ಸಚಿವ ಪ್ರಿಯಾಂಕ್‌ ಖರ್ಗೆಗೆ ನಿರಂತರ ಬೆದರಿಕೆ ಕರೆ; ಆಡಿಯೊ ಹಂಚಿಕೊಂಡ ಸಚಿವ; ತನಿಖೆಗೆ ಗೃಹ ಸಚಿವರ ಸೂಚನೆ

ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, ಆರ್‌ಎಸ್‌ಎಸ್‌ ಪಸರಿಸುತ್ತಿರುವ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ. ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Update: 2025-10-15 06:42 GMT

ಸಚಿವ ಪ್ರಿಯಾಂಕ್‌ ಖರ್ಗೆ

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸಬೇಕೆಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಸ್ತಾಪದ ಬಳಿಕ ಅವರಿಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳ ಕುರಿತು ಸ್ವತಃ ಸಚಿವರೇ ಆಡಿಯೋ ಸಾಕ್ಷಿ ಬಹಿರಂಗಪಡಿಸಿದ್ದಾರೆ.

ತಮ್ಮ ʼಎಕ್ಸ್ʼ ಖಾತೆಯಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿ ಬೆದರಿಕೆ ಹಾಕಿರುವ ಆಡಿಯೊವನ್ನು ಹಂಚಿಕೊಂಡಿದ್ದು, ಆರ್‌ಎಸ್‌ಎಸ್‌ ಸಂಸ್ಕಾರವನ್ನು ಪ್ರಶ್ನಿಸಿದ್ದಾರೆ. ಕೆಲ ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ನನ್ನ ತಾಯಿ, ಸಹೋದರಿಯರ ಹೆಸರು ಹಿಡಿದು ತುಚ್ಚವಾಗಿ ನಿಂದಿಸುವುದನ್ನು ಶಾಖೆಗಳಲ್ಲಿ ನೀಡುವ ಸಂಸ್ಕಾರವೇ ಎಂದು ಕಿಡಿಕಾರಿದ್ದಾರೆ.

ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, ಆರ್‌ಎಸ್‌ಎಸ್‌ ಪಸರಿಸುತ್ತಿರುವ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ. ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಧಾನಿ ಮೋದಿ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ತಾಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ಬಿಜೆಪಿ ನಾಯಕರು ಒಪ್ಪುತ್ತಾರೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಕಾರ್ಕಳ ಸುನೀಲ್ ಕುಮಾರ್, ಪರಿಷತ್ ಸದಸ್ಯರಾದ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಆರ್‌ಎಸ್‌ಎಸ್‌ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

ಇಂತಹ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆದರಿಕೆ ಕರೆಗಳ ತನಿಖೆ

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾರು ಬೆದರಿಕೆ ಹಾಕಿದ್ದಾರೆ, ಎಲ್ಲಿಂದ ಕರೆಗಳು ಬರುತ್ತಿವೆ ಎಂಬುದನ್ನು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸುವ ವಿಚಾರವಾಗಿ ಸಚಿವರು ಅಭಿಪ್ರಾಯ ಹೇಳಿರಬಹುದು, ಆದರೆ, ಸರ್ಕಾರದ ತೀರ್ಮಾನವಲ್ಲ. ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲವನ್ನು ಪರಿಶೀಲನೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ಧಾರೆ. ಬೆದರಿಕೆ ಕರೆಗಳನ್ನು ಪತ್ತೆ ಹಚ್ಚುವುದು ಕೆಲ ಸಂದರ್ಭದಲ್ಲಿ ಕಷ್ಟ ಆಗಲಿದೆ, ಆದರೂ ಅದನ್ನು ಮಾಡಲೇಬೇಕಾಗುತ್ತದೆ ಎಂದಿದ್ದಾರೆ.

ಸಚಿವ ಖರ್ಗೆಗೆ ಬೆಂಬಲ

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಬೆಂಬಲ ಸೂಚಿಸುತ್ತಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸಕ್ಕೆ ಬೆಳಿಗ್ಗೆಯಿಂದಲೇ ಮುಖಂಡರು, ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರದೊಂದಿಗೆ ಬಂದು ಧೈರ್ಯ ತುಂಬುತ್ತಿದ್ದಾರೆ. ಇದೇ ವೇಳೆ ಕಾರ್ಯಕರ್ತರು ಆರ್‌ಎಸ್‌ಎಸ್‌ ವಿರುದ್ಧ ಘೋಷಣೆ ಕೂಗಿದ್ದಾರೆ.

ನನ್ನ ಬಳಿ 20 ವಿಡಿಯೊ ಇವೆ

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನಿರಂತರವಾಗಿ ಬೆದರಿಕೆ ಕಡೆಗಳು ಬರುತ್ತಿವೆ. ಇದು ಆರ್‌ಎಸ್‌ಎಸ್‌ ಸಂಸ್ಕೃತಿ ತೋರಿಸುತ್ತದೆ. ನೀಚವಾಗಿ ನಿಂದಿಸಿ ಬೆದರಿಕೆ ಹಾಕಿರುವ 20 ವಿಡಿಯೊಗಳು ನನ್ನ ಬಳಿ ಇವೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಎಡಿಟ್ ಮಾಡದ ವಿಡಿಯೊ ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿಯವರು ದಾಖಲೆ ಕೇಳಿದರೂ ಬಿಡುಗಡೆ ಮಾಡುತ್ತೇನೆ. ದೂರು ಕೊಡುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಅವರ ಜೊತೆಯೂ ಮಾತನಾಡುತ್ತೇನೆ. ದೂರು ಕೊಡುವುದು ಸುಲಭ, ಬೆದರಿಕೆ ಹಾಕಿದ ವ್ಯಕ್ತಿಗೆ ಶಿಕ್ಷೆ ಆಗಲಿದೆ. ಆದರೆ, ಆ ಮನಸ್ಥಿತಿ ತುಂಬಿದ ಆರ್‌ಎಸ್‌ಎಸ್‌ ಗೆ ಏನು ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.

ಈಗ ನನ್ನ ಫೋನ್ ಸ್ವಿಚ್ ಆಫ್ ಮಾಡಿದ್ದೇನೆ, ಫೋನ್ ಸ್ವಿಚ್ ಆಫ್ ಮಾಡೋದೇ ಪರಿಹಾರ ಅಲ್ಲ, ಇನ್ನೂ ಕೆಟ್ಟದಾಗಿ ನನ್ನನ್ನು ಬೈದಿದ್ದಾರೆ. ಆದರೆ, ನನ್ನ ಮರ್ಯಾದೆ ಉಳಿಸಿಕೊಳ್ಳಲು ಅದನ್ನ ರಿಲೀಸ್ ಮಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Tags:    

Similar News