Muniratna Case | ಹನಿಟ್ರ್ಯಾಪ್‌ ಪ್ರಕರಣ: ಹೆಬ್ಬಗೋಡಿ ಇನ್ಸ್‌ಪೆಕ್ಟರ್‌ ಅಂದರ್!

ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದಾಗಲೇ ಎಸ್ಐಟಿ ಅಧಿಕಾರಿಗಳು ಪೊಲೀಸ್‌ ಇನ್ಸ್‌ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Update: 2024-11-15 07:19 GMT

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಹಕಾರ ನೀಡಿ, ಒಳ ಸಂಚು ರೂಪಿಸಿದ ಆರೋಪದ ಮೇಲೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರನ್ನು ಸಿಐಡಿ ವಿಶೇಷ ತನಿಖಾ ದಳದ (SIT) ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಆ ಮೂಲಕ ಮುನಿರತ್ನ ಹನಿಟ್ರ್ಯಾಪ್‌ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದಾಗಲೇ ಎಸ್ಐಟಿ ಅಧಿಕಾರಿಗಳು ಐಯ್ಯಣ್ಣ ರೆಡ್ಡಿಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ. ಐಯ್ಯಣ್ಣ ರೆಡ್ಡಿ ಅವರು ರಾಜರಾಜೇಶ್ವರಿನಗರದ ಬಳಿಕ ರಾಜಗೋಪಾಲನಗರ, ಕಬ್ಬನ್‌ಪಾರ್ಕ್, ಯಶವಂತಪುರ, ಪೀಣ್ಯ ಠಾಣೆಗಳಲ್ಲೂ ಕಾರ್ಯ ನಿರ್ವಹಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಹೆಬ್ಬಗೋಡಿ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಕೈವಾಡವೇನು?

ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿ ಮುನಿರತ್ನ ಅವರಿಗೆ ನೆರವಾಗುತ್ತಿದ್ದ ಗಂಭೀರ ಆರೋಪ ಐಯ್ಯಣ್ಣ ರೆಡ್ಡಿ ವಿರುದ್ಧ ಕೇಳಿಬಂದಿದೆ. ಅಲ್ಲದೇ ಕೆಲ ರಾಜಕಾರಣಿಗಳಿಗೆ ಏಡ್ಸ್ ಸೋಂಕಿತರ ರಕ್ತದ ಚುಚ್ಚುಮದ್ದು ನೀಡುತ್ತಿರುವ ವಿಷಯ ಗೊತ್ತಿದ್ದರೂ ಮಾಹಿತಿ ಮುಚ್ಚಿಟ್ಟು ಮುನಿರತ್ನಗೆ ಸಹಕಾರ ನೀಡಿದ್ದಾರೆ. ಈ ಹಿಂದೆ ಹಲವು ವರ್ಷಗಳ ಕಾಲ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲೇ ಸೇವೆ ಸಲ್ಲಿಸಿದ್ದರಿಂದ ಶಾಸಕ ಮುನಿರತ್ನ ಅವರಿಗೆ ತೀರಾ ಹತ್ತಿರವಾಗಿದ್ದರು. ಮುನಿರತ್ನ ಅವರ ಹಲವು ಅಕ್ರಮಗಳಿಗೆ ಇನ್‌ಸ್ಪೆಕ್ಟರ್‌ ಸಹಕಾರ ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 

ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆ ಹಾಗೂ ಗೋಕುಲ ಮೊದಲ ಹಂತದ ನಿವಾಸಿಯಾದ ಬಿಬಿಎಂಪಿ ಸದಸ್ಯ ವೇಲುನಾಯ್ಕರ್ ಅವರನ್ನು ಇತ್ತೀಚೆಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿಯ ಒಳಸಂಚಿನ ಮಾಹಿತಿ ತಿಳಿದುಬಂದಿತ್ತು. ಈ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿಯನ್ನು ಬಂಧಿಸಲಾಗಿದೆ.

ಹನಿಟ್ರ್ಯಾಪ್‌ ಪ್ರಕರಣ ಏನು?

ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ವಿರುದ್ದ ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿತ್ತು. ಸೆ. 14 ರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಸೆ.20 ರಂದು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಕಗ್ಗಲಿಪುರ ಠಾಣೆಯಲ್ಲಿ 40 ವರ್ಷದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಅ.15ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅತ್ಯಾಚಾರ ಸಂತ್ರಸ್ತ ಮಹಿಳೆಯು ತನ್ನ ದೂರಿನಲ್ಲಿ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಮುನಿರತ್ನ ಅವರು ಬೆಂಗಳೂರಿನ ಹಲವು ರಾಜಕಾರಣಿಗಳು, ಪ್ರಭಾವಿಗಳನ್ನು ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂದು ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಈ ಎಲ್ಲಾ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಸಿಐಡಿಯ ವಿಶೇಷ ತನಿಖಾ ತಂಡ ರಚಿಸಿತ್ತು.

ರಾಜಕಾರಣಿಗಳ ಎದೆಯಲ್ಲಿ ಢವಢವ

ಶಾಸಕ ಮುನಿರತ್ನ ಅವರು ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮೂಲಕ ಬಲೆಗೆ ಬೀಳಿಸುತ್ತಿದ್ದರು. ಅಲ್ಲದೇ ಏಡ್ಸ್‌ ಸೋಂಕಿತರ ರಕ್ತದ ಚುಚ್ಚುಮದ್ದು ನೀಡುತ್ತಿದ್ದರು ಎಂಬ ಸ್ಫೋಟಕ ಸಂಗತಿ ಹೊರಬೀಳುತ್ತಿದ್ದಂತೆ ಹನಿಟ್ರ್ಯಾಪ್‌ಗೆ ಒಳಗಾಗಿರುವ ಸ್ಥಳೀಯ ಹಾಗೂ ರಾಜ್ಯಮಟ್ಟದ ರಾಜಕಾರಣಿಗಳಲ್ಲಿ ಆತಂಕ ಶುರುವಾಗಿದೆ.

ಇತ್ತ ಸಿಐಡಿ ಅಧಿಕಾರಿಗಳು ಹನಿಟ್ರ್ಯಾಪ್‌ಗೆ ಒಳಗಾಗಿರುವವರ ಕುರಿತು ಮಾಹಿತಿ ಕಲೆ ಹಾಕುತ್ತಿರುವುದು ಕೂಡ ಭೀತಿ ಮೂಡಿಸಿದೆ.

Tags:    

Similar News