Mysore MUDA Scam | ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಪೊಲೀಸ್ ದೂರು
ನಕಲಿ ದಾಖಲೆ ಸೃಷ್ಟಿಸಿ ಮುಡಾಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ, ಬಾವಮೈದ ಮತ್ತು ವಿವಾದಿತ ಜಾಗದ ಮಾಲೀಕರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.;
Mysore MUDA Scam | ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿರುದ್ಧ ಪೊಲೀಸ್ ದೂರು ನೀಡಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಮುಡಾಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಬಾವಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ವಿವಾದಿತ ಜಾಗದ ಮಾಲೀಕ ಎನ್ನಲಾಗಿರುವ ದೇವರಾಜು ಎಂಬುವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪ ನೋಂದಣಾಧಿಕಾರಿ ಹಾಗೂ ಮುಡಾ ಆಯುಕ್ತರು ಸೇರಿದಂತೆ ಅಧಿಕಾರಿಗಳೂ ಶಾಮೀಲಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿರುವ ದೂರುದಾರರು, ರಾಜ್ಯಪಾಲರು, ರಾಜ್ಯದ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿರುವ ಸ್ನೇಹಮಯಿ ಕೃಷ್ಣ , ವಿವಾದಿತ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ರಾಜ್ಯಪತ್ರ, ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡಿರುವ ದೇವರಾಜು ಕುಟುಂಬದ ವಿಳಾಸ ಮುಂತಾದ ವಿಷಯಗಳ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಜ್ಯಪಾಲರು ಮತ್ತು ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ, ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಹತ್ತು ದಿನಗಳಲ್ಲಿ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೂರು ಬಂದಿದೆ ಎಂದು ಖಚಿತಪಡಿಸಿದ ಪೊಲೀಸ್
ದೂರಿನ ಕುರಿತು ʼದ ಫೆಡರಲ್ ಕರ್ನಾಟಕʼ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ದೂರು ಬಂದಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಆದರೆ, "ದೂರು ಸ್ವೀಕರಿಸಿ ಹತ್ತು ದಿನಗಳಾಗಿದೆ. ಪ್ರಕರಣ ಸಿವಿಲ್ ವಿಷಯಕ್ಕೆ ಸಂಬಂಧಿಸಿದ್ದಾದ್ದರಿಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ. ಈಗಾಗಲೇ ಪ್ರಕರಣದ ತನಿಖೆಗೆ ಸರ್ಕಾರ ಸಮಿತಿ ರಚಿಸಿರುವುದರಿಂದ ಈ ದೂರನ್ನು ಕೂಡ ಆ ಸಮಿತಿಗೆ ಕಳುಹಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.