Mysore MUDA Scam | ಬಿಜೆಪಿ ಪಾದಯಾತ್ರೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಸಚಿವ ಕೆ.ಎನ್ ರಾಜಣ್ಣ

Update: 2024-07-27 12:10 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣ ಖಂಡಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಪಕ್ಷದಿಂದಲೂ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಪಾದಯಾತ್ರೆ ಈದೀಗ ರದ್ದಾಗಿದೆ. ಪಾದಯಾತ್ರೆ ಬದಲಿಗೆ ಬಿಜೆಪಿ ವಿರುದ್ಧ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ಈ ಬಗ್ಗೆ ತುಮಕೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ʻʻನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸೈಟು ಪಡೆದವರೇ ಇಂದು ಆರೋಪ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡುವವರೇ ಮುಡಾದ ಫಲಾನುಭವಿಗಳಾಗಿದ್ದಾರೆ. ಅವರಲ್ಲಿ ಕೆಲವರು ಸುಳ್ಳು ದಾಖಲಾತಿ ನೀಡಿ ಸೈಟು ಪಡೆದಿದ್ದಾರೆ. ಅವರೇ ಇಂದು ಪ್ರಶ್ನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಈಗ ಅವರ ಸ್ಥಿತಿ 'ನಾ ಕಳ್ಳ, ಪರರನ್ನು ನಂಬ' ಎಂಬಂತಾಗಿದೆ. ಆರೋಪ ಮಾಡುವವರು ತಮ್ಮ ನಿವೇಶನ ಮುಡಾಗೆ ಹಸ್ತಾಂತರಿಸಲಿʼʼ ಎಂದು ಬಿಜೆಪಿ-ಜೆಡಿಎಸ್‌ನಾಯಕರಿಗೆ ಸವಾಲು ಹಾಕಿದರು.

ʻʻ2011ರ ಮಾರ್ಚ್ 17ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಡಾ ನಿವೇಶನ ಅಕ್ರಮ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚಿಸಿದ್ದರು. ಯಾರ ಕಾಲದಲ್ಲಿ ಎಷ್ಟು ನಿವೇಶನಗಳು ಹಂಚಿಕೆಯಾಗಿವೆ ಎಂದು ಹೇಳಿದ್ದರು. ಅಂದಿನ ಫಲಾನುಭವಿಗಳೇ ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರ ಕ್ಲೀನ್‌ ಇಮೇಜ್‌ಗೆ ಧಕ್ಕೆ ತರುವ ಯೋಜಿತವಾದ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ, ವಿರೋಧ ಪಕ್ಷದವರ ಕೈವಾಡ ಇದೆ. ಇದೊಂದು ಯೋಜಿತ ಪಿತೂರಿʼʼ ಎಂದು ಕಿಡಿಕಾರಿದರು.

"ಮುಡಾ ಪ್ರಕರಣ ಸಂಬಂಧ ಬಿಜೆಪಿಯವರು ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಪ್ರತಿಭಟನಾ ರ್ಯಾಲಿ ಮಾಡಿದರೆ ನಾವೂ ಸಹ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಹಿಂದ ವರ್ಗದವರು ಪ್ರತಿಭಟನೆ ಮಾಡುತ್ತೇವೆʼʼ ಎಂದು ಎಚ್ಚರಿಕೆ ನೀಡಿದರು.

"ಹಿಂದುಳಿದ ಸಮುದಾಯದ ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಪಿತೂರಿ ನಡೆಸುತ್ತಿದ್ದಾರೆ. ಇದು ಅಹಿಂದ ವರ್ಗಗಳ ವಿರುದ್ಧ ಮಾಡುತ್ತಿರುವ ಹೀನ ಕೃತ್ಯ, ಸಂಚು. ಎಲ್ಲ ಅಹಿಂದ ವರ್ಗಗಳ ಮುಖಂಡರ ಜತೆ ಸೇರಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು" ಎಂದು ಕೆಎನ್‌ ರಾಜಣ್ಣ ಹೇಳಿದ್ದಾರೆ.

Tags:    

Similar News