Mysore MUDA Scam | ಪ್ರಕರಣಕ್ಕೆ ಹೊಸ ತಿರುವು ನೀಡಿದ ಬಿಜೆಪಿ ಶಾಸಕರ ಸ್ಪೋಟಕ ಹೇಳಿಕೆ

Update: 2024-07-07 14:38 GMT

ʻʻನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅವ್ಯವಹಾರ ನಡೆದಿರುವ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಮುಡಾದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿದ್ದವುʼʼ ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻʻನಾನು ಉಸ್ತುವಾರಿ ಸಚಿವರಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ನಡೆಸದೇ ಸೈಟ್‌ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ನಿರ್ಣಯ ಕೈಗೊಂಡು ಕೊಡಬೇಕು. ಆದರೆ ಈ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅಂದಿನ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರು ಉಳಿದುಕೊಂಡರು. ಅಂದು ಸರಿಯಾದ ಕ್ರಮ ತೆಗೆದುಕೊಂಡಿದ್ದರೆ, ಇಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ, ಈಗಲಾದರೂ ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆಯಾಗಲಿʼʼ ಎಂದು ಹೇಳಿದರು.

ʻʻಅನಗತ್ಯವಾಗಿ ಮುಡಾ ಹಗರಣ ವಿಚಾರದಲ್ಲಿ ನನ್ನ ಹೆಸರು ತರಬೇಡಿ. ಮುಡಾದಲ್ಲಿ ಒಂದೇ ಒಂದು ನಿವೇಶನ ನನ್ನ ಹೆಸರಿನಲ್ಲಿ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಯಾವುದೇ ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿʼʼ ಎಂದು ಹೇಳಿದರು.

ʻʻಮುಡಾದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿದ್ದವು. ಶಾಸಕರ ಹೆಸರಿನ ಫೈಲ್‌ಗಳು ಚರ್ಚೆಯಾಗದೇ ಪಾಸ್‌ ಆಗುತ್ತಿತ್ತು. ಮುಡಾ ಸಭೆಯ ಬಹುತೇಕ ಫೈಲ್‌ಗಳು ಶಾಸಕರಿಗೇ ಸೇರಿದ್ದವು. ಅದಕ್ಕಾಗಿಯೇ ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನು ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಮೈಸೂರು ಜಿಲ್ಲೆಯ ಶಾಸಕರಗಳು ಲಾಬಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ, ಆದರೆ ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕುʼʼ ಎಂದು ಸೋಮಶೇಖರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Tags:    

Similar News