Life Insurance Fraud | ಲೈಫ್‌ ಇನ್ಶೂರೆನ್ಸ್‌ ಹೆಸರಲ್ಲಿ 4.51 ಕೋಟಿ ವಂಚನೆ

ಜೀವ ವಿಮೆ ಹೆಸರಿನಲ್ಲಿ ಭಾರೀ ವಂಚನೆ: ಆರೋಪಿ ಬಂಧನ;

Update: 2024-03-26 12:00 GMT
ಜೀವ ವಿಮೆ

ಜೀವ ವಿಮೆ (ಲೈಫ್ ಇನ್ಶೂರೆನ್ಸ್) ಮಾಡಿಸುವ ನೆಪದಲ್ಲಿ ಬರೋಬ್ಬರಿ 4.51 ಕೋಟಿ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಾರ್ಚ್ 25ರಂದು ವ್ಯಕ್ತಿಯೊಬ್ಬರು ದೂರು ನೀಡಿದ್ದು, "ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾರೆ. ನಿಮಗೆ ನಮ್ಮ ಕಂಪನಿಯಿಂದ ಪ್ರೀಮಿಯಂ ಬಾಂಡ್ ನೀಡುತ್ತೇವೆ. ನಿಮ್ಮ ಪಾಲಿಸಿ ಪಡೆಯಲು 15 ಲಕ್ಷ ರೂಪಾಯಿ ಹಣವನ್ನು ಚೆಕ್ ಮೂಲಕ ತುಂಬುವಂತೆ ಹೇಳಿದ್ದರು. ಅದನ್ನು ನಂಬಿ ದಾಖಲಾತಿ ಹಾಗೂ ಹಣವನ್ನು ಚೆಕ್ ಮೂಲಕ ವರ್ಗಾಯಿಸಿದ್ದೇನೆ" ಎಂದು ದೂರುದಾರರು ತಿಳಿಸಿದ್ದಾರೆ.

ಲೈಫ್ ಇನ್ಶೂರೆನ್ಸ್‌ನ ಲಾಭದ ಹಣ ಬಾರದಿದ್ದಾಗ, ಅನುಮಾನ ಮೂಡಿ ಪಾಲಿಸಿ ಬಗ್ಗೆ ಕರೆ ಮಾಡಿದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ, ಆ ವ್ಯಕ್ತಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆದಿತ್ಯ ಬಿರ್ಲಾ ಇನ್ಶೂರೆನ್ಸ್ ಕಂಪನಿಯಲ್ಲಿ ವಿಚಾರಿಸಿದ ನಂತರ ಮೋಸ ಹೋಗಿರುವುದು ತಿಳಿದು ಬಂದಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ಈ ರೀತಿ ಜೀವ ವಿಮೆ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಈಚೆಗೆ ಉತ್ತರಪ್ರದೇಶದ ಖಾಸ್ ಗಂಜ್‌ನಲ್ಲಿ ಬಂಧಿಸಲಾಗಿದೆ. ನಂತರ ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮುಖಾಂತರ ಬೆಂಗಳೂರಿಗೆ ಕರೆತಂದು, ನಂತರ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೀವ ವಿಮೆ ಹೆಸರಿನಲ್ಲಿ ಭಾರೀ ವಂಚನೆ

ಆರೋಪಿಯು ಜೀವ ವಿಮೆ ಹೆಸರಿನಲ್ಲಿ ಹಲವರಿಗೆ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಜನರಿಗೆ ಬರೋಬ್ಬರಿ 4.51 ಕೋಟಿ ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಪ್ರಕರಣಗಳಲ್ಲಿ Aditya Birla Sun life Insurance HDFC ಮತ್ತು ICICI Insurance ಹೆಸರಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ತೆರೆದು ಅಮಾಯಕರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News