ಮುನಿರತ್ನ ಒಬ್ಬ ಜೋಕರ್; ಶಾಸಕ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ
ರಾಜ್ಯದಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ, ಕ್ರಾಂತಿ ಎಂಬುದು ಕೇವಲ ಊಹಾಪೋಹವಾಗಿದೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ 'ಫಿಲಂ ಆ್ಯಕ್ಟರ್ ಇದ್ದಂತೆ, ಜೋಕರ್ ಕೆಲಸ ಮಾಡ್ತಾರೆ' ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಟೀಕಿಸಿದ್ದಾರೆ. ಈಚೆಗೆ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮುನಿರತ್ನ ಅಗೌರವದಿಂದ ನಡೆದುಕೊಂಡಿದ್ದಾರೆ. ಅಸಂಬದ್ಧ ಪದ ಬಳಸಿದ್ದು, 'ಆ ಹೆಣ್ಣು ಮಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುನಿರತ್ನ ಅವರು ತಮ್ಮ ಹಕ್ಕನ್ನು ಸೂಕ್ತ ವೇದಿಕೆಯಲ್ಲಿ ಕೇಳಬೇಕು. ಆರ್. ಅಶೋಕ್ ಅವರಿಗೆ ಏಡ್ಸ್ ಇಂಜೆಕ್ಟ್ ಮಾಡಲು ಹೋಗಿದ್ದರು ಎಂಬ ಗಂಭೀರ ಆರೋಪ ಹೊತ್ತಿದ್ದಾರೆ. ಇಂತಹ ನೀಚ ಕೃತ್ಯ ನಡೆಸಿದ ವ್ಯಕ್ತಿಯ ವಿರುದ್ಧ ಮಾತನಾಡಿದರೆ ನಮ್ಮ ಗೌರವ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಸಿ- ಸಿಸಿ ಇಲ್ಲದ ಮನೆಗಳಿಗೆ ಸಂಪರ್ಕ
ಒಸಿ-ಸಿಸಿ ಪಡೆಯದ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಸರ್ಕಾರದ ಆದೇಶದ ವಿಚಾರವಾಗಿ ಮಾತನಾಡಿದ ಶಾಸಕರು, ಈ ನಿರ್ಧಾರದಿಂದ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿತ್ತು. ಆದರೆ, ಸರ್ಕಾರದ ಈ ನಿರ್ಧಾರದಿಂದ ಬಹಳ ಜನರಿಗೆ ಅನುಕೂಲವಾಗಲಿದೆ. 60x40 ಅಡಿ ವಿಸ್ತೀರ್ಣದ ನಿರ್ಮಾಣಗಳಿಗೂ ಮುಂದೆ ಅವಕಾಶ ಮಾಡಿಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ನಿರೀಕ್ಷೆ
ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಚ್.ಸಿ. ಬಾಲಕೃಷ್ಣ, ʼಸಚಿವ ಸ್ಥಾನದ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ನನ್ನ ಹಿರಿತನ ಪರಿಗಣಿಸುವ ವಿಶ್ವಾಸ ಇದೆ, ನೋಡೋಣ' ಎಂದರು.
ನವಂಬರ್ ಕ್ರಾಂತಿಯ ಬಗ್ಗೆ ಮಾತನಾಡಿದ ಅವರು, 'ಯಾವ ಕ್ರಾಂತಿಯೂ ನಡೆಯಲ್ಲ, ಕ್ರಾಂತಿ ಆಗುತ್ತೆ ಅಂತ ಹೇಳಿದವರು ಯಾರು?, ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್ ಅವರ ಶ್ರಮವೂ ಇದೆ. ಸಿಎಂ ಆಗಲು ಡಿ.ಕೆ. ಶಿವಕುಮಾರ್‌ಗೂ ಅವಕಾಶ ಮಾಡಿಕೊಡಬೇಕು' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.