MLA's Salary Double | ಕನಿಷ್ಟ ದಿನಗೂಲಿ ಇರುವ ರಾಜ್ಯದಲ್ಲಿ ಸದ್ದಿಲ್ಲದೆ ದುಪ್ಪಟ್ಟಾಯ್ತು ಶಾಸಕರ ವೇತನ!

ಶಾಸಕರು ಮಾಸಿಕ ಕೇವಲ 70 ಸಾವಿರ ವೇತನ ಪಡೆಯುವ ಕೇರಳದಲ್ಲಿ ಕೂಲಿ ಕಾರ್ಮಿಕರ ಕನಿಷ್ಟ ದಿನಗೂಲಿ 670 ರೂಗಳಿದ್ದರೆ, ಶಾಸಕರು ಬರೋಬ್ಬರಿ 2.90 ಲಕ್ಷ ವೇತನ ಪಡೆಯುವ ಕರ್ನಾಟಕದಲ್ಲಿ ಕನಿಷ್ಟ ದಿನಗೂಲಿ ಕೇವಲ 264 ರೂಪಾಯಿ ಇದೆ!;

Update: 2025-03-23 11:26 GMT

ಈ ಬಾರಿಯ ಬಜೆಟ್ನಲ್ಲಿ ರಾಜ್ಯದ ವಾರ್ಷಿಕ ಕರ್ಚುವೆಚ್ಚ ನಿಭಾಯಿಸಲು ಬರೋಬ್ಬರಿ 1.16 ಲಕ್ಷ ಕೋಟಿ ಸಾಲ ಎತ್ತುವುದಾಗಿ ಹೇಳಲಾಗಿದ್ದು, ಆ ಮೂಲಕ ರಾಜ್ಯದ ಒಟ್ಟು ಸಾಲ ಈ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ 7.60 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಸರ್ಕಾರವೇ ಅಧಿಕೃತವಾಗಿ ಅಂದಾಜಿಸಿದೆ. ಈ ನಡುವೆ ಆರ್ಥಿಕ ಸಂಪನ್ಮೂಲ ಕೊರತೆಯಿಂದಾಗಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯದಂತಹ ಆದ್ಯತಾ ವಲಯದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂತಹ ಪರಿಸ್ಥಿತಿಯ ನಡುವೆ ರಾಜ್ಯ ಸರ್ಕಾರ ಶಾಸಕರು, ಸಚಿವರ ವೇತನವನ್ನು ದುಪ್ಪಟ್ಟು ಏರಿಸಲು ವಿಧಾನಮಂಡಲದಲ್ಲಿ ಚರ್ಚೆಯನ್ನೇ ಮಾಡದೆ ಅನುಮೋದನೆ ಪಡೆದುಕೊಂಡಿದೆ.

ಶಾಲಾ ಮಕ್ಕಳಿಗೆ ಸಕಾಲದಲ್ಲಿ ಉಚಿತ ಪುಸ್ತಕ, ಶೂ, ಸಮವಸ್ತ್ರ, ಸೈಕಲ್ ವಿತರಿಸಲಾಗದೆ ಒಂದೊಂದೇ ಸೌಲಭ್ಯವನ್ನು ಕೈಬಿಡುತ್ತಿರುವ ಸರ್ಕಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ ಖಾಯಂ ಒಬ್ಬರಾದರೂ ಖಾಯಂ ವೈದ್ಯರು, ಕನಿಷ್ಟ ರಕ್ತ ಮತ್ತು ಮೂತ್ರ ಪರೀಕ್ಷೆ, ಹೆರಿಗೆ ವ್ಯವಸ್ಥೆಯನ್ನೂ ಮಾಡಲಾಗದೆ ಕೈಚೆಲ್ಲಿರುವ ಸರ್ಕಾರ, ಇವತ್ತಿಗೂ ಹಲವು ಹಳ್ಳಿಗಳಿಗೆ ಕನಿಷ್ಟ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆಯಂತಹ ಮೂಲ ಸೌಕರ್ಯ ಕಲ್ಪಿಸಲಾಗದೆ ಸೋತು ಹೋಗಿರುವ ಸರ್ಕಾರ, ತನ್ನ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ವೇತನವನ್ನು ಏಕಾಏಕಿ ದುಪ್ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆದ್ಯತೆ ಏನು ಎಂಬುದನ್ನು ಜಗಜ್ಜಾಹೀರು ಮಾಡಿದೆ.

ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಸಾರ್ವಜನಿಕ ವಲಯದಲ್ಲಿರಲಿ, ಕನಿಷ್ಟ ಸದನ ಒಳಗೂ ಚರ್ಚೆಯನ್ನೇ ಮಾಡದೆ ವೇತನ ದುಪ್ಪಟ್ಟು ಮಾಡಲು ಎರಡು ವಿಧೇಯಕಗಳಿಗೆ; ‘ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ ಮತ್ತು ‘ಕರ್ನಾಟಕ ವಿಧಾನಮಂಡಲದ ಸಂಬಳ, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ಕ್ಕೆ ಅನುಮೋದನೆ ನೀಡಲಾಗಿದೆ. ಆ ಮೂಲಕ ಕೇವಲ ಎರಡೂವರೆ ವರ್ಷದ ಅವಧಿಯಲ್ಲೇ ಶಾಸಕರು, ಸಚಿವರ ವೇತನವನ್ನು ದುಪ್ಪಟ್ಟು ಏರಿಕೆ ಮಾಡಲಾಗುತ್ತಿದೆ.

ಬಿಸಿಯೂಟ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ದಿನಗೂಲಿ ನೌಕರರು ಕನಿಷ್ಟ ವೇತನಕ್ಕಾಗಿ ನಿತ್ಯವೂ ಒಂದಿಲ್ಲೊಂದು ಪ್ರತಿಭಟನೆ, ಮುಷ್ಕರ ನಡೆಸುತ್ತಿರುವಾಗ ಅವರ ಬೇಡಿಕೆಗೆ ಹತ್ತಾರು ನೆಪ ಹೇಳುವ ಸರ್ಕಾರ, ಬರೋಬ್ಬರಿ ವಾರ್ಷಿಕ 62 ಕೋಟಿ ಹೊರೆಯಾಗುವ ಶಾಸಕರು-ಸಚಿವರ ವೇತನ ಹೆಚ್ಚಳಕ್ಕೆ ಮುಗ್ಗುಮ್ಮಾಗಿ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಹಾಗಾದರೆ, ಜನಸಾಮಾನ್ಯರನ್ನು ವಂಚಿಸಿ, ಅವರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿರುವ ಈ ಕ್ರಮದಿಂದಾಗಿ ನಮ್ಮ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನದಲ್ಲಿ ಏನೆಲ್ಲಾ ಏರಿಕೆಯಾಗಲಿದೆ? ಈ ಏರಿಕೆಗೆ ಮುನ್ನ ಹಾಲಿ ಇರುವ ಅವರ ವೇತನ, ಭತ್ಯೆ ಮತ್ತಿತರ ಸೌಲಭ್ಯಗಳೇನು? ನೆರೆಹೊರೆಯ ರಾಜ್ಯಗಳಲ್ಲಿ ಅವರುಗಳ ವೇತನ ಎಷ್ಟಿದೆ? ಎಂಬ ವಿವರಗಳನ್ನು ಗಮನಿಸೋಣ..

ಮುಖ್ಯಮಂತ್ರಿ, ಸಚಿವರ ವೇತನ ಹೆಚ್ಚಳ ಎಷ್ಟು?

ಈ ವೇತನ ಹೆಚ್ಚಳದಿಂದಾಗಿ ಮುಖ್ಯಮಂತ್ರಿಗಳ ವೇತನ ಹಾಲಿ ಇರುವ 75 ಸಾವಿರ ರೂ.ನಿಂದ 1.5 ಲಕ್ಷ ರೂ.ಗೆ ಏರಿಕೆಯಾಗಿದೆ. ಹಾಗೇ ರಾಜ್ಯದ ಎಲ್ಲಾ ಸಚಿವರ ವೇತನ ಈಗಿನ 60 ಸಾವಿರದಿಂದ 1.25 ಲಕ್ಷ ರೂ.ಗೆ ಏರಿಕೆಯಾಗಿದೆ. ಇದು ಕೇವಲ ವೇತನದ ಏರಿಕೆ. ಇನ್ನು ಅವರ ವೇತನದ ಮೂರು ಪಟ್ಟು ಇರುವ ವಿವಿಧ ಭತ್ಯೆಗಳು ಕೂಡ ಎರಡಷ್ಟು ಹೆಚ್ಚಾಗಿದ್ದು, ಆತಿಥ್ಯ ಭತ್ಯೆ ಈಗಿನ 4.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂ.ಗೆ ಏರಿದ್ದು, ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ.ನಿಂದ 2.5 ಲಕ್ಷ ರೂ.ಗೆ ಏರಿದೆ. ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಅವರ ಆ ಸ್ಥಾನಮಾನಕ್ಕೆ ತಕ್ಕ ವೇತನಗಳ ಜೊತೆಗೆ ಶಾಸಕರಾಗಿ ಅವರಿಗೆ ಸಿಗಬೇಕಾದ ವೇತನ ಮತ್ತು ಭತ್ಯೆಗಳು ಕೂಡ ಸಿಗಲಿವೆ. ಅಂದರೆ; ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಸಿಗುವ ಈ ವೇತನ ಭತ್ಯೆಗಳ ಒಟ್ಟು ಮೊತ್ತಕ್ಕೆ ಶಾಸಕರಿಗೆ ಸಿಗುವ ವೇತನ ಮತ್ತು ಭತ್ಯೆಗಳ ಒಟ್ಟು ಮೊತ್ತವನ್ನು ಸೇರಿಸಿ ಅವರ ಒಟ್ಟು ಮಾಸಿಕ ವೇತನ ಮತ್ತು ಭತ್ಯೆ ಪರಿಗಣಿಸಬೇಕು!

ಇನ್ನು ಮುಖ್ಯಮಂತ್ರಿಗಳಿಗೆ ವೇತನ ಹಾಗೂ ಎಲ್ಲ ಭತ್ಯೆ ಸೇರಿ ಮಾಸಿಕ ಸುಮಾರು 12 ಲಕ್ಷ ರೂ. ಸಿಗಲಿದ್ದು, ಅದರ ಜೊತೆ ಶಾಸಕರ ವೇತನ ಕೂಡ ಸೇರಿ ಮಾಸಿಕ ಸುಮಾರು 13 ಲಕ್ಷ ರೂ. ವೇತನ ಸಿಗುತ್ತದೆ.

ವಿಪಕ್ಷ ನಾಯಕ ಮತ್ತು ಸ್ಪೀಕರ್‌ ವೇತನ ಎಷ್ಟು?

ವಿಧಾನಮಂಡಲದ ಉಭಯ ಸದನಗಳ ಸ್ಪೀಕರ್‌ ವೇತನ ಹಾಲಿ 75 ಸಾವಿರ ರೂ.ನಿಂದ 1.25 ಲಕ್ಷ ರೂ.ಗೆ ಏರಿಕೆಯಾಗಿದೆ. ಅವರ ಆತಿಥ್ಯ ಭತ್ಯೆ ಕೂಡ ಹಾಲಿ 4 ಲಕ್ಷ ರೂನಿಂದ 5 ಲಕ್ಷ ರೂ.ಗೆ ಏರಿಕೆಯಾಗಿದೆ. ಉಪಸಭಾಧ್ಯಕ್ಷ, ಉಪಸಭಾಪತಿ, ಪ್ರತಿಪಕ್ಷ ನಾಯಕ, ಮುಖ್ಯಸಚೇತಕರ ವೇತನ ಹಾಲಿ 60 ಸಾವಿರದಿಂದ 80,000 ರೂ.ಗೆ ಏರಿಕೆಯಾಗಿದ್ದು, ಅವರ ಆತಿಥ್ಯ ಭತ್ಯೆ 2.5 ಲಕ್ಷ ರೂನಿಂದ 3 ಲಕ್ಷ ರೂಪಾಯಿಗೆ ಏರಿಕೆ ಕಂಡಿದೆ. ಹಾಗೆಯೇ ಮನೆ ಬಾಡಿಗೆ ಭತ್ಯೆ 1.6 ಲಕ್ಷ ರೂ.ನಿಂದ 2.5 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಇವರುಗಳಿಗೆ ಕೂಡ ಇವರ ಈ ಸ್ಥಾನಮಾನಕ್ಕೆ ತಕ್ಕ ವೇತನ-ಭತ್ಯೆಗಳ ಜೊತೆಗೆ ಶಾಸಕರಾಗಿ ಅವರಿಗೆ ಸಿಗಬೇಕಾದ ವೇತನ-ಭತ್ಯೆಗಳೂ ಸಿಗಲಿವೆ. ಹಾಗಾಗಿ ಇವರೆಲ್ಲರ ಈ ವೇತನ ಭತ್ಯೆಗೆ, ಶಾಸಕರ ವೇತನ ಭತ್ಯೆಯನ್ನೂ ಸೇರಿಸಿ ಒಟ್ಟು ಮಾಸಿಕ ವೇತನ-ಭತ್ಯೆ ಪಾವತಿಸಲಾಗುತ್ತದೆ.

ಶಾಸಕರ ವೇತನ-ಭತ್ಯೆ ಹೆಚ್ಚಳ ಎಷ್ಟು?

ರಾಜ್ಯದ ಎಲ್ಲಾ ಶಾಸಕರ ವೇತನ ಮತ್ತು ಭತ್ಯೆ ಕೂಡ ದುಪ್ಪಟ್ಟಾಗಿದ್ದು, ಅವರ ವೇತನ ಹಾಲಿ ಇರುವ 40 ಸಾವಿರದಿಂದ 80 ಸಾವಿರ ರೂ.ಗೆ ಏರಿದೆ. ಇನ್ನು ಅವರ ಕ್ಷೇತ್ರ ಪ್ರಯಾಣ ಭತ್ಯೆಯನ್ನು ಹಾಲಿ 60 ಸಾವಿರ ರೂನಿಂದ 80 ಸಾವಿರ ರೂ.ಗೆ ಏರಿಸಲಾಗಿದೆ. ಅಲ್ಲದೆ, ದೂರವಾಣಿ ವೆಚ್ಚ 20 ಸಾವಿರ ರೂ., ವೈಯಕ್ತಿಕ ಭತ್ಯೆ, ರೂಮ್‌ ಬಾಯ್‌ಗಾಗಿ 20 ಸಾವಿರ ರೂ. ಸಿಗುತ್ತಿದೆ. ಕ್ಷೇತ್ರ ಭತ್ಯೆ ಎಂದು 60 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ನೀಡಲಾಗುತ್ತಿದೆ. ಜೊತೆಗೆ ರೈಲು, ವಿಮಾನ ಟಿಕೆಟ್‌ಗಾಗಿ ವಾರ್ಷಿಕ 3.5 ಲಕ್ಷ ರೂ. ನೀಡಲಾಗುತ್ತಿದೆ. ಅಂದರೆ ತಿಂಗಳಿಗೆ ಶಾಸಕರು ಬರೋಬ್ಬರಿ 2.90 ಲಕ್ಷ ರೂಪಾಯಿ ವೇತನ ಮತ್ತು ಭತ್ಯೆ ಪಡೆಯುತ್ತಾರೆ.

ಇತರ ರಾಜ್ಯಗಳಲ್ಲಿ ಎಷ್ಟಿದೆ ಶಾಸಕರ ವೇತನ?

ಶಾಸಕರ ವೇತನದ ವಿಷಯದಲ್ಲಿ ದೇಶದಲ್ಲೇ ಅತಿ ಹೆಚ್ಚು ದುಬಾರಿ ವೇತನ ನೀಡುವುದು ಜಾರ್ಖಂಡ್‌ನಲ್ಲಿ. ಅಲ್ಲಿ ಪ್ರತಿ ಶಾಸಕ ತಿಂಗಳಿಗೆ 2.9 ಲಕ್ಷ ರೂ. ವೇತನ ಪಡೆಯುತ್ತಾರೆ. ಜಾರ್ಖಂಡ್ ಹೊರತುಪಡಿಸಿದರೆ ಇದೀಗ 2.90 ಲಕ್ಷದೊಂದಿಗೆ ಕರ್ನಾಟಕವೇ ದೇಶದಲ್ಲಿ ಶಾಸಕರಿಗೆ ಅತಿ ದುಬಾರಿ ವೇತನ ನೀಡುವ ರಾಜ್ಯ. ಬಜೆಟ್ ಗಾತ್ರದಲ್ಲಿ ರಾಜ್ಯಕ್ಕಿಂತ ಹೆಚ್ಚು ದೊಡ್ಡ ಮೊತ್ತದ ಮುಂಗಡ ಪತ್ರ ಮಂಡಿಸುವ ಮಹಾರಾಷ್ಟ್ರದಲ್ಲಿ ಕೂಡ ಶಾಸಕರ ವೇತನ ರಾಜ್ಯಕ್ಕಿಂತ ಕಡಿಮೆ ಇದೆ. ಮಹಾರಾಷ್ಟ್ರದ ಶಾಸಕರು 2.6 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ತೆಲಂಗಾಣ ಹಾಗೂ ಮಣಿಪುರದ ಶಾಸಕರು ತಲಾ 2.5 ಲಕ್ಷ ರೂ. ವೇತನ ಪಡೆದರೆ, ಹಿಮಾಚಲ ಪ್ರದೇಶ ಶಾಸಕರು 2.1 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಉತ್ತರಾಖಂಡದಲ್ಲಿ 2.04 ಲಕ್ಷ ರೂ. ಇದ್ದರೆ, ಮೇಘಾಲಯದಲ್ಲಿ 2.02 ಲಕ್ಷ ರೂ. ವೇತನ ಇದೆ. ಕೇರಳದ ಶಾಸಕರು ದೇಶದಲ್ಲೇ ಅತಿ ಕಡಿಮೆ ಸಂಬಳ ಪಡೆಯುತ್ತಿದ್ದು, ಭತ್ಯೆ ಸೇರಿ ಮಾಸಿಕ ಕೇವಲ 70 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ.

ವಿಪರ್ಯಾಸವೆಂದರೆ ಶಾಸಕರು ಮಾಸಿಕ ಕೇವಲ 70 ಸಾವಿರ ವೇತನ ಪಡೆಯುವ ಕೇರಳದಲ್ಲಿ ಕೂಲಿ ಕಾರ್ಮಿಕರ ಕನಿಷ್ಟ ದಿನಗೂಲಿ 670 ರೂಗಳಿದ್ದರೆ, ಶಾಸಕರು ಬರೋಬ್ಬರಿ 2.90 ಲಕ್ಷ ವೇತನ ಪಡೆಯುವ ಕರ್ನಾಟಕದಲ್ಲಿ ಕನಿಷ್ಟ ದಿನಗೂಲಿ ಕೇವಲ 264 ರೂಪಾಯಿ ಇದೆ! ಅಂದರೆ, ದೇಶದಲ್ಲೇ ಅತಿ ಕನಿಷ್ಟ ವೇತನ ಪಡೆಯುವ ಶಾಸಕರು ಇರುವ ರಾಜ್ಯದಲ್ಲಿ ದುಡಿಯುವ ವರ್ಗದ ಜನರಿಗೆ ದೇಶದಲ್ಲೇ ಅತಿ ಹೆಚ್ಚು ದಿನಗೂಲಿ ಸಿಗುತ್ತಿದ್ದರೆ, ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಶಾಸಕರು ಇರುವ ಕರ್ನಾಟಕದಲ್ಲಿ ಅತಿ ಕಡಿಮೆ ದಿನಗೂಲಿ ನೀಡಲಾಗುತ್ತಿದೆ!

Tags:    

Similar News