ಮುನಿರತ್ನ ಪ್ರಕರಣ | ವಿಚಾರಣೆಗೆ ಎಸ್‌ಐಟಿ ವಶಕ್ಕೆ ಬಿಜೆಪಿ ಶಾಸಕ

Update: 2024-09-24 13:57 GMT

ಅತ್ಯಾಚಾರ ಆರೋಪ ಪ್ರಕರಣ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎಸ್ಐಟಿ(SIT) ಮಂಗಳವಾರ(ಸೆ.24) ತನ್ನ ವಶಕ್ಕೆ ಪಡೆದಿದೆ. ಅಕ್ಟೋಬರ್ 5ರವರೆಗೆ ಎಸ್ಐಟಿ ವಶಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಆದೇಶಿಸಿದ್ದಾರೆ.

ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ದ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮುನಿರತ್ನ ಅವರನ್ನು ಕಳೆದ ಶುಕ್ರವಾರ ಬೆಳಿಗ್ಗೆ ಬಂಧಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮುನಿರತ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದರ ಬೆನ್ನಲ್ಲೆ ಹೆಚ್ಚಿನ ತನಿಖೆಗಾಗಿ ಇಂದು ಅವರನ್ನು ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಮುನಿರತ್ನ ವಿರುದ್ದ ಆರೋಪಗಳ ಸುರಿಮಳೆ

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿದೆ. ಅದರಂತೆ ಮುನಿರತ್ನ ಬಳಿ ಹಲವಾರು ಖಾಸಗಿ ಅಶ್ಲೀಲ ವಿಡಿಯೋಗಳಿವೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Similar News