ಶುಕ್ರವಾರ ‘ನವಗ್ರಹ’ ರಿ-ರೀಲೀಸ್ | ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ
ನಟ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ. ಆದರೆ ಸಿನಿಮಾ ಮರು ಬಿಡುಗಡೆಗೆ ಮುನ್ನ ಚಿತ್ರಮಂದಿರಗಳ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.;
ನಟ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ. ಆದರೆ ಸಿನಿಮಾ ಮರು ಬಿಡುಗಡೆಗೆ ಮುನ್ನ ಚಿತ್ರಮಂದಿರಗಳ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
‘ನವಗ್ರಹ’ ಸಿನಿಮಾ ಮರು ಬಿಡುಗಡೆ ಆಗುತ್ತಿರುವ ಪ್ರಸನ್ನ ಚಿತ್ರಮಂದಿರದ ಮುಂದೆ ಎಚ್ಚರಿಕೆ ಫಲಕವನ್ನು ಚಿತ್ರಮಂದಿರದ ಸಿಬ್ಬಂದಿ ಅಳವಡಿಸಿದ್ದು, ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ‘ದರ್ಶನ್ ಅಭಿಮಾನಿಗಳೇ, ಯಾರೂ ಕೂಡ ಸಿನಿಮಾ ನೋಡಲು ಬಂದಾಗ ಯಾರ ವಿರುದ್ದವೂ ಘೋಷಣೆ ಕೂಗುವುದು, ಧಿಕ್ಕಾರ ಕೂಗುವುದು ಮಾಡಬೇಡಿ. ಈ ನಿಯಮ ಪಾಲನೆ ಮಾಡದಿದ್ದರೆ ನಿರ್ಮಾಪಕರಿಗೆ, ಮತ್ತು ದರ್ಶನ್ ಸರ್ ಗೆ ತೊಂದರೆ ಆಗುವುದು, ‘ಕರಿಯ’ ಸಿನಿಮಾ ಮರು ಬಿಡುಗಡೆ ಸಮಯದಲ್ಲಾದ ಕೆಟ್ಟ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ’ ಎಂದಿದ್ದಾರೆ.
16 ವರ್ಷಗಳ ಹಿಂದೆ ನವೆಂಬರ್ 7ರಂದು 'ನವಗ್ರಹ' ಸಿನಿಮಾ ತೆರೆಗೆ ಬಂದಿತ್ತು.ಇದೀಗ ನವೆಂಬರ್ 8ಕ್ಕೆ ಸಿನಿಮಾ ಮತ್ತೆ ಮರುಬಿಡುಗಡೆಗೊಳ್ಳಲಿದ್ದು, ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ, ಕಾಮಕ್ಯ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ತರುಣ್ ಸುಧೀರ್, ಗಿರಿ, ನಾಗೇಂದ್ರ ಅರಸ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೈಸೂರು ಅರಮನೆಯ ಅಂಬಾರಿಯನ್ನು ಕದಿಯಲು ಪ್ರಯತ್ನಿಸುವ ಗ್ಯಾಂಗಿನ ಕಥೆಯ ಸಿನಿಮಾ ಇದಾಗಿದ್ದು, ನಟ ದರ್ಶನ್ ನೆಗೆಟಿವ್ ಶೇಡ್ ರೋಲ್‌ನಲ್ಲಿ ಮಿಂಚಿದ್ದಾರೆ. ವಿ. ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ ಈ ಸಿನಿಮಾಕ್ಕಿದೆ.
ಎರಡು ತಿಂಗಳ ಹಿಂದೆ ದರ್ಶನ್ ನಟನೆಯ 'ಕರಿಯ' ಸಿನಿಮಾ ಕೂಡ ರೀ-ರಿಲೀಸ್ ಆಗಿತ್ತು. ಆ ಸಮಯದಲ್ಲಿ ಪ್ರಸನ್ನ ಚಿತ್ರಮಂದಿರದ ಮುಂಭಾಗದಲ್ಲಿ ದರ್ಶನ್ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಸಿಗರೇಟು ಹಿಡಿದು ಕೂತಿದ್ದ ಚಿತ್ರವನ್ನು ಪೋಸ್ಟರ್ ರೀತಿ ಹಾಕಿದ್ದರು. ಮಾಧ್ಯಮದ ವಿರುದ್ಧ, ಪೊಲೀಸರ ವಿರುದ್ಧ, ಕೆಲ ನಟರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಂದು ಉದ್ಧಟತನ ತೋರಿದ ಕೆಲವರ ವಿರುದ್ಧ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದರು. ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂತಹ ಘಟನೆ ನಡೆಯಬಾರದು ಎಂದು ಈ ಬಾರಿ ಥಿಯೇಟರ್ ಮಾಲೀಕರು ಮನವಿ ಮಾಡುತ್ತಿದ್ದಾರೆ.
'ಕರಿಯ' ಸಿನಿಮಾ ರೀ-ರಿಲೀಸ್ ಸಮಯದಲ್ಲಿ ದರ್ಶನ್ ಜೈಲಿನಲ್ಲಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವೇಳೆ ಪ್ರಸನ್ನ ಚಿತ್ರಮಂದಿರದ ಮುಂದೆ ಪೊಲೀಸರು ಅಭಿಮಾನಿಗಳಿಗೆ ನೀತಿಪಾಠ ಮಾಡಿದ್ದರು. "ನಿಮ್ಮಂತ ಕೆಟ್ಟ ಅಭಿಮಾನಿಗಳಿಂದ ದರ್ಶನ್ ಅವರಿಗೆ ಕೆಟ್ಟ ಹೆಸರು ಬರ್ತಿದೆ. ಅಭಿಮಾನಿಗಳು ಅಭಿಮಾನಿಗಳ ತರ ಇರಬೇಕು. ಘೋಷಣೆ ಕೂಗುವುದು ಅಥವಾ ಕೆಟ್ಟದಾಗಿ ವರ್ತಿಸಿದರೆ ಕ್ರಮ ಕೈಗೊಳ್ಳುತ್ತೀವಿ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ.