ತಿಂಗಳಿಗೊಂದು ಯೂ-ಟರ್ನ್‌ | ನೇಮಕ, ಪುರಸ್ಕಾರ: ನಿಲ್ಲದ ಅವಾಂತರ; ತಪ್ಪದ ಮುಜಗರ

ಕಳೆದ ಮೂರು ತಿಂಗಳ ಹಿಂದೆ ವಿವಿಧ ಅಕಾಡೆಮಿ, ನಿಗಮ-ಮಂಡಳಿಗಳಿಗೆ ನೇಮಕಾತಿ ಆರಂಭಿಸಿದಂದಿನಿಂದ ಪ್ರತಿ ತಿಂಗಳೂ ಸರ್ಕಾರ, ತಾನೇ ಮಾಡಿದ ನೇಮಕಾತಿಗಳನ್ನು ತಾನೇ ರದ್ದು ಮಾಡುವ, ತಡೆ ಹಿಡಿಯುವ ಅಥವಾ ಬದಲಾಯಿಸುವ ಮುಜಗರಕ್ಕೆ ಈಡಾಗುತ್ತಲೇ ಇದೆ.

Update: 2024-09-05 13:03 GMT

ವಿವಿಧ ಪ್ರಶಸ್ತಿ ಮತ್ತು ನೇಮಕಾತಿಗಳ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೇಲಿಂದ ಮೇಲೆ ಮುಜಗರದ ಪರಿಸ್ಥಿತಿ ಎದುರಾಗುತ್ತಲೇ ಇದೆ. ಕಳೆದ ಮೂರು ತಿಂಗಳ ಹಿಂದೆ ವಿವಿಧ ಅಕಾಡೆಮಿ, ನಿಗಮ-ಮಂಡಳಿಗಳಿಗೆ ನೇಮಕಾತಿ ಆರಂಭಿಸಿದಂದಿನಿಂದ ಪ್ರತಿ ತಿಂಗಳೂ ಸರ್ಕಾರ, ತಾನೇ ಮಾಡಿದ ನೇಮಕಾತಿಗಳನ್ನು ತಾನೇ ರದ್ದು ಮಾಡುವ, ತಡೆ ಹಿಡಿಯುವ ಅಥವಾ ಬದಲಾಯಿಸುವ ಮುಜಗರಕ್ಕೆ ಈಡಾಗುತ್ತಲೇ ಇದೆ.

ಇದೀಗ ನೇಮಕಾತಿ ಮತ್ತು ಪ್ರಶಸ್ತಿ ವಿಷಯದಲ್ಲಿ ಸರಣಿ ಯೂ- ಟರ್ನ್ ಮುಂದುವರಿದಿದ್ದು, ಸೆ.5ರ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಪಿಯು ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ಪ್ರಕಟಣೆ ಹೊರಡಿಸಿ ಕೆಲವೇ ಕ್ಷಣಗಳಲ್ಲಿ ತಡೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ ʼಅತ್ಯುತ್ತಮ ಶಿಕ್ಷಕ ಪ್ರಶಸ್ತಿʼಗೆ ಪಿಯು ಕಾಲೇಜು ಪ್ರಾಂಶುಪಾಲರ ಕೋಟಾದಡಿ ಆಯ್ಕೆಯಾಗಿದಿದ್ದೇ ಇಬ್ಬರು. ಆ ಇಬ್ಬರ ಆಯ್ಕೆಯಲ್ಲೂ ಯಡವಟ್ಟು ಮಾಡಿಕೊಂಡಿರುವ ಸರ್ಕಾರ, ತನ್ನ ಆಯ್ಕೆಯ ಮಾನದಂಡಗಳು ಮತ್ತು ಕಾರ್ಯಕ್ಷಮತೆಯನ್ನು ತಾನೇ ನಗೆಪಾಟಲಿಗೆ ಈಡುಮಾಡಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಪಿಯು ಕಾಲೇಜು ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ಮಂಗಳವಾರ ರಾತ್ರಿ ಘೋಷಿಸಿದ್ದ ರಾಜ್ಯಮಟ್ಟದ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿಯನ್ನು ಬುಧವಾರ ಮಧ್ಯಾಹ್ನದ ಹೊತ್ತಿಗೆ ತಡೆಹಿಡಿಯಲಾಯಿತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದ ಹುಟ್ಟಲು ಕಾರಣವಾಗಿದ್ದು ಇದೇ ಪ್ರಾಂಶುಪಾಲರ ಕಾಲೇಜು. ಸ್ವತಃ ಈ ಪ್ರಾಂಶುಪಾಲರು, ಹಿಜಾಬ್ ಧರಿಸಿದ್ದ ಹೆಣ್ಣುಮಕ್ಕಳಿಗೆ ಕಾಲೇಜಿನ ಒಳಗೆ ಪ್ರವೇಶ ನೀಡದೆ ಗೇಟ್‌ಗೆ ಬೀಗ ಹಾಕಿದ್ದರು ಎಂಬ ವಿಷಯ ಸರ್ಕಾರಕ್ಕೆ ಗೊತ್ತಿರಲಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ʼಅನಾಹುತವಾಯಿತು, ಪ್ರಶಸ್ತಿ ಇಂಥವರಿಗೆ ಕೊಡುವುದೇ?ʼ ಎಂದು ಹುಯಿಲೆಬ್ಬಿಸಿದ ಬಳಿಕ ಸರ್ಕಾರ ಎಚ್ಚೆತ್ತು, ಪ್ರಶಸ್ತಿ ತಡೆ ಹಿಡಿಯಿತು!

ಸಿಂಡಿಕೇಟ್ ನೇಮಕ: ಕಟಕಟೆಯಲ್ಲಿ ನಿಂತ ಸರ್ಕಾರ

ವಿಪರ್ಯಾಸವೆಂದರೆ; ಅದೇ ಬುಧವಾರವೇ ನೇಮಕಾತಿಯ ವಿಷಯದಲ್ಲಿಯೂ ಸರ್ಕಾರಕ್ಕೆ ಹೈಕೋರ್ಟಿನ ಅಂಗಳದಿಂದಲೂ ಮತ್ತೊಂದು ಮುಖಭಂಗದ ವಿದ್ಯಮಾನ ನಡೆಯಿತು. ಆಗಸ್ಟ್ ಕೊನೆಯ ವಾರ ಸರ್ಕಾರ ನೇಮಕ ಮಾಡಿದ್ದ ವಿವಿಧ ವಿವಿಗಳ ಸಿಂಡಿಕೇಟ್ ಸದಸ್ಯರ ನೇಮಕಾತಿಯ ವಿಷಯದಲ್ಲಿ ಹೈಕೋರ್ಟ್ ಬುಧವಾರ ನೀಡಿರುವ ಸೂಚನೆ ಸರ್ಕಾರದ ಆಯ್ಕೆಗಳ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟಿಸಿದೆ.

ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಗಳಿಗೆ ಸರ್ಕಾರ ಕಳೆದ ವಾರ ನೇಮಕ ಮಾಡಿದ್ದ 9 ಮಂದಿ ನಾಮನಿರ್ದೇಶಿತ ಸದಸ್ಯರ ಅರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನೂತನ ಸಿಂಡಿಕೇಟ್ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಮತ್ತು ಸಿಂಡಿಕೇಟ್ ಸೇರಿದಂತೆ ವಿವಿಯ ಸಭೆ- ಸಮಾರಂಭಗಳಲ್ಲಿ ಆ ಸ್ಥಾನಬಲದ ಮೇಲೆ ಭಾಗವಹಿಸದಂತೆ ಮೌಖಿಕ ಸೂಚನೆ ನೀಡಿದೆ. ಮುಖ್ಯವಾಗಿ ನೇಮಕಗೊಂಡವರು ವಿವಿ ಕಾಯ್ದೆಯ ಅನುಸಾರ ಶಿಕ್ಷಣ ತಜ್ಞರಲ್ಲ; ಸಿಂಡಿಕೇಟ್ ಸದಸ್ಯರಾಗುವ ಅರ್ಹತೆ ಹೊಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಹೊಂದಿಲ್ಲ. ಇದು ಕರ್ನಾಟಕ ರಾಜ್ಯ ವಿವಿ ಕಾಯ್ದೆಯ ಸೆಕ್ಷನ್ 28(1)(ಜಿ) ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರು ಆಕ್ಷೇಪವೆತ್ತಿದ್ದಾರೆ.

ವೈಲ್ಡ್‌ ಲೈಫ್ ಮಂಡಳಿ ನೇಮಕ ವಿವಾದ

ಜುಲೈನಲ್ಲಿ ಸರ್ಕಾರ ಮಾಡಿದ ರಾಜ್ಯ ವನ್ಯಜೀವಿ ಮಂಡಳಿ ನೇಮಕಾತಿ ವಿಷಯ ಕೂಡ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ವನ್ಯಜೀವಿ ಮಂಡಳಿಗೆ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಪರಿಣತರನ್ನು ನೇಮಕ ಮಾಡಬೇಕಾಗಿದ್ದ ಸರ್ಕಾರ, ತನ್ನ ಇಬ್ಬರು ನಾಯಕರ ಪುತ್ರರು ಸೇರಿದಂತೆ ಪಕ್ಷದ ನಾಯಕರ ಮಕ್ಕಳನ್ನೇ ನೇಮಕ ಮಾಡಿ ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು.

ಸಚಿವ ಎಂ ಬಿ ಪಾಟೀಲ್ ಪುತ್ರ, ಶಾಸಕ ವಿನಯ್ ಕುಲಕರ್ಣಿ ಪುತ್ರಿ, ಪಕ್ಷದ ವಕ್ತಾರ ಸಂಕೇತ್ ಪೂವಯ್ಯ, ಸಚಿವ ಜಾರ್ಜ್ ಆಪ್ತ ಡಾ ಸಂತೃಪ್ತ್ ಅವರನ್ನು ವನ್ಯಜೀವಿ ಅಧ್ಯಯನವಾಗಲೀ, ಸಂಶೋಧನೆಯಾಗಲೀ ಇಲ್ಲದೆ, ಕೇವಲ ಸಚಿವರ ಆಪ್ತರು ಎಂಬ ಕಾರಣಕ್ಕೆ ನೇಮಕ ಮಾಡಲಾಗಿತ್ತು. ಅಲ್ಲದೆ ಇಡೀ ಪಶ್ಚಿಮಘಟ್ಟದ ವ್ಯಾಪ್ತಿಯ ಯಾರೊಬ್ಬರಿಗೂ ಮಂಡಳಿಯಲ್ಲಿ ಸ್ಥಾನ ನೀಡದೆ ವನ್ಯಜೀವಿ ಮಂಡಳಿ ರಚನೆ ಮಾಡಲಾಗಿದೆ ಎಂಬ ಕಾರಣಕ್ಕೆ ಮಂಡಳಿ ನೇಮಕಾತಿಯೇ ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದ ಸಂಗತಿಯಾಗಿತ್ತು.

ಅಕಾಡೆಮಿ-ಪ್ರಾಧಿಕಾರ ನೇಮಕದಲ್ಲೂ ಅದೇ ಯಡವಟ್ಟು!

ಇನ್ನು ಕಳೆದ ಜೂನ್‌ನಲ್ಲಿ ಸರ್ಕಾರದ ವಿವಿಧ ನಿಗಮ- ಮಂಡಳಿ, ಪ್ರಾಧಿಕಾರ, ಅಕಾಡೆಮಿಗಳಿಗೆ ನಡೆದ ನೇಮಕಾತಿಯಲ್ಲೂ ಇಂತಹದ್ದೇ ಯಡವಟ್ಟುಗಳು ಎದುರಾಗಿದ್ದವು.

ಆ ಬಾರಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರ ಆಯ್ಕೆಯೇ ವಿವಾದಕ್ಕೀಡಾಗಿತ್ತು. ಡಾ ಕೃಪಾ ಫಡ್ಕೆ ಎಂಬ ಕಲಾವಿದರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದ ಬಳಿಕ, ಅವರು ʼಬಲಪಂಥೀಯರು, ಬಿಜೆಪಿಯ ಬೆಂಬಲಿಗರುʼ ಎಂಬ ವಾದ ಮುನ್ನೆಲೆಗೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಆ ವಿಷಯ ಚರ್ಚೆಗೆ ಬರುತ್ತಲೇ ಎಚ್ಚೆತ್ತ ಸರ್ಕಾರ, ಅವರ ನೇಮಕ ತಡೆ ಹಿಡಿದು ಅವರ ಬದಲಾಗಿ ಮತ್ತೊಬ್ಬರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಅದೇ ವೇಳೆ ರಾಜ್ಯ ನಾಟಕ ಅಕಾಡೆಮಿಗೆ ಮಾಲೂರು ವಿಜಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದು ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ವಿಜಯಲಕ್ಷ್ಮಿ ಕೌಟಗಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದು ಕೂಡ ಅವರ ರಾಜಕೀಯ ನಿಲುವಿನ ಹಿನ್ನೆಲೆಯಲ್ಲಿ ವಿರೋಧಕ್ಕೆ ಒಳಗಾಗಿತ್ತು. ಆ ಹಿನ್ನೆಲೆಯಲ್ಲಿ ಅವರ ನೇಮಕವನ್ನೂ ರದ್ದು ಮಾಡಿ ಹೊಸಬರನ್ನು ನೇಮಕ ಮಾಡಲಾಗಿತ್ತು.

ಹೀಗೆ ಕಳೆದ ಮೂರು ತಿಂಗಳಲ್ಲಿ; ಜೂನ್, ಜುಲೈ, ಆಗಸ್ಟ್ ಮತ್ತು ಇದೀಗ ಸೆಪ್ಟೆಂಬರಿನಲ್ಲಿ; ನೇಮಕಾತಿ ಮತ್ತು ಪ್ರಶಸ್ತಿ- ಪುರಸ್ಕಾರಗಳ ವಿಷಯದಲ್ಲಿ ಸರ್ಕಾರ ಮತ್ತೆ ಮತ್ತೆ ಯೂ- ಟರ್ನ್ ಹೊಡೆಯುತ್ತಲೇ ಇದೆ. ಮುಜಗರಕ್ಕೀಡಾಗುತ್ತಲೇ ಇದೆ.

ಪಕ್ಷದಲ್ಲೇ ಎದ್ದಿದೆ ಅಸಮಾಧಾನದ ಸುನಾಮಿ

ಈ ನಡುವೆ, ಈ ನೇಮಕಾತಿ ಯಡವಟ್ಟುಗಳಿಂದಾಗಿ ಎದುರಾಗಿರುವ ಸಾರ್ವಜನಿಕ ಮುಜಗರದ ಜೊತೆಗೆ ಸರ್ಕಾರಕ್ಕೆ ಪಕ್ಷದೊಳಗೇ ಆಂತರಿಕ ಸಂಕಷ್ಟವೂ ಎದುರಾಗಿದೆ.

ʼನಿಗಮ- ಮಂಡಳಿ, ಪ್ರಾಧಿಕಾರ- ಅಕಾಡೆಮಿಗಳ ನೇಮಕಾತಿಗಾಗಿಯೇ ರಚಿಸಿದ್ದ ಸಚಿವ ಡಾ ಜಿ ಪರಮೇಶ್ವರ್ ನೇತೃತ್ವದ ಸಮಿತಿಯ ಗಮನಕ್ಕೆ ತಾರದೇ ಹಲವು ನೇಮಕಾತಿಗಳಾಗಿವೆ. ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ಸಿಂಡಿಕೇಟ್ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಲಾಗಿದೆ. ಅರ್ಹತೆ ಇಲ್ಲದೇ ಇದ್ದರೂ ಹಲವರು ಹೊರಗಿನವರನ್ನು ನೇಮಕ ಮಾಡಲಾಗಿದೆ. ಇದು ಹಿರಿಯ ನಾಯಕ ಪರಮೇಶ್ವರ್ ಅವರಿಗೆ ಅವಮಾನ ಮಾತ್ರವಲ್ಲ; ಪಕ್ಷಕ್ಕಾಗಿ ಧ್ವಜ ಹಿಡಿದು ದುಡಿಯುವವರಿಗೆ ಮಾಡಿದ ಅವಮಾನ ಕೂಡʼ ಎಂಬ ಆಕ್ರೋಶ ಪಕ್ಷದೊಳಗೆ ಭುಗಿಲೆದ್ದಿದೆ.

ಅದರಲ್ಲೂ ʼಇತರೆ ಪಕ್ಷಗಳಲ್ಲಿ ಇದ್ದು, ಚುನಾವಣೆಗಳಲ್ಲಿ ಪಕ್ಷ ಮತ್ತು ಸ್ವತಃ ಸಿಎಂ, ಡಿಸಿಎಂಗಳೂ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಬೈದಾಡಿದವರನ್ನು ಕರೆ ತಂದು ಏಕಾಏಕಿ ಪ್ರಾಧಿಕಾರ, ಸಿಂಡಿಕೇಟ್‌ಗಳಿಗೆ ನೇಮಕ ಮಾಡಿರುವುದು ಪಕ್ಷನಿಷ್ಠರಿಗೆ ಮಾಡಿದ ಅವಮಾನʼ ಎಂದೇ ಕಾಂಗ್ರೆಸ್ ಪಕ್ಷದ ಎರಡನೇ ಮತ್ತು ಮೂರನೇ ಹಂತದ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನೇಮಕಾತಿಗಳ ವಿಷಯದಲ್ಲಿ ತೀವ್ರ ಅಸಮಾಧಾನಗೊಂಡಿರುವ ಗುಂಪು, ʼಪಕ್ಷದ ಮಟ್ಟದಲ್ಲಾಗಲೀ, ಪಕ್ಷದ ಅಧ್ಯಕ್ಷರ ಮಟ್ಟದಲ್ಲಾಗಲೀ ಈ ಪಟ್ಟಿಗಳು ಸಿದ್ಧವಾಗಿಲ್ಲ. ಬದಲಾಗಿ ಮುಖ್ಯಮಂತ್ರಿಗಳ ಕುಟುಂಬವರ್ಗಕ್ಕೆ ಆಪ್ತರಾಗಿರುವ ಒಬ್ಬಿಬ್ಬರು ತಮ್ಮದೇ ಕಚೇರಿಗಳಲ್ಲಿ ಕುಳಿತು ತಮಗೆ ಬೇಕಾದವರನ್ನು ಪಟ್ಟಿ ಮಾಡಿ ಕಳಿಸುತ್ತಿದ್ದಾರೆʼ ಎಂಬ ಗಂಭೀರ ಆಪಾದನೆಯನ್ನು ಕೂಡ ಮಾಡಿದೆ. ಆ ಹಿನ್ನೆಲೆಯಲ್ಲಿ ಈ ನೇಮಕಾತಿಗಳ ವಿಷಯದಲ್ಲಿ ದೆಹಲಿಗೆ ದೂರು ಒಯ್ಯುವ ಪ್ರಯತ್ನಗಳೂ ಆರಂಭವಾಗಿವೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.

Tags:    

Similar News