ಮುನಿರತ್ನ ಪ್ರಕರಣ | ಬಿಜೆಪಿ ಶಾಸಕನಿಗೆ ಸಂಕಷ್ಟ: ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರ
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಸರಣಿ ಪ್ರಕರಣಗಳ ತನಿಖೆಗೆ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.;
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಸರಣಿ ಪ್ರಕರಣಗಳ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಆರ್.ಆರ್.ನಗರದ ಬಿಜೆಪಿ ಶಾಸಕರಾಗಿರುವ ಮಾಜಿ ಸಚಿವ ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್, ಜಾತಿ ನಿಂದನೆ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ ಅವರನ್ನು ಒಂದು ವಾರದ ಹಿಂದೆ ಕೋಲಾರ ಮತ್ತು ಆಂಧ್ರಪದೇಶ ಗಡಿಯಲ್ಲಿ ಬಂಧಿಸಲಾಗಿತ್ತು. ಬಳಿಕ ವೈರಲ್ ಆಗಿದ್ದ ಅವರ ಜಾತಿ ನಿಂದನೆಯ ಆಡಿಯೋವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಿದ ಪೊಲೀಸರು, ಎರಡು ದಿನಗಳ ಕಾಲ ಅವರನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು.
ಆದರೆ, ಆ ನಡುವೆ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಹನಿ ಟ್ರ್ಯಾಪ್ ಜಾಲಕ್ಕೆ ಬಳಸಿಕೊಂಡ ಆರೋಪದ ಮೇಲೆ ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪೊಲೀಸರು ಅವರನ್ನು ಮತ್ತೆ ವಶಕ್ಕೆ ಪಡೆದಿದ್ದರು. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಮುಂದಿನ 14 ದಿನಗಳ ಕಾಲ(ಅಕ್ಟೋಬರ್ 5 ರವರೆಗೆ) ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ಮುನಿರತ್ನ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಈ ನಡುವೆ, ತಮ್ಮ ಸಮುದಾಯದ ಕುರಿತು ಹೇಯ ಮಾತುಗಳನ್ನು ಆಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒಕ್ಕಲಿಗ ಸಮುದಾಯದ ಶಾಸಕರು, ಮುಖಂಡರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
ಅದಾದ ಬೆನ್ನಲ್ಲೇ ಇದೀಗ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಬಿ ಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ಮುನಿರತ್ನ ವಿರುದ್ಧದ ಎಲ್ಲಾ ಪ್ರಕರಣಗಳ ವಿಚಾರಣೆಯ ಹೊಣೆ ವಹಿಸಿ ಆದೇಶಿಸಿದೆ.