ಗುತ್ತಿಗೆದಾರರಿಗೆ ಕೊನೆಗೂ ಬಾಕಿ ಹಣ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಇಲಾಖೆ

ಗುತ್ತಿಗೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ 2000 ಗುತ್ತಿಗೆದಾರರಲ್ಲಿ 639 ಗುತ್ತಿಗೆದಾರರಿಗೆ ಬಾಕಿ ಇದ್ದ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. ಉಳಿದ 1,361 ಗುತ್ತಿಗೆದಾರರಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಭೋಸರಾಜು ತಿಳಿಸಿದ್ದಾರೆ.;

Update: 2025-04-18 10:54 GMT

ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಎರಡು ವರ್ಷಗಳಿಂದ ಉಳಿಸಿಕೊಂಡಿದ್ದ ಗುತ್ತಿಗೆದಾರರ ಬಾಕಿ ಹಣವನ್ನು ಕೊನೆಗೂ ಬಿಡುಗಡೆ ಮಾಡಲಾಗಿದೆ. 

ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಭೋಸರಾಜು ಅವರ ಪುತ್ರನ ಹಸ್ತಕ್ಷೇಪದ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಬಾಕಿ ಹಣ ಬಿಡುಗಡೆ ಮಾಡಿ, ಆರೋಪಗಳಿಗೆ ಸ್ವತಃ ಸಚಿವರೇ ಸ್ಪಷ್ಟೀಕರಣ ನೀಡಿದ್ದಾರೆ. ಆ ಮೂಲಕ ಪುತ್ರನ ಹಸ್ತಕ್ಷೇಪದ ಆರೋಪವನ್ನು ಸಚಿವರು ತಳ್ಳಿಹಾಕಿದ್ದಾರೆ.

ಗುತ್ತಿಗೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ 2000 ಗುತ್ತಿಗೆದಾರರಲ್ಲಿ 639 ಗುತ್ತಿಗೆದಾರರಿಗೆ ಬಾಕಿ ಇದ್ದ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. ಉಳಿದ 1,361 ಗುತ್ತಿಗೆದಾರರಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ ಎಂದು  ಸಣ್ಣ ನೀರಾವರಿ ಇಲಾಖೆ ಸಚಿವ ಎನ್‌.ಎಸ್‌.ಭೋಸರಾಜು ತಿಳಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ್ದ ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.  

2023-24 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ ಹಣಕಾಸಿನ ಲಭ್ಯತೆ ಇಲ್ಲದಿದ್ದರೂ 12,693 ಕೋಟಿ ರೂ.ಮೌಲ್ಯದ 15,549 ಕಾಮಗಾರಿಗಳನ್ನು ಆರಂಭಿಸಿತ್ತು. ಅವನ್ನು ನಮ್ಮ ಸರ್ಕಾರ ಮುಂದುವರೆಸಿದೆ. ಈ ವರ್ಷ ಹೊಸ ಕಾಮಗಾರಿ ಆರಂಭಿಸದೇ ಹಳೆಯ ಕಾಮಗಾರಿಗಳನ್ನೇ ಪೂರ್ಣಗೊಳಿಸಿ, ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.

ಬಿಜೆಪಿ ವಿರುದ್ಧ ಆರೋಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರೆಬರೆಯಾಗಿದ್ದ ಕಾಮಗಾರಿಗಳ ನಿರ್ವಹಣೆ ಹಾಗೂ ಹಣಕಾಸಿನ ಲಭ್ಯತೆ ನೋಡಿಕೊಂಡು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಕಳೆದ ಎರಡು ವರ್ಷದಲ್ಲಿ 1566 ಕಾಮಗಾರಿಗಳಿಗೆ ಸಂಪೂರ್ಣ ಬಾಕಿ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಹಾಗೂ ಹಸ್ತಕ್ಷೇಪ ಮಾಡಿಲ್ಲ ಎಂದು ತಮ್ಮ ಪುತ್ರನ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್  ಅವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಗುತ್ತಿಗೆದಾರರಲ್ಲಿದ್ದ ಗೊಂದಲಗಳನ್ನು ಪರಿಹರಿಸಲಾಗಿದೆ ಎಂದು ಎನ್.ಎಸ್.ಭೋಸರಾಜು ತಿಳಿಸಿದರು.

2024-25 ನೇ ಸಾಲಿನಲ್ಲಿ 9,974.34 ಕೋಟಿ ರೂ.ಮೌಲ್ಯದ 13,913 ಸ್ಪಿಲ್ ಓವರ್ (ಮುಂದುವರೆದ) ಕಾಮಗಾರಿಗಳು ಚಾಲ್ತಿಯಲ್ಲಿದ್ದವು. ಕಾಮಗಾರಿಗಳ ಅಗಾಧತೆ ಹಾಗೂ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದಾರೆ ಎಂದರು.

ಫೆಬ್ರವರಿ 2025ಕ್ಕೆ ಬಾಕಿಯಿದ್ದ ಬಿಲ್ ಹಣ 3,352.06 ಕೋಟಿ ರೂಪಾಯಿ. ಒಟ್ಟಾರೆ ಕೈಗೊಗೊಂಡ ಕಾಮಗಾರಿಗಳು 3,176. ಇದರಲ್ಲಿ 267 ಗುತ್ತಿಗೆದಾರರಿಗೆ ಬಾಕಿಯಿದ್ದ ಸಂಪೂರ್ಣ ಹಣವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಲಭ್ಯವಿದ್ದ ಅನುದಾನದಲ್ಲಿ 2,909 ಕಾಮಗಾರಿಗಳಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಮಾರ್ಚ್ 2025 ರಲ್ಲಿ 2637 (211 ಗುತ್ತಿಗೆದಾರರು ಹಾಗೂ 2426 ಕಾಮಗಾರಿ) ಕೆಲಸಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 660 (603 ಕಾಮಗಾರಿ ಹಾಗೂ 57 ಗುತ್ತಿಗೆದಾರರಿಗೆ) ಬಾಕಿಯಿದ್ದ ಸಂಪೂರ್ಣ ಹಣ ಬಿಡುಗಡೆ ಮಾಡಲಾಗಿದೆ. 1977 (1823 ಕಾಮಗಾರಿ ಹಾಗೂ 154 ಗುತ್ತಿಗೆದಾರರಿಗೆ) ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ. 2637 ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸಣ್ಣ ಗುತ್ತಿಗೆದಾರರಿಗೆ ಹೆಚ್ಚಿನ ಆದ್ಯತೆ

ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹೆಚ್ಚಾಗಿ ಕಾಮಗಾರಿ ಕೈಗೊಳ್ಳುವಂತಹ ಎಂಓಟಿ (ಕೆರೆಗಳ ಆಧುನಿಕರಣ) ಮತ್ತು ಎಪಿಬಿ (ಅಣೆಕಟ್ಟು ಪಿಕ್ಅಪ್) ಯ ಹೆಡ್ ಆಫ್ ಅಕೌಂಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ಎನ್‌.ಎಸ್‌.ಭೋಸರಾಜು ತಿಳಿಸಿದರು.

ಎಂಓಟಿ (ಕೆರೆಗಳ ಅಧುನಿಕರಣ) ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ ಹಂಚಿಕೆ ಮಾಡಲಾದ ಹಣ 100 ಕೋಟಿ ರೂ, ಹೆಚ್ಚುವರಿಯಾಗಿ 210 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಎಪಿಬಿ (ಅಣೆಕಟ್ಟು ಪಿಕ್ಅಪ್) ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ ಹಂಚಿಕೆ ಮಾಡಲಾದ ಹಣ 120 ಕೋಟಿ ರೂ, ಹೆಚ್ಚುವರಿಯಾಗಿ 335 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಎಲ್ಐಎಸ್ - ಏತನೀರಾವರಿ ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ 650 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 252.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪಶ್ಚಿಮವಾಹಿನಿ ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ 100 ಕೋಟಿ ರೂ.ಹಂಚಿಕೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂದರೆ ಒಟ್ಟಾರೆಯಾಗಿ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರಿಗೆ ವಿವಿಧ ಯೋಜನೆಗಳಲ್ಲಿ ಶೇ 55 ಕ್ಕೂ ಹೆಚ್ಚು ಭಾಗ ಮೀಸಲಿಡಲಾಗಿದೆ ಎಂದು ಹೇಳಿದರು.

ಎಂಓಟಿ (ಕೆರೆಗಳ ಆಧುನೀಕರಣ) ಲೆಕ್ಕಶೀರ್ಷಿಕೆಯಲ್ಲಿ ಇರುವ ಎಲ್ಲಾ ಕಾಮಗಾರಿಗಳ/ಗುತ್ತಿಗೆದಾರರಿಗೆ ಡಿಸೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 25 ರಷ್ಟು, ಎಪಿಬಿ – ಅಣೆಕಟ್ಟು ಪಿಕಪ್ ಲೆಕ್ಕಶೀರ್ಷಿಕೆಯಲ್ಲಿ ಇರುವ ಎಲ್ಲಾ ಕಾಮಗಾರಿಗಳ/ಗುತ್ತಿಗೆದಾರರಿಗೆ ಡಿಸೇಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಶೇಡಕಾ 31 ರಷ್ಟು, ಎಸ್ಸಿಪಿ, ಟಿಎಸ್ಪಿ ಹಾಗೂ ನಬಾರ್ಡ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವಂತಹ ಕಾಮಗಾರಿಗಳ ಬಾಕಿ ಬಿಲ್ಲಿನ ಶೇ 100 ರಷ್ಟು ಹಣ ನೀಡಲಾಗಿದೆ. ಯಾವುದೇ ಒಬ್ಬ ಗುತ್ತಿಗೆದಾರ ಕಾಮಗಾರಿಗೆ ಹಣ ಬಿಡುಗಡೆ ಆಗಿಲ್ಲ ಎನ್ನುವುದನ್ನು ತೋರಿಸಲಿ ಎಂದು ಸಚಿವರು ಸವಾಲು ಹಾಕಿದರು.

ಜೇಷ್ಠತೆಯ ಪ್ರಶ್ನೆ ಉದ್ಭವಿಸಲ್ಲ

ಬಾಕಿ ಇರುವ ಎಲ್ಲಾ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಜೇಷ್ಠತೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಜೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದಲ್ಲಿ ಇದುವರೆಗೂ ಲಭ್ಯವಾದಂತಹ ಹಣಕಾಸಿನ ಲಭ್ಯತೆಯಲ್ಲಿ ಕೇವಲ ಕೆಲವೇ ಗುತ್ತಿಗೆದಾರರು/ಕಾಮಗಾರಿಗೆ ಮಾತ್ರ ಹಣ ನೀಡಲು ಸಾಧ್ಯವಾಗುತ್ತಿತ್ತು. ಯಾವುದೇ ತಾರತಮ್ಯ ವಿಲ್ಲದೇ ಪಾರದರ್ಶಕತೆಯಿಂದ ನಮ್ಮನ್ನು ಭೇಟಿಯಾದ ಹಾಗೂ ಭೇಟಿಯಾಗದೇ ಇರುವಂತಹ ಎಲ್ಲಾ ಗುತ್ತಿಗೆದಾರರಿಗೂ ಸಮಾನವಾಗಿ ಹಣ ಬಿಡುಗಡೆ ಆಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅಂತಹ ಘಟನೆಗಳು ಇದ್ದಲ್ಲಿ ಸಕ್ಷಮ ಪ್ರಾಧಿಕಾರದಲ್ಲಿ ದೂರು ಸಲ್ಲಿಸುವಂತೆಯೂ ತಿಳಿಸಲಾಗಿದೆ ಎಂದರು. 

ಯಾರ ಹಸ್ತಕ್ಷೇಪವೂ ಇಲ್ಲ

ನನ್ನ ಇಲಾಖೆಯಲ್ಲಿ ಯಾರದ್ದೂ ಹಸ್ತಕ್ಷೇಪ ಇಲ್ಲ, ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಹಿತರಕ್ಷಣೆಯ ಜೊತೆಯಲ್ಲಿಯೇ ಕಾಮಗಾರಿಗಳು ಸುಗಮವಾಗಿ ಮುಂದುವರೆಯುಂತಹ ಕ್ರಮ ಅಳವಡಿಸಿಕೊಂಡಿದ್ದೇವೆ. ಇದರ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಗುತ್ತಿಗೆದಾರರು, ಸಣ್ಣ ನೀರಾವರಿ ಇಲಾಖೆಯಲ್ಲಿ ಹಣಕಾಸಿನ ಬಿಡುಗಡೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಮಾಹಿತಿ ಇಲ್ಲದೇ ಅನಗತ್ಯ ಹೇಳಿಕೆ ನೀಡುವ ಮೂಲಕ ಗೊಂದಲ ಉಂಟುಮಾಡುವುದನ್ನು ಕೈಬಿಡುವಂತೆಯೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

Tags:    

Similar News