Positive Notes | ತಮ್ಮ ಅನ್ನ ತಾವೇ ಬೆಳೆದು ಸ್ವಾವಲಂಬಿಗಳಾದರು ನಮ್ಮ ಕೊರಗರು...

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಪ್ರಾಚೀನ ದುರ್ಬಲ ಬುಡಕಟ್ಟು ಎಂದೇ ಹೆಸರಿಸಲಾದ ಕೊರಗ ಸಮುದಾಯದ ಅಭಿವೃದ್ಧಿಗೆ ಪ್ರೊ. ಮಹಮ್ಮದ್ ಪೀರ್ ಸಮಿತಿ ನೀಡಿದ ವರದಿ ಅನುಷ್ಠಾನವಾಗದೆ ಧೂಳು ತಿನ್ನುತ್ತಿದೆ!

Update: 2024-11-24 03:30 GMT

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಪ್ರಾಚೀನ ದುರ್ಬಲ ಬುಡಕಟ್ಟು (Particularly Vulnerable Tribal Group-PVTG)  ಎಂದೇ ಹೆಸರಿಸಲಾದವರು ಕೊರಗ ಸಮುದಾಯ. 90ರ ದಶಕದಲ್ಲಿ ಈ ಸಮುದಾಯದ ಅಭ್ಯುದಯಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರವಾಗಿ ವಿವರಿಸಿ ಮಂಡಿಸಲಾದ ಆಗಿನ ಮಂಗಳೂರು ವಿವಿ ಪ್ರೊಫೆಸರ್ ಮಹಮ್ಮದ್ ಪೀರ್ ಸಮಿತಿ ನೀಡಿದ ವರದಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ನಾನಾ ಕಾರಣಗಳಿಂದ ಅನುಷ್ಠಾನವಾಗದೆ ಧೂಳು ತಿನ್ನುತ್ತಿದೆ!

ಇಂಥ ಹೊತ್ತಿನಲ್ಲೇ ಪೀರ್ ಸಮಿತಿಯ ಆಶಯವೊಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮ ಪಂಚಾಯಿತಿಯ ಭತ್ತಗುರಿ ಎಂಬಲ್ಲಿ ಸಾಕಾರಗೊಳ್ಳುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಬತ್ತಗುಳಿಯೀಗ ಅಭಿವೃದ್ಧಿಪಥದಲ್ಲಿ ಮಾದರಿ ಕಾಲೊನಿಯಾಗಿ ರೂಪುಗೊಂಡಿದೆ.

ಕೊರಗ ಸಮುದಾಯದವರಿಗೆ ಭೂಮಿ ಕೊಟ್ಟು ಕೃಷಿ ಹಂತಕ್ಕೆ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಮಹಮ್ಮದ್ ಪೀರ್ ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದರು. ಅದೀಗ ನಿಧಾನವಾಗಿ ಅನುಷ್ಠಾನಗೊಳ್ಳುತ್ತಿದೆ. ಹಿಂದೆ ಇನ್ನೊಬ್ಬರ ಮನೆಯ ಊಟವನ್ನೇ ಆಶ್ರಯಿಸುವಂಥ ದಯನೀಯ ಪರಿಸ್ಥಿತಿಯನ್ನು ಹೊಂದಿದ್ದ ಕೊರಗ ಸಮುದಾಯದವರು ತಮ್ಮ ಅನ್ನವನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ. ಅಕ್ಷರಶಃ ಸ್ವಾವಲಂಬಿಯಾಗುತ್ತಿದ್ದಾರೆ. ಆದರೆ ಇಷ್ಟು ಸಾಕಾಗುವುದಿಲ್ಲ. 1994ರಲ್ಲಿ ಸಲ್ಲಿಕೆಯಾದ ಪೀರ್ ಸಮಿತಿ ವರದಿ ಸಮರ್ಪಕವಾಗಿ ಅನುಷ್ಠಾನವಾಗಬೇಕಿದ್ದರೆ, ರಾಜಕೀಯ ಇಚ್ಛಾಶಕ್ತಿಯೂ ಬೇಕು. ಅದರ ಕೊರತೆ ಈಗ ಎದ್ದು ಕಾಣುತ್ತಿದೆ.

ಪೀರ್ ಕಮಿಟಿ ವರದಿ ಏನು ಹೇಳುತ್ತದೆ

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಸಮಗ್ರ ಗ್ರಾಮೀಣ ಆಶ್ರಮದ ಪ್ರಸ್ತುತ ಅಧ್ಯಕ್ಷರೂ ಆಗಿರುವ ಹಾಗೂ ಬುಡಕಟ್ಟು ಸಮುದಾಯದ ಕುರಿತು ಆಳವಾಗಿ ಅಧ್ಯಯನ ಮಾಡಿಕೊಂಡಿರುವ ಅಶೋಕ್ ಕುಮಾರ್, ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನ ದುರ್ಬಲ ಬುಡಕಟ್ಟು ಗುಂಪು ಎಂದು ಗುರುತಿಸಲ್ಪಡುವ ಎರಡು ಬುಡಕಟ್ಟು ಸಮುದಾಯಗಳಲ್ಲಿ ಕೊರಗ ಸಮುದಾಯದವರೂ ಒಬ್ಬರು. ಭೂಮಿ ಪಡೆಯುವ ಹಕ್ಕು ಸಬಲೀಕರಣ ಪ್ರಕ್ರಿಯೆಯಲ್ಲಿ ಪ್ರಮುಖವಾದದ್ದು. ಕೊರಗ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳು ಎಂಬ ಕುರಿತು ಪೀರ್ ಕಮಿಟಿ ವರದಿಯಲ್ಲಿ ಅನುಮೋದಿಸಲಾಗಿದೆ ಎನ್ನುತ್ತಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಮಹಮ್ಮದ್ ಪೀರ್ 1993-94ರಲ್ಲಿ ಕೊರಗ ಸಮುದಾಯದ ಕುರಿತು ಅಧ್ಯಯನ ಮಾಡಿ ತಮ್ಮ ಶಿಫಾರಸುಗಳನ್ನು ಮಾಡಿತು. ಈ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಹಮ್ಮದ್ ಪೀರ್, ಸದಸ್ಯರಾಗಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ.ಗಿರಿಯಪ್ಪ, ಕೊರಗ ಸಮುದಾಯದಲ್ಲಿ ಇಂಜಿನಿಯರಿಂಗ್ ಪದವೀಧರರಾಗಿದ್ದ ಮೋಹನ್, ಸಮಗ್ರ ಗ್ರಾಮೀಣ ಆಶ್ರಮ ಹಾಗೂ ಐಟಿಡಿಪಿಯ ಸದಸ್ಯರು ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಈ ಸಮಿತಿ ರಚನೆ ಮಾಡಿ ವರದಿ ಸಲ್ಲಿಸಲು ತಿಳಿಸಿದ್ದು, ಅದರಂತೆ ಪೀರ್ ಸಮಿತಿ ವರದಿಯನ್ನು ಒಪ್ಪಿಸಿತ್ತು. ಇದು 13 ಶಿಫಾರಸುಗಳನ್ನು ಮಾಡಿತ್ತು.

ಪ್ರಮುಖ ಶಿಫಾರಸುಗಳು 

  • ಕೊರಗ ಸಮುದಾಯದ ಸಹಕಾರಿ ಸಂಘ ಸ್ಥಾಪನೆಯಾಗಬೇಕು
  • ಪ್ರತಿ ಕೊರಗ ಕುಟುಂಬಕ್ಕೆ 2.5 ಎಕರೆ ಭೂಮಿ ವಿತರಿಸಬೇಕು.
  • ಮಾದರಿ ಕೃಷಿ ಕ್ಷೇತ್ರವನ್ನು ಸರಕಾರ ಸಂಘಟನೆ ಮೂಲಕ ಒದಗಿಸಿ, ಕೊರಗ ಕುಟುಂಬಗಳು ಅಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಕೃಷಿಯಲ್ಲಿ ಪೂರ್ಣ ವಿಶ್ವಾಸ ಬಂದ ಮೇಲೆ ಅವರು ಕ್ರಿಯಾಶೀಲರಾಗುವಂತೆ ಮಾಡಬೇಕು.
  • ಸ್ವಪ್ರೇರಣೆ, ಸ್ವ ಅರಿವು ಹಾಗೂ ಸ್ವ ಸಂಘಟನೆ ಅತ್ಯಗತ್ಯ.
  • ಸುಸ್ಥಿರ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಬೇಕು.

30 ವರ್ಷಗಳಾದರೂ ಧೂಳು ತಿನ್ನುತ್ತಿರುವ ವರದಿ

ಮಹಮ್ಮದ್ ಪೀರ್ ಸಮಿತಿ ವರದಿ ಸಲ್ಲಿಸಿ 30 ವರ್ಷಗಳಾದರೂ ಇನ್ನೂ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಕಾಲಕಾಲಕ್ಕೆ ಅಧಿಕಾರಗ್ರಹಣ ಮಾಡಿದ ಜನಪ್ರತಿನಿಧಿಗಳಿಗೆ ಅನ್ನಿಸಿಲ್ಲ. ಕೊರಗ ಸಮುದಾಯದ ಅಭಿವೃದ್ಧಿ ಭಾಷಣಗಳಲ್ಲಿ ಮುಗಿದುಹೋಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಕುರಿತು ಆಸಕ್ತಿಯಿಂದ ಅಧ್ಯಯನ ಮಾಡುತ್ತಿರುವವರು ಮುಂದೆ ಬಾರದೇ ಇದ್ದರೆ, ಹಾಲಾಡಿಯಲ್ಲಿ ನಡೆದಂಥ ಕೃಷಿ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ.

ಸಾಮಾನ್ಯವಾಗಿ ಭೂಮಿ ಕೊಟ್ಟರೆ ಮುಗೀತು ಎಂದು ಅಂದುಕೊಳ್ಳುತ್ತಾರೆ ಅಧಿಕಾರಿಗಳು. ಪೀರ್ ಸಮಿತಿ ಸ್ಪಷ್ಟವಾಗಿ ನಮೂದಿಸಿದಂತೆ ಕೊರಗ ಸಮುದಾಯದವರಿಗೆ ಭೂಮಿ ಕೊಡುವುದಷ್ಟೇ ಅಲ್ಲ, ಅವರು ಕೃಷಿ ಹಂತಕ್ಕೆ ತೊಡಗಿಸಿಕೊಳ್ಳುವಂತೆ ಮಾಡಬೇಕು. ಪರಿಶಿಷ್ಟ ಪಂಗಡ ಸಂಖ್ಯೆಯ ಶೇ.1ರಷ್ಟಿರುವ ಕೊರಗ ಸಮುದಾಯ ಪ್ರಗತಿಗೆ ಹಲವು ಅಡೆ, ತಡೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟರವರೆಗೆ ಅವರಿಗೆ ಉಡುಪಿಯಲ್ಲಿ 2.5 ಎಕರೆ ಬದಲಿಗೆ 1 ಎಕರೆ ಭೂಮಿ ದೊರಕಿದೆ. ಒಟ್ಟಾರೆಯಾಗಿ ಕೊರಗ ಸಮುದಾಯದ ಶೇ.7-8ರಷ್ಟು ಕುಟುಂಬಗಳಿಗೆ ಒಂದೆಕರೆ ಭೂಮಿ ದೊರಕಿದೆ ಎಂದು ಅಶೋಕ್ ಹೇಳಿದ್ದಾರೆ.

ಕೃಷಿಯತ್ತ ಸೆಳೆಯುವ ಪ್ರಯತ್ನ

ಪೀರ್ ಸಮಿತಿ ವರದಿ ಅನುಷ್ಠಾನಕ್ಕೆ ಸರಕಾರ ಮನಸ್ಸು ಮಾಡದೇ ಇರಬಹುದು. ಆದರೆ ಸ್ವಯಂಸೇವಾ ಸಂಸ್ಥೆಗಳ ಒತ್ತಾಸೆಯಲ್ಲಿ ಹಾಲಾಡಿಯಲ್ಲಿ ಇದು ಯಶಸ್ವಿಯಾಗಿದೆ. ಎಲ್ಲರೂ ಶೈಕ್ಷಣಿಕವಾಗಿ ಪ್ರಗತಿಹೊಂದಲು ಯಾವುದೇ ಸಮುದಾಯದಲ್ಲೂ ಸಾಧ್ಯವಿಲ್ಲ. ಆದರೆ ಇತರೆ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಬಹುದು. ಆದರೆ ಕೊರಗ ಸಮುದಾಯದವರ ವಿಚಾರದಲ್ಲಿ ಹಾಗಲ್ಲ. ಸ್ವಭಾತಃ ಮುಗ್ಧತೆಯನ್ನು ಹೊಂದಿರುವ ಅವರು ಕೃಷಿ ಚಟುವಟಿಕೆಯಲ್ಲಿ ತಮ್ಮ ಚಾಕಚಕ್ಯತೆಯನ್ನು ರೂಢಿಸಿಕೊಳ್ಳಲು ಸರಿಯಾದ ಮಾರ್ಗದರ್ಶನ ಬೇಕಾಗುತ್ತದೆ. ಸಾಂಪ್ರದಾಯಿಕವಾಗಿ ಅವರು ಕೃಷಿಕರೂ ಅಲ್ಲದ ಕಾರಣ, ಹಾಲಾಡಿ ಗ್ರಾಮದಲ್ಲಿ ತಮಗೆ ದೊರೆತ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಸಮಗ್ರ ಗ್ರಾಮೀಣ ಆಶ್ರಮ, ಹಾಲಾಡಿ ಗ್ರಾಮ ಪಂಚಾಯಿತಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ಸೇರಿಕೊಂಡು ಕೊರಗ ಸಮುದಾಯದವರಿಗೆ ಅವರ ಕೃಷಿ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಂತು ಬತ್ತಗುಳಿ ಎಂಬಲ್ಲಿ ಕೃಷಿ ಚಟುವಟಿಕೆ ನಡೆಸಲು ತರಬೇತಿಯೊಂದಿಗೆ ಪ್ರೋತ್ಸಾಹ ನೀಡಲಾಯಿತು.

ಇಲ್ಲಿರುವ ಕುಟುಂಬಗಳಲ್ಲಿ ಮಿಶ್ರ ಬೇಸಾಯವನ್ನು ಅಭ್ಯಸಿಸಿ ಅನುಷ್ಠಾನ ಮಾಡತೊಡಗಿದ್ದಾರೆ. ಬಾಳೆ, ರಂಬುಟಾನ್ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೆಲವರು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು ಐದು ವರ್ಷಗಳ ಸುದೀರ್ಘ ಪ್ರಯತ್ನ ಇದರ ಹಿಂದೆ ಇದೆ. ಸುಮಾರು 26 ಎಕರೆಯಷ್ಟು ವಿಶಾಲವಾದ ಅರಣ್ಯ ಪ್ರದೇಶವೀಗ ಕೊರಗ ಸಮುದಾಯದವರ ಪ್ರಯತ್ನದಿಂದ ಅಭಿವೃದ್ಧಿ ಹೊಂದುತ್ತಿರುವ ಜಮೀನುಗಳಾಗಿ ಪರಿವರ್ತನೆ ಹೊಂದಿವೆ. ತಮ್ಮ ಜಮೀನಿಗೆ ಬೇಕಾಗುವ ನೀರನ್ನು ಹತ್ತಿರದ ದಾಸನಕಟ್ಟೆ ಹಳ್ಳ ಮತ್ತು ಬೋರ್ ವೆಲ್ ಗಳಿಂದ ಪಡೆದುಕೊಳ್ಳಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ನಮಗೆ ಬೇಕಾಗುವ ಕೃಷಿಯನ್ನು ಮಾಡಿಕೊಳ್ಳುತ್ತಾ, ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ ಎಂದು ಸಮುದಾಯದವರು ಸಂತಸಪಡುತ್ತಿದ್ದಾರೆ.

ಕೇರಳ ಮಾದರಿ ಮಾಡಲಿ

ಕೇರಳದಲ್ಲಿ ಸುಮಾರು 2,500 ಎಕರೆ ಪ್ರದೇಶಗಳಲ್ಲಿ ಕೊರಗ ಸಮುದಾಯದವರು ತರಬೇತಿ ಪಡೆದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಯಾಗಿದ್ದಾರೆ. ಭೂಮಿ ಮಂಜೂರು ಮಾಡಿದ ಬಳಿಕ ಯಶಸ್ವಿಯಾಗಿ ಅಲ್ಲಿ ಅವರು ಉಳಿಯುವಂತೆ ಮಾಡಬೇಕು. ಇಲ್ಲದಿದ್ದರೆ ಭೂಮಿ ಒಂದು ಕಡೆ, ಕೊರಗ ಸಮುದಾಯದವರು ಅದನ್ನು ಏನು ಮಾಡುವುದೆಂದು ತೋಚದೆ ತಾವು ಮೊದಲು ಹೇಗಿದ್ದರೋ ಹಾಗೆಯೇ ಇರುತ್ತಾರೆ. ಅವರನ್ನು ಮನವೊಲಿಸಿ, ಭೂಮಿಯನ್ನು ಸದುಪಯೋಗಪಡಿಸಿಕೊಳ್ಳುವ ಕಾರ್ಯಚಟುವಟಿಕೆಗಳು ಆಗಬೇಕು. ಈ ಪ್ರಕ್ರಿಯೆಗಳು ಸರಕಾರಿ ಅಧಿಕಾರಿಗಳಿಗೆ ಅರ್ಥವಾಗುವುದು ಮುಖ್ಯ. ಕೇರಳದಲ್ಲಿ ಆದಂತೆ ಕರ್ನಾಟಕದಲ್ಲೂ ಆಗಬೇಕಾಗಿದೆ.

200ರಷ್ಟು ಸ್ನಾತಕೋತ್ತರ ಪದವೀಧರರೇ ಇದ್ದಾರೆ

ಅಶೋಕ್ ಕುಮಾರ್ ಅವರ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸುಮಾರು 14 ಸಾವಿರದಷ್ಟು ಕೊರಗ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬುಟ್ಟಿ ಹೆಣೆಯುವಂಥ ಕಾರ್ಯವನ್ನೇ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ. ಇವರ ಪೈಕಿ ಸ್ವಪ್ರಯತ್ನದೊಂದಿಗೆ ಸಾಮಾಜಿಕ ಪ್ರೋತ್ಸಾಹವೂ ಸೇರಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿರುವ ಸುಮಾರು 200 ಮಂದಿ ಪದವಿ ಮುಗಿಸಿ, ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಸುಮಾರು 5 ಮಂದಿ ಡಾಕ್ಟರೇಟ್ ಗಳಿಸಿದ್ದಾರೆ. ಆದಾಗ್ಯೂ ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲ ಸ್ನಾತಕೋತ್ತರ ಪದವೀಧರರಿಗೆ ಸಮರ್ಪಕ ಉದ್ಯೋಗಗಳು ಲಭಿಸಿಲ್ಲ. ಒಂದು ಪ್ರಬಲ ರಾಜಕೀಯ ಪ್ರಾತಿನಿಧ್ಯ, ಸಮುದಾಯದ ಉನ್ನತಿಗೆ ಆಸ್ಥೆಯಿಟ್ಟು ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಮುದಾಯದ ಜನರ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದು ಹಾಗೂ ಅವರಲ್ಲಿ ಭವಿಷ್ಯದ ಕುರಿತು ಉತ್ತೇಜನ ನೀಡುವ ಸಮಾಜದ ಎಲ್ಲ ವರ್ಗಗಳ ಸ್ಪಂದನೆ ಇಂದಿನ ತುರ್ತು ಅಗತ್ಯ.

ಇಳಿಮುಖವಾಗುತ್ತಿರುವ ಕೊರಗರ ಜನಸಂಖ್ಯೆ

1981ರ ಜನಗಣತಿಯನ್ನು ಗಮನಿಸಿದರೆ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿಯನ್ನು ಒಳಗೊಂಡ ಕರಾವಳಿ ಭಾಗದಲ್ಲಿ ಕೊರಗ ಸಮುದಾಯದವರು ಸುಮಾರು 22 ಸಾವಿರ ಮಂದಿ ವಾಸಿಸುತ್ತಿದ್ದರು. 2001ರಲ್ಲಿ 18,000ದಷ್ಟಿದ್ದರೆ ಬಳಿಕ ಸಂಖ್ಯೆ ಇಳಿಮುಖವಾಯಿತು. ಇದೀಗ ಕಾಸರಗೋಡು ಜಿಲ್ಲೆಯಲ್ಲಿ 1,500, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4,500 ಹಾಗೂ ಉಡುಪಿ ಜಿಲ್ಲೆಯಲ್ಲಿ 9 ಸಾವಿರದಷ್ಟು ಕೊರಗ ಸಮುದಾಯದವರು ಸೇರಿ ಒಟ್ಟು 14 ಸಾವಿರದಷ್ಟು ಮಂದಿ ವಾಸಿಸುತ್ತಿದ್ದಾರೆ ಎನ್ನುತ್ತಾರೆ ಅಶೋಕ್ ಕುಮಾರ್.

ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕೊರಗ ಸಮುದಾಯದಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿಯಾಗತೊಡಗಿದ್ದು, ಒಂದು ಕಾರಣವಾದರೆ, ಜೀವವಾಹಿನಿಯು ದುರ್ಬಲಗೊಂಡಿರುವುದು ಇನ್ನೊಂದು ಕಾರಣ ಎಂದು ಕೇರಳದ ಡಾ. ವಿಶ್ವನಾಥನ್ ನಾಯಕ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಶೋಕ್ ಕುಮಾರ್ ಮಾಹಿತಿ ನೀಡಿದರು.

Tags:    

Similar News