಕೆಲಸ ಮಾಡುತ್ತಿದೆ. ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕು.