Mysore MUDA Scam | ಸಿಎಂ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿಗೆ ಅರ್ಜಿ

ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಡೆಸಿದ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ ಜೆ ಅಬ್ರಾಹಂ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

Update: 2024-07-27 06:51 GMT

Mysore MUDA Scam | ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಡೆಸಿದ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ ಜೆ ಅಬ್ರಾಹಂ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜು.18ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಅಬ್ರಾಹಂ, ಕಾನೂನು ಪ್ರಕಾರ ರಾಜ್ಯಪಾಲರ ಅನುಮತಿ ಪಡೆಯಲು ಇದೀಗ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೂರ್ವಭಾವಿಯಾಗಿ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ 22 ಪುಟಗಳ ಮನವಿ ಪತ್ರವನ್ನು ಅಬ್ರಾಹಂ ಸಲ್ಲಿಸಿದ್ದು, “ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ನಿವೇಶನ ಅಕ್ರಮ ಎಸಗಿದ್ದಾರೆ. ಆ ಮೂಲಕ ರಾಜ್ಯದ ಬೊಕ್ಕಸಕ್ಕೆ 55.80 ಕೋಟಿ ರೂಪಾಯಿನಷ್ಟು ನಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಹೆಚ್ಚಿನ ವಿಚಾರಣೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ಪ್ರಕರಣ ದಾಖಲಿಸಬೇಕಿದೆ. ಅದಕ್ಕೆ ತಮ್ಮ ಅನುಮತಿ ಅಗತ್ಯವಿದೆ” ಎಂದು ಮನವಿಯಲ್ಲಿ ಕೋರಲಾಗಿದೆ.

ಮೈಸೂರಿನ ಕೆಸರೆ ಗ್ರಾಮದ 3.16 ಎಕರೆ ಜಮೀನನ್ನು ಡಿ ನೋಟಿಫೈ ಮಾಡಿ ವಂಚನೆ ಮೂಲಕ ಕಬಳಿಸಲಾಗಿದೆ. ತಮ್ಮ ಹೆಸರಿನಲ್ಲಿ ಇಲ್ಲದಿದ್ದರೂ, ಅದರ ಮೇಲೆ ಯಾವ ರೀತಿಯಲ್ಲೂ ತಮಗೆ ಹಕ್ಕು ಇಲ್ಲದೇ ಹೋದರೂ ಜೆ ದೇವರಾಜ ಅವರು ಆ ಜಮೀನನ್ನು ಮಾರಾಟ ಮಾಡಿದ್ದಾರೆ. ಆ ಜಮೀನನ್ನು ಸಿದ್ದರಾಮಯ್ಯ ಅವರ ಬಾವಮೈದ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಸೂಚನೆ ಮೇರೆಗೇ ಈ ವ್ಯವಹಾರ ನಡೆದಿದೆ. ಹಾಗಾಗಿ ಸಿಎಂ ಈ ವ್ಯವಹಾರದಲ್ಲಿ ನೇರವಾಗಿ ಪಾಲುದಾರರು. ಆದ್ದರಿಂದ ಅವರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಿ ಪ್ರಕರಣದ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಅಬ್ರಾಹಂ ತಮ್ಮ ಮನವಿಯಲ್ಲಿ ಕೋರಿದ್ದಾರೆ.

ಏನಿದು ಮುಡಾ ಪ್ರಕರಣ?

ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಮತ್ತು ಇತರರು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವೂ, ಮುಡಾದಿಂದ ಅಕ್ರಮ ನಿವೇಶನಗಳನ್ನು ಪಡೆದಿದೆ ಎಂದು ಕಾಂಗ್ರೆಸ್‌ ಅರೋಪಿಸಿದೆ. ಬಿಜೆಪಿ ಕೆಲ ಮುಖಂಡರೂ ಈ ಹಗರಣದಲ್ಲಿ ಭಾಗಿಗಳೆಂದು ಕಾಂಗ್ರೆಸ್‌ ಆರೋಪಿಸಿದೆ.

ಪ್ರಕರಣ ರಾಷ್ಟ್ರಮಟ್ಟದಲ್ಲಿ ಇದೀಗ ಸದ್ದು ಮಾಡುತ್ತಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ತಾವು ತಪ್ಪಿತಸ್ಥರಲ್ಲ ಎಂದೂ ಸಮಜಾಯಿಷಿ ನೀಡಿದ್ದರೂ ಬಿಜೆಪಿ ಮತ್ತು ಜೆಡಿಎಸ್‌, ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಇದೀಗ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ. ಪ್ರತಿಪಕ್ಷಗಳ ಪಾಲಿಗೆ ರಾಜಕೀಯ ಲಾಭದ ದೊಡ್ಡ ಅವಕಾಶವಾಗಿ ಪ್ರಕರಣ ಒದಗಿಬಂದಿದ್ದರೆ, ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಈಗ ಅದು ಬಿಸಿ ತಪ್ಪವಾಗಿ ಪರಿಣಮಿಸಿದೆ.

Tags:    

Similar News