Munirathna Rape Case | ವಿಕಾಸಸೌಧದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ
ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಗುರುವಾರ ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.
ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ದ ಅಧಿಕಾರಿಗಳು ಗುರುವಾರ ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.
ಬೆಳಿಗ್ಗೆೆ 11 ಗಂಟೆ ಸುಮಾರಿಗೆ ವಿಕಾಸಸೌಧಕ್ಕೆ ಸಂತ್ರಸ್ತೆಯೊಂದಿಗೆ ಆಗಮಿಸಿದ ಎಸ್‌ಐಟಿ ತಂಡ, ಈ ಹಿಂದೆ ತೋಟಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಮುನಿರತ್ನಗೆ ನೀಡಿದ್ದ ಮೂರನೇ ಮಹಡಿಯ 334ನೇ ಕೋಣೆಗೆ ಕರೆದೊಯ್ದು ಮಹಜರು ನಡೆಸಿದರು. ಯಾವ ಸ್ಥಳದಲ್ಲಿ ಮುನಿರತ್ನ ಲೈಂಗಿಕ ದೌರ್ಜನ್ಯ ಎಸಗಿದರು ಎಂಬುದೂ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಿ, ಸಂತ್ರಸ್ತೆಯಿಂದ ಲಿಖಿತ ಮತ್ತು ಮೌಖಿಕ ಹೇಳಿಕೆ ಪಡೆದುಕೊಂಡರು. ಇಡೀ ಮಹಜರು ಪ್ರಕ್ರಿಯೆಯನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.
ಈ ಹಿಂದೆ ಸಂತ್ರಸ್ತೆ ಕಗ್ಗಲೀಪುರ ಠಾಣೆಯಲ್ಲಿ ದೂರು ನೀಡುವಾಗ, 'ಶಾಸಕ ಮುನಿರತ್ನ ಸಚಿವರಾಗಿದ್ದಾಗ ವಿಕಾಸಸೌಧದಲ್ಲಿ ನೀಡಲಾಗಿದ್ದ ಅವರ ಕೊಠಡಿಯಲ್ಲೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲಿಂದಲೇ ವಿಡಿಯೊ ಕರೆ ಮಾಡಿ ನಗ್ನ ಆಗುವಂತೆ ಪೀಡಿಸುತ್ತಿದ್ದರು' ಎಂದು ಆರೋಪಿಸಿದ್ದರು. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುನಿರತ್ನ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
'ಪ್ರಕರಣದ ಸಂಬಂಧ ಸಂತ್ರಸ್ತೆ, ಆರೋಪಿಯ ಮೊಬೈಲ್ ಜಪ್ತಿ ಮಾಡಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನೆ ಮಾಡಲಾಗಿತ್ತು. ಎಫ್‌ಎಸ್ಎಲ್ ಹಾಗೂ ವೈದ್ಯಕೀಯ ವರದಿಗಳು ಬಂದಿವೆ. ಮುನಿರತ್ನ ಹಾಗೂ ಸಹಚರರು ಹನಿಟ್ರ್ಯಾಪ್ ಮಾಡುತ್ತಿದ್ದರು ಎಂಬುದಾಗಿ ಆರೋಪಿಸಿ ಮಹಿಳೆ ದೂರು ನೀಡಿದ್ದರು. ಹನಿಟ್ರ್ಯಾಪ್ ಆರೋಪದ ಸಂಬಂಧವೂ ತನಿಖೆ ನಡೆಸಲಾಗಿದೆ. ರಹಸ್ಯ ಕ್ಯಾಮೆರಾ ಇಡುತ್ತಿದ್ದ ಸ್ಥಳದ ಮಾಹಿತಿ ಪಡೆಯಲಾಗಿದೆ. ತನಿಖೆ ಭಾಗಶಃ ಪೂರ್ಣಗೊಂಡಿದ್ದು, 60ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ, 40ಕ್ಕೂ ಹೆಚ್ಚು ಸಾಕ್ಷಾಧಾರ ಸಹಿತ 900ಕ್ಕೂ ಹೆಚ್ಚು ಪುಟಗಳ ದೋಷಾರೋಪಪಟ್ಟಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ದತೆ ನಡೆದಿದೆ' ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.