ಹಾಸನದ ಚಿಕ್ಕ ತಿರುಪತಿ ದೇಗುಲದ ಜಾತ್ರೆಯಲ್ಲಿ ಆಹಾರ ಸೇವಿಸಿ 50ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ
ಅಸ್ವಸ್ಥರಾದವರ ಪೈಕಿ 20 ಮಂದಿ ಗುಣಮುಖರಾಗಿದ್ದು, 30ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಭಕ್ತರಿಗೆ ನೀಡಿದ್ದ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.;
ಚಿಕ್ಕತಿರುಪತಿ ದೇಗುಲ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇಗುಲದ ಜಾತ್ರಾ ಮಹೋತ್ಸವದ ವೇಳೆ ಪ್ರಸಾದ ಸೇವಿಸಿದ್ದ 50ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. 'ಚಿಕ್ಕ ತಿರುಪತಿ' ಎಂದೇ ಖ್ಯಾತಿ ಪಡೆದಿರುವ ಈ ದೇಗುಲದ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿದ್ದರು.
ಭಾನುವಾರ ರಾತ್ರಿ ಸುಮಾರು 7.30 ರಿಂದ ಖಾಸಗಿ ಸಂಸ್ಥೆಯೊಂದರ ವತಿಯಿಂದ ಭಕ್ತರಿಗೆ ಮೊಸರನ್ನ ಮತ್ತು ಬಿಸಿಬೇಳೆ ಬಾತ್ ವಿತರಣೆ ಮಾಡಲಾಗಿತ್ತು. ಆದರೆ, ಈ ಆಹಾರ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ಭಕ್ತರಲ್ಲಿ ಸೋಮವಾರ ಮುಂಜಾನೆ ತೀವ್ರ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥಗೊಂಡವರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆ ಮೂಲಗಳ ಪ್ರಕಾರ, ಅಸ್ವಸ್ಥರಾದವರ ಪೈಕಿ 20 ಮಂದಿ ಭಕ್ತರು ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ, 30ಕ್ಕೂ ಹೆಚ್ಚು ಜನರಿಗೆ ಇನ್ನೂ ಚಿಕಿತ್ಸೆ ಮುಂದುವರಿದಿದೆ. ತಕ್ಷಣವೇ ಚಿಕಿತ್ಸೆ ದೊರೆತಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಾಲೂಕು ಆಡಳಿತ ತಿಳಿಸಿದೆ. ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು, ಭಕ್ತರಿಗೆ ನೀಡಲಾಗಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಇಂತಹ ಘಟನೆಗಳು ಹೊಸತಲ್ಲ. ಈ ಹಿಂದೆ ಹಲವು ದೇವಾಲಯಗಳಲ್ಲಿ ಪ್ರಸಾದ ಅಥವಾ ಆಹಾರ ಸೇವಿಸಿ ಭಕ್ತರು ಅಸ್ವಸ್ಥರಾದ ಮತ್ತು ಮೃತಪಟ್ಟ ದುರಂತ ಘಟನೆಗಳು ನಡೆದಿವೆ. 2018ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ್ದ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡು, ದುರದೃಷ್ಟವಶಾತ್ 17 ಜನರು ಮೃತಪಟ್ಟಿದ್ದರು. ಆ ಘಟನೆಯ ತನಿಖೆಯಲ್ಲಿ ಪ್ರಸಾದಕ್ಕೆ ಉದ್ದೇಶಪೂರ್ವಕವಾಗಿ ವಿಷ ಬೆರೆಸಿರುವುದು ದೃಢಪಟ್ಟಿತ್ತು. ಹಾಸನದಲ್ಲಿ ನಡೆದ ಈ ಘಟನೆ, ದೇಗುಲಗಳಲ್ಲಿ ಆಹಾರ ವಿತರಣೆಯ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯ ಪಾಲನೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.