Namma Metro | ನಾಳೆ ನಮ್ಮ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!
Namma Metro: ನಮ್ಮ ಮೆಟ್ರೋ ಪಯಾಣಿಕರಿಗೆ ಸದ್ಯದಲ್ಲೇ ದರ ಏರಿಕೆಯ ಬಿಸಿಯೂ ತಟ್ಟಬಹುದು. ಶೀಘ್ರದಲ್ಲಿ ಮೆಟ್ರೋ ಟಿಕೆಟ್ ಬೆಲೆಗಳು 40-45% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.;
ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ನಡುವಿನ ಅಗತ್ಯ ಟ್ರ್ಯಾಕ್ ನಿರ್ವಹಣೆಯಿಂದಾಗಿ ಮೆಜೆಸ್ಟಿಕ್ ಮತ್ತು ಇಂದಿರಾನಗರ ನಡುವಿನ ನೇರಳೆ ಮಾರ್ಗದಲ್ಲಿ ಜನವರಿ 19 ರಂದು ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ತಿಳಿಸಿದೆ.
ಭಾನುವಾರ ಬೆಳಿಗ್ಗೆ 7 ರಿಂದ 10 ರವರೆಗೆ ಮೆಜೆಸ್ಟಿಕ್ ಮತ್ತು ಇಂದಿರಾನಗರ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಮತ್ತು ಈ ಅವಧಿಯಲ್ಲಿ ರೈಲುಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಈ ಮಾರ್ಗದ ಚಲ್ಲಘಟ್ಟ ಮತ್ತು ಮೆಜೆಸ್ಟಿಕ್ ನಡುವೆ, ಹಾಗೆಯೇ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಇಂದಿರಾನಗರ ನಡುವೆ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಉಳಿದಂತೆ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳೆರಡೂ ನಿಯಮಿತ ಭಾನುವಾರದ ವೇಳಾಪಟ್ಟಿಯನ್ನು ಅನುಸರಿಸಿ ಬೆಳಿಗ್ಗೆ 7 ಗಂಟೆಗೆ ತಮ್ಮ ಸೇವೆಗಳನ್ನು ಪ್ರಾರಂಭಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ
ನಮ್ಮ ಮೆಟ್ರೋ ಪಯಾಣಿಕರಿಗೆ ಸದ್ಯದಲ್ಲೇ ದರ ಏರಿಕೆಯ ಬಿಸಿಯೂ ತಟ್ಟಬಹುದು. ಶೀಘ್ರದಲ್ಲಿ ಮೆಟ್ರೋ ಟಿಕೆಟ್ ಬೆಲೆಗಳು 40-45% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸರ್ಕಾರ ನೇಮಿಸಿದ ದರ ನಿಗದಿ ಸಮಿತಿಯು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಂಡಳಿಗೆ ತನ್ನ ಶಿಫಾರಸುಗಳನ್ನು ಈಗಾಗಲೇ ಸಲ್ಲಿಸಿದ್ದು, ಬಿಎಂಆರ್‌ಸಿಎಲ್ ಮುಖ್ಯ ಕಚೇರಿಯಲ್ಲಿ ಶುಕ್ರವಾರ (ಜ.17)ರಂದು ದರ ಏರಿಕೆ ಸಂಬಂಧ ಸಭೆ ನಡೆಸಲಾಗಿದೆ. ಶನಿವಾರ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
2017ರಲ್ಲಿ ಮೆಟ್ರೋ ದರದಲ್ಲಿ ಹೆಚ್ಚಳವನ್ನು ಮಾಡಲಾಗಿತ್ತು. ಆ ಬಳಿಕ ಕಳೆದ 7-8 ವರ್ಷಗಳಿಂದ ಮೆಟ್ರೋ ಟಿಕೆಟ್ ದರ ಏರಿಕೆಯೇ ಆಗಿರಲಿಲ್ಲ. ಇದೀಗ ಮೊದಲ ಬಾರಿಗೆ ಮೆಟ್ರೋ ದರದಲ್ಲಿ ಏರಿಕೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಶೇಕಡಾ ಎಷ್ಟು ಹೆಚ್ಚಳ?
ಸಮಿತಿಯ ವಿಶ್ಲೇಷಣೆಯ ಆಧಾರದ ಮೇಲೆ 40-45% ದರ ಏರಿಕೆಗೆ ಶಿಫಾರಸು ಮಾಡಿದೆ. ಮೆಟ್ರೋದ ಮೂಲ ದರ ಪ್ರಸ್ತುತ ಇರುವ 10 ರೂ.ನಿಂದ ಸುಮಾರು 15 ರೂ.ಗೆ ಏರಿಕೆಯಾಗಲಿದ್ದು, ಗರಿಷ್ಠ ದರ ಈಗಿರುವ 60 ರೂ.ನಿಂದ 85 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ ಜನದಟ್ಟಣೆ ಇಲ್ಲದ ಸಮಯದಲ್ಲಿ ಹಾಗೂ ಭಾನುವಾರದಂದು ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರು ಶೇ.5 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ದರ ಏರಿಕೆಯ ಬಗ್ಗೆ ಬಿಎಂಆರ್‌ಸಿಎಲ್ ಶನಿವಾರ ಅಥವಾ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಲಿದೆ.