ಕ್ವಾಂಟಮ್ ಕ್ರಾಂತಿಯ ಕಡೆಗೆ ಕರ್ನಾಟಕ : 1.6 ಲಕ್ಷ ಕೋಟಿ ರೂ. ಆರ್ಥಿಕತೆ, 2 ಲಕ್ಷ ಉದ್ಯೋಗ ಸೃಷ್ಟಿಗೆ ಗುರಿ

ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. 2035 ರ ವೇಳೆಗೆ ಶೇ. 20ರಷ್ಟು ಪಾಲನ್ನು ಕರ್ನಾಟಕದ್ದಾಗಿಸುವ ಗುರಿ ಇದೆ.;

Update: 2025-07-31 14:37 GMT

ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನಡಿಯಾಗಲಿರುವ ಕರ್ನಾಟಕವು ಕ್ವಾಂಟಮ್‌ ಕ್ರಾಂತಿಗೆ ಮಾದರಿಯಾಗಲಿದೆ. ಮುಂದಿನ 10 ವರ್ಷದಲ್ಲಿ 20 ಬಿಲಿಯನ್‌ ಡಾಲರ್‌ ಆರ್ಥಿಕತೆ ಗುರಿಯನ್ನು ರಾಜ್ಯ ಸರ್ಕಾರವು ಹೊಂದಿದ್ದು, ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. 

ಐಟಿ-ಬಿಟಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಸಿಲಿಕಾನ್‌ ಸಿಟಿ ಬೆಂಗಳೂರು ಇದೀಗ ಕ್ವಾಂಟಮ್‌ ಸಿಟಿಯತ್ತ ದಾಪುಗಾಲು ಇಟ್ಟಿದೆ. ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ಸಂಬಂಧ ‘ಕರ್ನಾಟಕ ಕ್ವಾಂಟಮ್ ಕ್ರಿಯಾಯೋಜನೆ’ ರೂಪಿಸಲಾಗುತ್ತಿದೆ. ಭವಿಷ್ಯದಲ್ಲಿ ಪ್ರಮುಖ ಬೇಡಿಕೆ ಇರುವ ಕ್ವಾಂಟಮ್‌ ಕ್ಷೇತ್ರಕ್ಕೆ ಹೂಡಿಕೆ ಹರಿದುಬರುವಂತೆ ಕ್ರಮ ವಹಿಸಲು ರಾಜ್ಯ ಸರ್ಕಾರವು ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಲ್ಲಿ ಬೃಹತ್‌ ಸಮಾವೇಶ ನಡೆಸಿತು. ಸಮ್ಮೇಳನದಲ್ಲಿ ಅಮೆರಿಕ, ಬ್ರಿಟನ್‌, ಜರ್ಮನಿ, ಕತಾರ್‌ ಸೇರಿದಂತೆ 8 ರಾಷ್ಟ್ರಗಳ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲದೇ, ದೇಶದ ವಿವಿಧೆಡೆಯಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ದೇಶದ ವಿವಿಧೆಡೆ ಇರುವ ಐಐಟಿ, ಐಐಎಸ್‌ಸಿಯಂತಹ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 

ಕರ್ನಾಟಕವು ಹೂಡಿಕೆಗೆ ಸೂಕ್ತ ಸ್ಥಳವಾಗಿದೆ. ಐಟಿ-ಬಿಟಿ ಕ್ಷೇತ್ರದ ಹಲವು ಕಂಪನಿಗಳು ನೆಲೆಯೂರಿವೆ. ಮೂಲಸೌಕರ್ಯ ಉತ್ತಮವಾಗಿ ಲಭ್ಯವಾಗಿರುವ ಕಾರಣ ಕ್ವಾಂಟಮ್‌ ಕ್ಷೇತ್ರಕ್ಕೂ ಹೂಡಿಕೆ ಮಾಡಲು ಹಲವು ಉದ್ಯಮಿಗಳು ಆಸಕ್ತಿ ತೋರಿವೆ. ಸರ್ಕಾರ ಆಯೋಜಿಸಿರುವ ಸಮಾವೇಶದಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯೂ ಇದೆ.  ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. 2035 ರ ವೇಳೆಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲನ್ನು ಕರ್ನಾಟಕದ್ದಾಗಿಸಲು ಗುರಿ ಇಟ್ಟುಕೊಂಡು, ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. 

ಕ್ವಾಂಟಮ್‌ ಕ್ಷೇತ್ರದಲ್ಲಿ ಭಾರತ ಬಲಿಷ್ಠ ಸಾಮರ್ಥ್ಯ

ಕ್ವಾಂಟಮ್ ತಂತ್ರಜ್ಞಾನ ಸ್ಪರ್ಧೆಯಲ್ಲಿ ಪ್ರಮುಖ ಲಾಭಗಳನ್ನು ಗಳಿಸುವ ಅವಕಾಶವನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಈ ಕ್ಷೇತ್ರದಲ್ಲಿ ನವೋದ್ಯಮಗಳು ಪ್ರಾರಂಭವಾಗುತ್ತಿವೆ. ಭಾರತವು ಕ್ವಾಂಟಮ್ ಅಳವಡಿಕೆಯ ಆರಂಭಿಕ ಹಂತಗಳಲ್ಲಿದೆ. ಭಾರತಕ್ಕೆ ಹೋಲಿಸಿದರೆ ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಕ್ವಾಂಟಮ್ ಅಳವಡಿಕೆಯ ವಿಷಯದಲ್ಲಿ ಬಹಳ ಮುಂದಿವೆ. ಕ್ವಾಂಟಮ್‌ ಮಹತ್ವದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯ ಇದೆ ಎಂಬುದು ಕ್ವಾಂಟಮ್ ಸಮ್ಮೇಳನದಲ್ಲಿ ಭಾಗವಹಿಸಿದ ಕ್ಷೇತ್ರದ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ ಸಂಸ್ಥೆಯ ಮುಖ್ಯಸ್ಥೆ ಡಾ. ಅಮೃತ ಡಿ.ಅಧಿಕಾರಿ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ, ಐಟಿ-ಬಿಟಿ ಕ್ಷೇತ್ರದಂತೆ ಮುಂದಿನ ದಿನದಲ್ಲಿ ಕ್ವಾಂಟಮ್‌ ಕ್ಷೇತ್ರಕ್ಕೂ ಹೆಚ್ಚಿನ ಬೇಡಿಕೆ ಬರಲಿದೆ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಕೇಂದ್ರ ಸರ್ಕಾರವು ಸಾಕಾಷ್ಟು ಉತ್ತೇಜನ ನೀಡುತ್ತಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ವಿಫುಲ ಅವಕಾಶಗಳಿವೆ. ಹೀಗಾಗಿ ಹೂಡಿಕೆ ಮಾಡಲು ಹೆಚ್ಚಿನ ಮಂದಿ ಆಸಕ್ತಿ ಹೊಂದಿದ್ದಾರೆ. ಮೊದಲ ಸಮ್ಮೇಳನದಲ್ಲಿ ಸರ್ಕಾರವು ಮೂಲಸೌಕರ್ಯ ಕಲ್ಪಿಸುವ ಅಶ್ವಾಸನೆ ನೀಡಿದೆ. ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ ಸುಮಾರು ಎಂಟು ಸ್ಟಾರ್ಟ್‌ಆಪ್‌ಗಳಿಗೆ ಆರ್ಥಿಕ ನೆರವು ಒದಗಿಸುತ್ತಿದೆ. ಸರ್ಕಾರವು ನೀಡಿದ ಅಶ್ವಾಸನೆಯಂತೆ ನಡೆದುಕೊಂಡರೆ ಅವುಗಳು ಸಹ ಬೆಂಗಳೂರಲ್ಲಿ ಸ್ಥಾಪನೆಯಾಗಬಹುದು ಎಂದು ಹೇಳಿದರು. 

ಟಾಕ್ಯೂಬಿಟ್‌ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಸತೀಶ್‌ ಎಸ್‌.ಕನ್ನೇಗಲ ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ, ಕ್ವಾಂಟಮ್‌ ಕ್ಷೇತ್ರವು ಬೆಳವಣಿಗೆಯ ಹಾದಿಯಲ್ಲಿದೆ. ಪ್ರಸ್ತುತ ಸಂಶೋಧನೆ ಹಂತದಲ್ಲಿದೆ. ಮುಂದಿನ ವರ್ಷದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳು ಲಭಿಸಲಿವೆ. ಐಟಿ-ಬಿಟಿ ಕ್ಷೇತ್ರದಂತೆಯೇ ಇದು ಅಭಿವೃದ್ಧಿ ಕಾಣಲಿದೆ. ಬೆಂಗಳೂರು ಹಣ ಹೂಡಿಕೆಗೆ ಸೂಕ್ತ ಸ್ಥಳವಾಗಿದೆ. ಐಟಿ ಕ್ಷೇತ್ರದಲ್ಲಿ ವಿಫುಲ ಅವಕಾಶ ಇರುವುದು ಬೆಂಗಳೂರಲ್ಲಿನಲ್ಲಿಯೇ. ಹೀಗಾಗಿ ಹೂಡಿಕೆದಾರರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ. ಸರ್ಕಾರವು ಸಹ ಬೆಂಗಳೂರಿನ ಐಐಎಸ್‌ಸಿ ಬಳಿ ಕ್ವಾಂಟನ್‌ ಕ್ಷೇತ್ರಕ್ಕಾಗಿ ಕೇಂದ್ರವೊಂದನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಹೂಡಿಕೆ ಮಾಡುವ ಕಂಪನಿಗಳಿಗೆ ಮತ್ತಷ್ಟು ವಿಶ್ವಾಸ ಹೆಚ್ಚಲಿದೆ. ಸಮಾವೇಶದಲ್ಲಿ ಸರ್ಕಾರವು ಈ ಬಗ್ಗೆ ಉದ್ಯಮದಾರರಲ್ಲಿ ವಿಶ್ವಾಸ ಮೂಡಿಸಬೇಕಾದ ಅಗತ್ಯ ಇದೆ ಎಂದು ತಿಳಿಸಿದರು. 

ಕತಾರ್‌ನಿಂದ ಆಗಮಿಸಿದ ಪ್ರತಿನಿಧಿ ಮತ್ತು ಕ್ವಾಂಟಮ್‌ ಮೆಷಿನ್‌ ಕಂಪನಿಯ ಸಿಇಒ ಇತಿಮಾರ್‌ ಸಿವಾನ್‌ ಮಾತನಾಡಿ, ಜಾಗತಿಕವಾಗಿ ಪ್ರಬಲವಾದ ವೇದಿಕೆಯ ಅನುಪಸ್ಥಿತಿಯು ಭಾರತಕ್ಕೆ ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುನ್ನಡೆಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಜಾಗತಿಕ ಕ್ವಾಂಟಮ್ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲು ಮಾತ್ರವಲ್ಲದೆ ಅದನ್ನು ಹೊಂದಿಸಲು ಸಹಾಯ ಮಾಡುವ ಸಾಮರ್ಥ್ಯಗಳನ್ನುನಿರ್ಮಿಸಬೇಕಿದೆ. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಭಾರತವು ಹಣವನ್ನು ಹೆಚ್ಚಿಸಬೇಕಾಗಿದೆ, ಹೆಚ್ಚಿನ ಹಣವು ಉದ್ಯಮದಿಂದ ಬರುತ್ತದೆ ಎಂದರು. 

ಜಾಗತಿಕವಾಗಿ, ಕ್ವಾಂಟಮ್ ಸಂಶೋಧನೆಯಲ್ಲಿ ಸರ್ಕಾರಿ ಹೂಡಿಕೆಗಳು 1 ಬಿಲಿಯನ್ ಡಾಲರ್‌ನಿಂದ 3.5 ಬಿಲಿಯನ್ ಡಾಲರ್‌ವರೆಗೆ ಇರಲಿದೆ. ಅಮೆರಿಕ ಮತ್ತು ಚೀನಾ ಮಾತ್ರ ತಲಾ 2 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣವನ್ನು ನೀಡುತ್ತವೆ. ಉದ್ಯಮದ ಭಾಗವಹಿಸುವಿಕೆಯನ್ನು ಪರಿಗಣಿಸಿದಾಗ, ಆ ಸಂಖ್ಯೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಭಾರತವು ಆ ದಿಕ್ಕಿನಲ್ಲಿ ಸಾಗಬೇಕು. ಕ್ವಾಂಟಮ್ ತಂತ್ರಜ್ಞಾನವನ್ನು ಉತ್ತಮ ವ್ಯವಹಾರವೆಂದು ಪರಿಗಣಿಸಬೇಕು ಮತ್ತು ಅಮೆರಿಕ ಮತ್ತು ಯುರೋಪ್‌ನಲ್ಲಿ ಗೂಗಲ್, ಮೈಕ್ರೋಸಾಫ್ಟ್ ಮತ್ತು ಐಬಿಎಂನಂತಹ ಕಂಪನಿಗಳ ಹೂಡಿಕೆಯಿಂದಾಗಿ ಕ್ವಾಂಟಮ್ ತಂತ್ರಜ್ಞಾನವು ಹೆಚ್ಚಾಗಿ ಮುಂದುವರೆದಿದೆ. ಈ ನಿಟ್ಟಿನಲ್ಲಿ ಭಾರತ ಕಾರ್ಯನಿರ್ವಹಿಸಬೇಕಿದೆ ಎಂಬ ಅಭಿಪ್ರಾಯಗಳನ್ನು ಹಲವು ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ. 


Tags:    

Similar News