Mysore MUDA Scam | ರಿಟ್ ಅರ್ಜಿಯಲ್ಲಿ ಮಾಹಿತಿ ಮುಚ್ಚಿಟ್ಟಿದ್ದಾರೆ: ಸಿಎಂ ವಿರುದ್ಧ ಗಂಭೀರ ಆರೋಪ

Update: 2024-08-22 09:51 GMT

ಮುಡಾ ಹಗರಣದ ಸಂಬಂಧ ರಿಟ್ ಅರ್ಜಿಯಲ್ಲಿ ಮಾಹಿತಿ ಮುಚ್ಚಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಕಣ್ತಪ್ಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ʻʻಸಿದ್ದರಾಮಯ್ಯ ಅವರಿಗೆ ತಮ್ಮ ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿ ಹಾಕಿದ್ದಾರೆ. ಆ ಪೈಕಿ 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ‌ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಪತ್ರದ ಎರಡನೇ ಪುಟ ಇಲ್ಲʼʼ ಎಂದು ಅವರು ದೂರಿದ್ದಾರೆ.

ʻʻಎರಡನೇ ಪುಟಕ್ಕೆ ವೈಟ್ನರ್ ಹಾಕಿ ಸಾಲೊಂದನ್ನು ಅಳಿಸಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿ ಅಳಿಸಿರುವ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ನ್ಯಾಯಾಲಯಕ್ಕೆ ನೀಡಿದ್ದಾರೆ. ಆ ಮೂಲಕ ರಾಜ್ಯದ ಜನರಿಗೆ ಹಾಗೂ ನ್ಯಾಯಾಲಯದಿಂದ ಸತ್ಯ ಮುಚ್ಚಿಡುತ್ತಿದ್ದಾರೆʼʼ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ʻʻ‌ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿರುವ ಪತ್ರದಲ್ಲೂ ಅದೇ ರೀತಿ ಮಾಡಿದ್ದಾರೆ. ಶೋಕಾಸ್ ನೋಟಿಸ್ ಉತ್ತರದ 30ನೇ ಪುಟದಲ್ಲಿ ತಮ್ಮ ಪತ್ನಿ ಪತ್ರ ಬರೆದ ಮಾಹಿತಿ ಕೊಟ್ಟಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ.

ʻʻನ್ಯಾಯಾಲಯಕ್ಕೆ ಸತ್ಯ ಮುಚ್ಚಿಟ್ಟಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. 29ರಂದು ವಿಚಾರಣೆಯ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು‌ ಮಾಡುವಂತೆ ಮನವಿ ಮಾಡುತ್ತೇವೆʼʼ ಎಂದು ಸ್ನೇಹಮಹಿ ‌ಕೃಷ್ಣ ಹೇಳಿದ್ದಾರೆ.

Tags:    

Similar News