ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ಎಚ್‌ಡಿಕೆ: ಶಾಸಕ ಬಾಲಕೃಷ್ಣ ಗಂಭೀರ ಆರೋಪ

ಮುಖ್ಯಮಂತ್ರಿಯಾದವರು ಕಡತಗಳಿಗೆ ವಿಧಾನಸೌಧದ ಕಚೇರಿ ಅಥವಾ ಗೃಹ ಕಚೇರಿಯಲ್ಲಿ ಸಹಿ ಹಾಕಬೇಕೇ ಹೊರತು ಹೋಟೆಲ್‌ನಲ್ಲಿ ಕುಳಿತು ಅಲ್ಲ. ವ್ಯವಹಾರ ಕುದುರಿಸುವ ಸಲುವಾಗಿಯೇ ಕುಮಾರಸ್ವಾಮಿ ಅವರು ಪದೇಪದೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂದು ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ

Update: 2024-10-13 05:48 GMT
ಎಚ್‌.ಸಿ.ಬಾಲಕೃಷ್ಣ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಂತು ʼಶುದ್ಧಹಸ್ತʼ ಎಂದು ಹೇಳಿಕೊಂಡಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಕಡತಗಳಿಗೆ ಸಹಿ ಹಾಕಲು ಲಂಚ ತೆಗೆದುಕೊಳ್ಳುತ್ತಿದ್ದ ವಿಷಯ ನನಗೆ ಗೊತ್ತಿದೆ. ಎಲ್ಲಿ ಬೇಕಾದರೂ ಸಾಕ್ಷಿ ಸಮೇತ ಬಹಿರಂಗಪಡಿಸಲು ಸಿದ್ಧ ಎಂದು ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಸವಾಲು ಹಾಕಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಪದೇಪದೆ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಯಾಕೆ ವಾಸ್ತವ್ಯ ಹೂಡುತ್ತಿದ್ದರು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯಾದವರು ಕಡತಗಳಿಗೆ ವಿಧಾನಸೌಧದ ಕಚೇರಿ ಅಥವಾ ಗೃಹ ಕಚೇರಿಯಲ್ಲಿ ಸಹಿ ಹಾಕಬೇಕೇ ಹೊರತು ಹೋಟೆಲ್‌ನಲ್ಲಿ ಕುಳಿತು ಅಲ್ಲ. ವ್ಯವಹಾರ ಕುದುರಿಸುವ ಸಲುವಾಗಿಯೇ ಕುಮಾರಸ್ವಾಮಿ ಪದೇಪದೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂದು ಆರೋಪಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕಡತಗಳಿಗೆ ಸಹಿ ಹಾಕಲು ಹಣ ನೀಡುವಂತೆ ಬಲವಂತ ಮಾಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೀಡಿದ್ದ ಹೇಳಿಕೆಗೆ ಬಾಲಕೃಷ್ಣ ಈ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಅವರ ಕಾರ್ಯವೈಖರಿ ಹೇಗಿತ್ತು. ಪದೇಪದೆ ಯಾಕೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಕಡತಗಳಿಗೆ ಸಹಿ ಹಾಕಿಕೊಳ್ಳಲು ಯಾರೆಲ್ಲಾ ಬಂದು ಹೋಗುತ್ತಿದ್ದರು ಎಂದು ಸತ್ಯ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

Tags:    

Similar News