ಎನ್‌ಡಿಆರ್‌ಎಫ್ ಅನುದಾನ ಗ್ಯಾರಂಟಿಗಳಿಗೆ ಬಳಸುತ್ತಿಲ್ಲ, ಇದು ಶುದ್ಧ ಸುಳ್ಳು: ಸಿಎಂ
ಕರ್ನಾಟಕದ ಗ್ಯಾರಂಟಿ ಮಾದರಿಯನ್ನು ಬಿಹಾರ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಹರಿಯಾಣದಂತಹ ಹಲವು ರಾಜ್ಯಗಳು ಅನುಕರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದಿದ್ದರು.
ಸಿಎಂ ಸಿದ್ದರಾಮಯ್ಯ
"ಕಾಂಗ್ರೆಸ್ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ (ಎನ್‌ಡಿಆರ್‌ಎಫ್) ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂಬುದು ಶುದ್ಧ ಸುಳ್ಳು. ಗ್ಯಾರಂಟಿಗಳ ಯಶಸ್ಸನ್ನು ಸಹಿಸಲಾಗದೆ ಬಿಜೆಪಿ ನಾಯಕರು ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ನಾವು ಎನ್‌ಡಿಆರ್‌ಎಫ್ ಹಣವನ್ನು ಗ್ಯಾರಂಟಿಗಳಿಗೆ ಬಳಸಿಲ್ಲ. ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕ ಮೂಡಿಸಿದೆ," ಎಂದು ಅವರು ಹೇಳಿದರು.
"ಕರ್ನಾಟಕದ ಗ್ಯಾರಂಟಿ ಮಾದರಿಯನ್ನು ಬಿಹಾರ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಹರಿಯಾಣದಂತಹ ಹಲವು ರಾಜ್ಯಗಳು ಅನುಕರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದಿದ್ದರು. ಆದರೆ, ನಾವು ನುಡಿದಂತೆ ನಡೆದು, ಜನರಿಗೆ ನೀಡಿದ ಭರವಸೆಗಳನ್ನು ತಪ್ಪದೇ ಈಡೇರಿಸುತ್ತಿದ್ದೇವೆ," ಎಂದು ಸಿದ್ದರಾಮಯ್ಯ ವಿವರಿಸಿದರು.
ಬಿಜೆಪಿ ಆರೋಪವೇನು?
ಬೆಳಗಾವಿ ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ, ರಾಜ್ಯ ಸರ್ಕಾರವು ನೆರೆ ಸಂತ್ರಸ್ತರಿಗೆ ಪರಿಹಾರ ನೀಡದೆ, ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎನ್‌ಡಿಆರ್‌ಎಫ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು. ಸರ್ಕಾರದ ಈ ನಡೆಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದೂ ಅವರು ಟೀಕಿಸಿದ್ದರು. ಈ ಆರೋಪಕ್ಕಾಗಿಯೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ, ಬೆಳಗಾವಿಯ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಹಣೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡುವುದಿಲ್ಲ ಎಂದು ಭರವಸೆ ನೀಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಯ ಕುರಿತ ಚರ್ಚೆಗಳು ಪಕ್ಷದ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.