ಮುಂಗಾರು ಅಧಿವೇಶನ | ಪಕ್ಷಪಾತ ಧೊರಣೆ ಆರೋಪ: ಸ್ಪೀಕರ್ ನಡೆ ವಿರೋಧಿಸಿ ಬಿಜೆಪಿ ಶಾಸಕರ ಪತ್ರ
ಮುಂಗಾರು ಅಧಿವೇಶನದಲ್ಲಿ ಕಳೆದ ಒಂದು ವಾರದಿಂದ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಪ್ರತಿಪಕ್ಷ ಬಿಜೆಪಿ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸ್ವತಃ ವಿಧಾನಸಭಾ ಸಭಾಧ್ಯಕ್ಷರ ವಿರುದ್ಧವೇ ಪಕ್ಷಪಾತ ಧೋರಣೆಯ ಗಂಭೀರ ಆರೋಪ ಮಾಡಿದೆ.
ಈ ಕುರಿತು ಸಭ್ಯಾಧ್ಯಕ್ಷ ಯು ಟಿ ಖಾದರ್ ಅವರಿಗೆ ಪತ್ರ ಬರೆದಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಅವರ ಪಕ್ಷದ ಇತರೆ ಶಾಸಕರು, ಕರ್ನಾಟಕ ವಿಧಾನಸಭೆ ಇಡಿ ದೇಶಕ್ಕೆ ಮಾದರಿಯಾಗಿದೆ, ಆದರೆ ಮುಂಗಾರು ಅಧಿವೇಶನಲ್ಲಿ ತಾವು ಕಲಾಪ ನಡೆಸಿದ ವೈಖರಿ ವಿಧಾನಸಭೆಯ ಹೆಗ್ಗಳಿಕೆಗೆ ಚ್ಯುತಿ ತರುವಂತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕಲಾಪದ ವೇಳೆ ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ಬಿಡದೆ, ಸ್ಪೀಕರ್ ಸ್ವ ಪಕ್ಷ ಕಾಂಗ್ರೆಸ್‌ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ವಿಪಕ್ಷಗಳಿಗೆ ಅವಕಾಶವನ್ನೇ ನೀಡದಿರುವುದು ಪ್ರಜಾತ೦ತ್ರ ವ್ಯವಸ್ಥೆ ಅಪಾಯಕ್ಕೆ ಜಾರುತ್ತಿದೆಯೇನೋ ಎ೦ಬ ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಬಿಜೆಪಿ ಪತ್ರದಲ್ಲಿ ಏನಿದೆ?
ಸಂಸದೀಯ ವ್ಯವಹಾರ ಹಾಗೂ ಗುಣಮಟ್ಟದ ಕಲಾಪ ನಿರ್ವಹಣೆಯ ಕಾರಣಕ್ಕಾಗಿ ಕರ್ನಾಟಕ ವಿಧಾನಸಭೆ ಇಡೀ ದೇಶಕ್ಕೇ ಮಾದರಿಯಾಗಿದೆ. ಅತಿ ಹೆಚ್ಚು ಬಾರಿ ಗೆದ್ದ ಶಾಸಕರ ಪೈಕಿ ಒಬ್ಬರಾಗಿರುವ ನಿಮಗೆ ಇದು ತಿಳಿಯದ ಸಂಗತಿಯೇನು ಅಲ್ಲ. ವೈಕುಂಠ ಬಾಳಿಗರಿಂದ ಮೊದಲ್ಗೊಂಡು ಇಲ್ಲಿವರೆಗೆ ಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಸ್ಪೀಕರ್ ತಮ್ಮದೇ ಆದ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿದರೂ ಅವರ ಉದ್ದೇಶ ಮಾತ್ರ ಗುಣಮಟ್ಟದ ಕಲಾಪದ ಜತೆಗೆ ಶಾಸನ ಸಭೆ ಜನಹಿತದ ಚರ್ಚೆಗೆ ಧ್ವನಿಯಾಗಬೇಕು ಎಂಬುದೇ ಆಗಿತ್ತು. ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಸ್ಪೀಕರ್ ಸ್ಥಾನದಲ್ಲಿ ಕುಳಿತ ಹಿರಿಯರಾದ ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಈ ವಿಚಾರದಲ್ಲಿ ಇಡಿ ದೇಶಕ್ಕೆ ಮಾದರಿಯಾಗಿ ಸಭಾಧ್ಯಕ್ಷ ಸ್ನಾನದ ಘನತೆಯನ್ನು ಎತ್ತಿ ಹಿಡಿದಿದ್ದರು. ಸ್ಪೀಕರ್ ದೃಷ್ಟಿ, ಕಿವಿ ಹಾಗೂ ಹೃದಯ ಸದಾ ವಿಪಕ್ಷಗಳ ಪರವಾಗಿರಬೇಕು, ತನ್ಮೂಲಕ ಪ್ರಜಾ ಧ್ವನಿಗೆ ಅವರು ಉತ್ತರದಾಯಿಯಾಗಿರಬೇಕು ಎಂಬ ಆಶಯವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠದಲ್ಲಿ ಆಸೀನರಾದ ಪ್ರತಿಯೊಬ್ಬರು ವ್ರತದಂತೆ ನಡೆಸಿಕೊಂಡು ಬಂದಿರುವುದು ತಮಗೂ ತಿಳಿದಿರುವ ಸತ್ಯ.
ಆದರೆ ಮುಂಗಾರು ಅಧಿವೇಶನ ಸಂದರ್ಭದಲ್ಲಿ ತಾವು ಕಲಾಪ ನಡೆಸಿದ ವೈಖರಿ ಕರ್ನಾಟಕ ವಿಧಾನಸಭೆಯ ಈ ಉದಾತ್ತ ಪರಂಪರೆಗೆ ಚ್ಯುತಿ ತರುವ ಹಾದಿಯಲ್ಲಿದೆಯೇನೋ ಎಂಬ ಅನುಮಾನಕ್ಕೆ ಕಾರಣವಾಗಿದೆ. ವಿಪಕ್ಷಗಳು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ವಿಧೇಯಕಗಳ ಮಂಡನೆ ಹೊಸತಲ್ಲ. ಆದರೆ ಆಡಳಿತ ಪಕ್ಷದ ಶಾಸಕರು ನೀಡಿದ ಸೂಚನಾ ಪತ್ರದ ಆಧಾರದ ಮೇಲೆ ತಾವು ನಿಯಮ 69ರ ಅನ್ವಯ ಚರ್ಚೆಗೂ ಅವಕಾಶ ಮಾಡಿಕೊಟ್ಟಿರಿ. ಈ ಪರಂಪರೆ ಸರಿಯಲ್ಲ ಎಂದು ವಿಪಕ್ಷ ಶಾಸಕರು ಪದೇ ಪದೇ ಹೇಳಿದರೂ ಅತ್ತ ಲಕ್ಷ್ಯ ನೀಡದೇ, ಅವರ ಧ್ವನಿಯನ್ನೂ ಕೇಳಿಸಿಕೊಳ್ಳದೇ ಏಕಪಕ್ಷೀಯವಾಗಿ ಕಲಾಪ ನಿರ್ವಹಣೆ ಮಾಡಿದ್ದು ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ದುರ್ದಿನ ಎಂದು ಭಾವಿಸಬೇಕಾಗುತ್ತದೆ.
ಈ ರೀತಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ನಿಮ್ಮ ಕಾರ್ಯ ಶೈಲಿಯ ಭಾಗವೇನೋ ಎಂಬ ಅನುಮಾನ ನಮ್ಮೆಲ್ಲರನ್ನೂ ಬಲವಾಗಿ ಕಾಡುವುದಕ್ಕೆ ನಿಮ್ಮ ಹಲವು ವರ್ತನೆಗಳೇ ಸಾಕ್ಷಿಯಾಗಿವೆ. ಮೊದಲ ಕಲಾಪದಲ್ಲಿಯೇ ವಿಪಕ್ಷದ ಸದಸ್ಯರನ್ನು ಅಮಾನತು ಮಾಡಿದ ಕೀರ್ತಿಯೂ ನಿಮ್ಮದಾಗಿದೆ. ಈ ಕಲಾಪದಲ್ಲಿ ಸರ್ಕಾರ ಮಾಡಿದ ಹಲವು ತಪ್ಪುಗಳನ್ನು ಸದನದಲ್ಲಿ ಅನಾವರಣಗೊಳಿಸಬೇಕೆಂಬ ವಿಪಕ್ಷದ ಪ್ರಯತ್ನ ಜನರ ಬೇಡಿಕೆಯಾಗಿತ್ತು. ಆದರೆ ತಾವು ಅದಕ್ಕೆ ಅವಕಾಶವನ್ನೇ ನೀಡದಿರುವುದು ಪ್ರಜಾತಂತ್ರ ವ್ಯವಸ್ಥೆ ಅಪಾಯಕ್ಕೆ ಜಾರುತ್ತಿದೆಯೇನೋ ಎಂಬ ಅನುಮಾನ ಬರುವುದಕ್ಕೆ ಕಾರಣವಾಗಿದೆ.
ಹೀಗಾಗಿ ಕಲಾಪದ ಮುಂದಿನ ಅವಧಿಯಲ್ಲಿ ನೀವು ತ್ರಿಕರ್ಣ ಪೂರ್ವಕವಾಗಿ ವಿಪಕ್ಷಗಳ ಪರ ನಿಲುವು ತಾಳುತ್ತೀರೆಂಬ ನಂಬಿಕೆಯಲ್ಲಿ ನಾವೆಲ್ಲರೂ ಇದ್ದೇವೆ.
ಇಂತಿ ನೊಂದ ಶಾಸಕರು ಎಂದು ಆರ್ ಅಶೋಕ್, ಎಸ್ ಸುರೇಶ್ ಕುಮಾರ್, ವಿ ಸುನೀಲ್ ಕುಮಾರ್ ಮತ್ತಿತರ ಪ್ರತಿಪಕ್ಷ ಶಾಸಕರು ಸಹಿ ಮಾಡಿದ್ದಾರೆ.