ಮಂಕಿ ಫಾಕ್ಸ್ ಭೀತಿ | WHO ತುರ್ತು ಪರಿಸ್ಥಿತಿ ಘೋಷಿಸಿದ್ದರೂ ರಾಜ್ಯದ ಜನತೆಗೆ ಆತಂಕ ಬೇಡ: ಸಚಿವ ಶರಣಪ್ರಕಾಶ್‌ ಪಾಟೀಲ್‌

ʻʻಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಫಾಕ್ಸ್ ಬಗ್ಗೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO ) ಘೋಷಿಸಿದ್ದರೂ ಈ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆ. ಹಾಗಾಗಿ ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದುʼʼ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟಿಲ್‌ ರಾಜ್ಯದ ಜನತೆಗೆ ತಿಳಿಸಿದ್ದಾರೆ.

Update: 2024-08-23 11:29 GMT

ʻʻಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಫಾಕ್ಸ್ ಬಗ್ಗೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO ) ಘೋಷಿಸಿದ್ದರೂ ಈ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆ. ಹಾಗಾಗಿ ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದುʼʼ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟಿಲ್‌ ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಕಿಫಾಕ್ಸ್ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ʻʻಕಳೆದ ಆ.14ರಂದು ವಿಶ್ವ ಆರೋಗ್ಯ ಸಂಸ್ಥೆ ಮಂಕಿಫಾಕ್ಸ್‌ನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಘೋಷಿಸಿದೆ. ಸೋಂಕು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆʼʼ ಎಂದು ಹೇಳಿದರು.

ʻʻಈ ಸೋಂಕು ಇಲ್ಲಿಯವರೆಗೆ ಭಾರತದಲ್ಲಿ ಕಂಡು ಬಂದಿಲ್ಲ. ಈ ಹಿನ್ನೆಲೆ ಯಾವುದೇ ಆತಂಕ ಬೇಡ. ಎನ್‌ಸಿಡಿಸಿ ಜಂಟಿ ನಿರ್ವಹಣೆ ಸಂಸ್ಥೆ ಇದರ ಹರಡುವಿಕೆ ಅಪಾಯದ ಮೌಲ್ಯಮಾಪನ ನಡೆಸುತ್ತಿದೆ. ಒಂದು ವೇಳೆ ಪ್ರಕರಣಗಳಿದ್ದರೆ ಆರಂಭಿಕ ಹಂತದಲ್ಲೇ ಎಚ್ಚರಿಸಲಾಗುವುದುʼʼ ಎಂದು ಪಾಟೀಲ್‌ ಮಾಹಿತಿ ನೀಡಿದರು.

ʻʻಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಮಂಕಿಫಾಕ್ಸ್ ಬಗ್ಗೆ ಬಹಳಷ್ಟು ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ನಮ ರಾಜ್ಯದಲ್ಲಿ ಮಂಕಿಫಾಕ್ಸ್ ಒಂದು ಪ್ರಕರಣವೂ ಕಂಡು ಬಂದಿಲ್ಲ. ಇದರಿಂದ ರಾಜ್ಯದ ಜನರು ಆತಂಕಕ್ಕೆ ಒಳಗಾಗುವುದು ಬೇಡ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದರ ಟೆಸ್ಟ್‌ ಮಾಡುವ ಸೌಲಭ್ಯವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿ ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆʼʼ ಎಂದು ಸಚಿವರು ಹೇಳಿದರು.

ʻʻಇದು ವೈರಲ್‌ ಸೋಂಕು ಆಗಿರಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗ ಪರೀಕ್ಷೆ ಉಚಿತವಾಗಿರುತ್ತದೆ. ಸದ್ಯಕ್ಕೆ 50 ಹಾಸಿಗೆಯ ಐದು ಐಸಿಯು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೂ ಒಂದೇ ಒಂದು ಕೇಸ್‌‍ ಪತ್ತೆಯಾಗಿಲ್ಲದಿದ್ದರೂ ಏಕಾಏಕಿ ಕಂಡುಬಂದರೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆʼʼ ಎಂದು ತಿಳಿಸಿದರು.

ʻʻಈ ಸಂಬಂಧ ಆರೋಗ್ಯ ಇಲಾಖೆ ಜೊತೆಗೂ ಚರ್ಚೆ ನಡೆಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ಮಾಡುವ ಬಗ್ಗೆ ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡುತ್ತದೆʼʼ ಎಂದು ಸಚಿವರು ಹೇಳಿದ್ದಾರೆ.

Tags:    

Similar News