ಮೈಕ್ರೋ ಫೈನಾನ್ಸ್ ಕಿರುಕುಳ | ಮನೆಬಿಟ್ಟ ಒಂದೇ ಊರಿನ ಹದಿನೈದು ಮಹಿಳೆಯರು!
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಒತ್ತಡಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆ, ಅಕ್ರಮಗಳಿಗೆ ಕಡಿವಾಣ ಹಾಕಲು ಮಹತ್ವದ ಸಭೆಗಳನ್ನು ನಡೆಸುತ್ತಿದೆ.
ಮತ್ತೊಂದು ಕಡೆ ಹಣಕಾಸು ಸಂಸ್ಥೆಗಳ ಕಿರುಕುಳ ತಾಳದೆ ಮಹಿಳೆಯರು ಊರು ತೊರೆದು ಗುಳೇ ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಒಂದು ಕಡೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರೆ, ಮತ್ತೊಂದು ಕಡೆ ಬಿಗಿ ಕಾನೂನು ರೂಪಿಸುವ ನಿಟ್ಟಿನಲ್ಲಿ ಬಿರುಸಿನ ಸರಣಿ ಸಭೆಗಳು ರಾಜಧಾನಿಯಲ್ಲಿ ನಡೆಯುತ್ತಿರುವಾಗಲೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹದಿನೈದಕ್ಕೂ ಹೆಚ್ಚು ಮಹಿಳೆಯರು ಕಿರುಕುಳದ ಭೀತಿಯಲ್ಲಿ ಮನೆಬಿಟ್ಟು ಹೋಗಿರುವ ಪ್ರಕರಣ ವರದಿಯಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಯ ಕಿರುಕುಳ ತಾಳದೆ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಭೀಮ್ನಗರದಲ್ಲಿ ಅರ್ಧದಷ್ಟು ಮನೆಗಳ ಗೃಹಿಣಿಯರು ಮನೆಬಿಟ್ಟು ಹೋಗಿದ್ದಾರೆ. ಫೈನಾನ್ಸ್ ಕಂಪನಿಯ ಕಾಟ ತಾಳದೆ ಹದಿನೈದಕ್ಕೂ ಹೆಚ್ಚು ಮಹಿಳೆಯರು ಊರು ಬಿಟ್ಟು ಹೋಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಹಿಳಾ ಸಂಘದ ಸದಸ್ಯರೇ ಟಾರ್ಗೆಟ್
ಗ್ರಾಮೀಣ ಭಾಗದ ಮಹಿಳಾ ಸಂಘಗಳ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಕೂಲಿಕಾರ್ಮಿಕ ಬಡ ಹೆಣ್ಣುಮಕ್ಕಳಿಗೆ ಮಹಿಳಾ ಸಂಘದ ಹೆಸರಿನಲ್ಲಿ ಸಾಲ ನೀಡಿ, ಮೀಟರ್ ಬಡ್ಡಿ ವಿಧಿಸಿ ವಸೂಲಿಗೆ ಇಳಿಯುತ್ತವೆ. ಸ್ಥಳೀಯ ಮಹಿಳೆಯರಿಗೆ ಸಾಲ ವಸೂಲಿ ಹೊಣೆ ವಹಿಸುವ ಕಂಪನಿಗಳು, ಕ್ರಮೇಣ ತಮ್ಮದೇ ಸಿಬ್ಬಂದಿ ಎಂದು ವಸೂಲಿ ಏಜೆಂಟರನ್ನು, ಗೂಂಡಾಗಳನ್ನು ಕಳಿಸಿ ಕಿರುಕುಳ ನೀಡುತ್ತಿವೆ. ಇಂತಹ ಕಿರುಕುಳದಿಂದ ಬೇಸತ್ತು ಮಹಿಳೆಯರು ಮನೆಬಿಟ್ಟು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಾಂದಿ ಗ್ರಾಮದಲ್ಲಿ ಕೂಲಿ ಮಾಡಿ, ಕಾಫಿ ತೋಟಗಳಲ್ಲಿ ಕೆಲಸ ಮಾಡಿ ಜೀವ ನಡೆಸುವ ಬಡ ಮಹಿಳೆಯರು ಮಕ್ಕಳ ಮದುವೆ, ಮನೆ ನಿರ್ಮಾಣ, ಗೃಹೋಪಯೋಗಿ ವಸ್ತುಗಳ ಖರೀದಿ ಮುಂತಾದ ಕಾರಣಗಳಿಂದಾಗಿ ಸಾಲ ಪಡೆದಿದ್ದರು. ಆದರೆ, ಭಾರೀ ಬಡ್ಡಿ ತೆರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರೆ, ಫೈನಾನ್ಸ್ ಕಂಪನಿ ಅವರ ಕಷ್ಟ ಕೇಳದೆ ಸಾಲ ವಸೂಲಿಗೆ ಏಜೆಂಟರನ್ನು ಕಳಿಸಿ ಸಾಲ ಪಡೆದ ಮಹಿಳೆಯರು ಮಾತ್ರವಲ್ಲದೆ, ಸಾಲ ವಸೂಲಿ ಹೊಣೆ ಹೊರಿಸಿದ ಸಂಘಗಳ ಮಹಿಳೆಯರಿಗೂ ಕಿರುಕುಳ ನೀಡುತ್ತಿವೆ. ಈ ಕಿರುಕುಳದಿಂದ ತಪ್ಪಿಸಿಕೊಳ್ಳಲು ಹದಿನೈದಕ್ಕೂ ಹೆಚ್ಚು ಮನೆಗಳ ಯಜಮಾನತಿಯರೇ ಮನೆಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.