ಕುಂಕುಮ ಪ್ರಹಸನ | ವಾಟ್ ಇಸ್ ದ ಪ್ರಾಬ್ಲಂ ಎಂದ ಸಚಿವ ಮಹಾದೇವಪ್ಪ
ನನ್ನ ಪುತ್ರ ಸಂಸದ ಸುನೀಲ್ ಬೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ ಎಂದು ಸಚಿವ ಮಹಾದೇವಪ್ಪ ಹೇಳಿದ್ದಾರೆ.
ನನ್ನ ಪುತ್ರರಾದ ಸಂಸದ ಸುನೀಲ್ ಭೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಇದರಲ್ಲಿ ಸಮಸ್ಯೆ/ ತಪ್ಪು ಏನಿದೆ? (ವಾಟ್ ಇಸ್ ದ ಪ್ರಾಬ್ಲಂ) ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಹಾಗೂ ಹಿಂದೂ ಸಂಪ್ರದಾಯದಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಯಾವುದೇ ಲಿಂಗಭೇದ, ತಾರತಮ್ಯಕ್ಕೆ ಅವಕಾಶವಿಲ್ಲ. ಯಾರು ಯಾರಿಗೆ ಬೇಕಾದರೂ ಕುಂಕುಮವನ್ನು ಇಡಬಹುದು. ಹೀಗಾಗಿ, ನನ್ನ ಪುತ್ರ ಸಂಸದ ಸುನೀಲ್ ಬೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ (ಜು.26) ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮರಾಜನಗರದ ನೂತನ ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚಾಮುಂಡೇಶ್ವರಿ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬಿ.ಕೆ. ಸವಿತಾ ಅವರ ಹಣೆಗೆ ಕುಂಕುಮ ಇಟ್ಟಿದ್ದರು. ಬೆಂಬಲಿಗರ ಸಮ್ಮುಖದಲ್ಲೇ ನಿರ್ದೇಶಕಿ ಸವಿತಾ ಅವರ ಹಣೆಗೆ ಸುನೀಲ್ ಬೋಸ್ ಕುಂಕುಮ ಇಟ್ಟ ಘಟನೆಯ ವಿಡಿಯೋ, ಫೋಟೊಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು.
ಕಳೆದ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಮಗೆ ವಿವಾಹವಾಗಿಲ್ಲ ಎಂದು ಬೋಸ್ ಘೋಷಿಸಿದ್ದರು. ಆದರೆ, ಬಿಜೆಪಿ ಸ್ಥಳೀಯ ಮುಖಂಡರು, ಬೋಸ್ ಅವರು ಕೆಎಎಸ್ ಅಧಿಕಾರಿಯನ್ನು ಮದುವೆಯಾಗಿದ್ದು, ಮಗು ಕೂಡ ಇದೆ. ಆದರೆ, ಪ್ರಮಾಣಪತ್ರದಲ್ಲಿ ಆ ವಾಸ್ತವಾಂಶ ಮುಚ್ಚಿಟ್ಟಿದ್ದಾರೆ ಎಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಅದೇ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದು ರಾಜಕೀಯ ವಲಯದಲ್ಲಿ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿತ್ತು.