ಮುನಿರತ್ನ ಪ್ರಕರಣ | ನೈತಿಕತೆ ಇದ್ರೆ ಪಕ್ಷದಿಂದ ವಜಾ ಮಾಡಿ: ಬಿಜೆಪಿಗೆ ಡಿಕೆ ಸುರೇಶ್ ಸವಾಲು
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜೀವಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಪ್ರಕರಣ ಇದೀಗ ರಾಜಕೀಯ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ.
ತಮ್ಮ ರಾಜಕೀಯ ವಿರೋಧಿ ಮುನಿರತ್ನ ವಿರುದ್ಧದ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಜಿ ಸಂಸದ ಡಿ ಕೆ ಸುರೇಶ್, ಬಿಜೆಪಿ ನಾಯಕರು ಇದನ್ನು ಯಾವ ರೀತಿ ಅರಗಿಸಿಕೊಳ್ಳುತ್ತಾರೆ? ಬಿಜೆಪಿಯ ಒಬ್ಬೇ ಒಬ್ಬ ನಾಯಕರೂ ಇದುವರೆಗೂ ಹೇಳಿಕೆ ನೀಡಿಲ್ಲ. ಬಿಜೆಪಿಯವರಿಗೆ ನೈತಿಕತೆ ಇದ್ರೆ ಮುನಿರತ್ನ ಅವರನ್ನು ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಿತ್ತು ಎಂದಿದ್ದಾರೆ.
ಶಾಸಕ ಮುನಿರತ್ನ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೂ ಬೆದರಿಕೆ ಹಾಕಿದ್ದರು. ಅವರಿಂದಾಗಿ ಅಧಿಕಾರಿಗಳಂತೂ ಭಯ ಭೀತರಾಗಿದ್ದಾರೆ. ನನ್ನ ಬಳಿಯೂ ಕೆಲವರು ಅಳಲು ತೋಡಿಕೊಂಡಿದ್ದಾರೆ. ಈಗಲಾದರೂ ಅಧಿಕಾರಿಗಳು ಧೈರ್ಯದಿಂದ ಮುಂದೆ ಬಂದು ದೂರು ಕೊಟ್ಟರೆ ಸರ್ಕಾರ ಅವರ ರಕ್ಷಣೆಗೆ ಬರುತ್ತೆ ಎಂದು ಸುರೇಶ್ ಹೇಳಿದ್ದಾರೆ.
ಕಾನೂನು ಕ್ರಮ: ಸಿಎಂ, ಗೃಹ ಸಚಿವರಿಗೆ ಆಗ್ರಹ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ದಲಿತ ಸಮುದಾಯದ ವಿರುದ್ಧ ಕೀಳು ಪದ ಸಂಬೋಧನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಶಾಸಕ ಮುನಿರತ್ನ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ವಿಷಯದಲ್ಲಿ ಗಂಭೀರ ಕ್ರಮ ಅಗತ್ಯ ಎಂದು ಒತ್ತಾಯಿಸಿದ್ದಾರೆ.
ನಾವು ಈವರೆಗೆ ಕೇಳಿರದ ಅವಾಚ್ಯ ಪದಗಳನ್ನು ಕೇಳಬೇಕಾಗಿದೆ. ಇದಕ್ಕಿಂತ ಕೀಳು ಪದಗಳನ್ನು ಯಾರೂ ಉಪಯೋಗಿಸಲು ಸಾಧ್ಯವಿಲ್ಲ. ಯಾರೂ ಇಂತಹ ಪದ ಬಳಸಲ್ಲ. ಒಂದು ಕಡೆ ರಾಮನ ಜಪ, ಸಂಸ್ಕೃತಿ ಜಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಜಪ ಮಾಡುತ್ತಾರೆ ಎಂದು ಸುರೇಶ್ ವಾಗ್ದಾಳಿ ನಡೆಸಿದರು.